ಈ ನ್ಯೂಸ್ ಆ್ಯಂಕರ್ ಮನೆಯಲ್ಲಿ ಅಂದು ಟಿವಿ ಇರ್ಲಿಲ್ಲ…!

Date:

”ಅಮ್ಮನ ಆಸೆಯನ್ನು ಈಡೇರಿಸಿದ ತೃಪ್ತಿ ಇದೆ. ಆದ್ರೆ, ನಾನಿನ್ನೂ ಏನೂ ಸಾಧನೆ ಮಾಡಿಲ್ಲ. ನಾಲ್ಕು ಜನ ಗುರುತಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಬಡ, ಬುದ್ಧಿಮಾಂದ್ಯ ಮಕ್ಕಳಿಗೆ ನೆರವಾಗಬೇಕು.’’

ಹೀಗೆ ಮಾತಿಗಿಳಿದವರು ಬಿಟಿವಿಯ ನಿರೂಪಕಿ ಶ್ರುತಿಗೌಡ. ಇವರು ಕಡು ಬಡತನದಲ್ಲಿ ಹುಟ್ಟಿಬೆಳೆದವರು. ಬಡತನವನ್ನು ಮೀರಿ ಬದುಕು ಗೆಲ್ಲಲು ನೆರವಾಗಿದ್ದು ಮಾತೃಭಾಷೆ ಕನ್ನಡದ ಮೇಲಿನ ಹಿಡಿತ.


ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಲಿಬೆಲೆ ಎಂಬ ಹಳ್ಳಿ ಶ್ರುತಿ ಅವರ ಹುಟ್ಟೂರು. ತಂದೆ ನಾಗರಾಜ್, ತಾಯಿ ರತ್ನಮ್ಮ, ಅಣ್ಣ ಸುಂದರ್. ನಾಲ್ಕು ಜನರ ಪುಟ್ಟ ಕುಟುಂಬ ಇವರದ್ದು. ಹುಟ್ಟಿ ಬೆಳೆದಿದ್ದೆಲ್ಲಾ ಗುಡಿಸಲಲ್ಲಿ. ಅಪ್ಪ ಕೂಲಿ ಹಾಗೂ ಅಮ್ಮ ಶಾಲೆಯಲ್ಲಿ ಅಡುಗೆ ಮಾಡ್ತಿದ್ರು. ಸ್ವಲ್ಪ ಜಮೀನು ಇತ್ತು. ಮನೆಯಲ್ಲಿ ಟಿವಿ ಇರಲಿಲ್ಲ. ಪಕ್ಕದ ಮನೆಗೆ ಹೋಗಿ ಟಿವಿ ನೋಡ್ತಿದ್ರು. ಕಷ್ಟದಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿಕೊಂಡ್ರು.


ಇವರ ಅಮ್ಮನಿಗೆ 8ನೇ ತರಗತಿಯಲ್ಲಿರುವಾಗಲೇ ಮದುವೆ ಮಾಡಿದ್ರಂತೆ. ಆಗಿನ ಕಾಲದಲ್ಲಿ ಹೆಚ್ಚು ಓದಲು ಸಾಧ್ಯವಾಗಿರ್ಲಿಲ್ಲ. ತನ್ನ ಪಾಡು ತನ್ನ ಮಗಳದ್ದಾಗಬಾರದು ಅಂತ ಮಗಳಿಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ತ್ಯಾಗಮಯಿ. ಮನೆಯ ಕಷ್ಟಗಳನ್ನು ಸಹಿಸಲಾಗದೆ ಎಷ್ಟೋ ಸಲ ಆತ್ಮಹತ್ಯೆಗೂ ಮನಸ್ಸು ಮಾಡಿದ್ದ ತಾಯಿ ಮಕ್ಕಳಿಗಾಗಿ ಬದುಕಿದ್ರು…!

ತಾಯಿಯ ಆಸೆಯನ್ನು ಶ್ರುತಿ ಮತ್ತವರ ಅಣ್ಣ ಸುಂದರ್ ( ಇಂಜಿನಿಯರ್ ಆಗಿದ್ದಾರೆ) ಈಡೇರಿಸಿದ್ದಾರೆ. ಮಕ್ಕಳ ಯಶಸ್ಸನ್ನು ಕಂಡು ತಾಯಿ ಖುಷಿ ಖುಷಿಯಾಗಿದ್ದಾರೆ.

ಕನ್ನಡ ಭಾಷೆ ಹಾಗೂ ಒಳ್ಳೆಯ ದನಿಯೇ ಶ್ರುತಿ ಗೌಡ ಅವರ ಸಿರಿ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಹುಲಿಬೆಲೆಯಲ್ಲಿ, ಪ್ರೌಢಶಿಕ್ಷಣವನ್ನು ಕೃಷ್ಣಯ್ಯ ದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ರು. ಚಿಕ್ಕಂದಿನಿಂದಲೂ ಮಾತುಗಾರಿಕೆ ಇವರಿಗೆ ದೇವರುಕೊಟ್ಟ ವರ. ಎಷ್ಟು ಹೊತ್ತು ಬೇಕಾದ್ರು, ಯಾವ ವಿಚಾರದ ಬಗ್ಗೆ ಬೇಕಾದ್ರು ಮಾತಡಬಲ್ಲರು.

ಹೈಸ್ಕೂಲ್ ನಲ್ಲಿ ಮುಖ್ಯೋಪಧ್ಯಾಯ ಚಾಮರಾಜ್ ಹಾಗೂ ಕ್ಲಾಸ್ ಟೀಚರ್ ಆಗಿದ್ದ ಎಚ್.ಬಿ ಕುಳ್ಳೇಗೌಡ ಶ್ರುತಿಗೆ ಪ್ರೋತ್ಸಾಹ ನೀಡಿದ್ರು. ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸ್ತಿದ್ರು. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಡೆಸಿಕೊಡ್ತಿದ್ದುದು ಇವರೇ.


ಎಸ್‍ಎಸ್‍ಎಲ್‍ಸಿ ಬಳಿಕ ಕನಕಪುರ ರೂರಲ್ ಕಾಲೇಜಿಗೆ ಪಿಯುಸಿಗೆ ಸೇರಿದ್ರು. ಇಲ್ಲಿ ಇವರು ಆಯ್ಕೆಮಾಡಿಕೊಂಡಿದ್ದು ವಾಣಿಜ್ಯಶಾಸ್ತ್ರ. ಹೈಸ್ಕೂಲ್ ತನಕ ಕನ್ನಡ ಮೀಡಿಯಂನಲ್ಲಿ ಓದಿದ್ದ ಇವರಿಗೆ ತಕ್ಷಣಕ್ಕೆ ಇಂಗ್ಲಿಷ್ ಮೀಡಿಯಂ ಕಷ್ಟವಾಯ್ತು. ಬರುಬರುತ್ತಾ ಹೊಂದಿಕೊಂಡ್ರು.


ಪ್ರೌಢಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸ್ತಿದ್ದ ಇವರನ್ನು ಪಿಯು ಉಪನ್ಯಾಸಕರೊಬ್ಬರು ಗುರುತಿಸಿದ್ರು. ತಮ್ಮ ಕಾಲೇಜಿಗೆ ಸೇರಿದ್ದ ಶ್ರುತಿ ಅವರನ್ನು ನೋಡಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಡೆಸಿಕೊಡೋ ಅವಕಾಶವನ್ನು ಶ್ರುತಿ ಅವರಿಗೆ ಕೊಟ್ರು. ಹೀಗೆ ನಿರೂಪಕಿ ಆಗಿ ಶ್ರುತಿ ಅವರ ಜರ್ನಿ ಗೊತ್ತೋ ಗೊತ್ತಿಲ್ಲದಂತೆ ಆರಂಭವಾಗಿತ್ತು.


ಬೆಂಗಳೂರಿನ ಬಸವನಗುಡಿ ಕಾಲೇಜಿನಲ್ಲಿ ರಾಜ್ಯಮಟ್ಟದ ಆ್ಯಂಕರಿಂಗ್ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕನಕಪುರ ರೂರಲ್ ಕಾಲೇಜನ್ನು ಪ್ರತಿನಿಧಿಸಿದ್ದು ಶ್ರುತಿಗೌಡ. 100ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಆ ಕಾಂಪಿಟೇಶನ್ ನಲ್ಲಿ ಶ್ರುತಿ ಪ್ರಥಮ ಬಹುಮಾನ ಪಡೆದಿದ್ರು. ಆಗ ತೀರ್ಪುಗಾರರೊಬ್ಬರು ನಿನಗೆ ಪತ್ರಿಕೋದ್ಯಮದಲ್ಲಿ ಒಳ್ಳೆಯ ಭವಿಷ್ಯವಿದೆ. ಜರ್ನಲಿಸಂ ಮಾಡು ಅಂತ ಸಲಹೆ ನೀಡಿದ್ದರು.


ಪಿಯುಸಿ ಬಳಿಕ ಕನಕಪುರ ರೂರಲ್ ಕಾಲೇಜಿನಲ್ಲಿಯೇ ಬಿಬಿಎಂ ಪದವಿ ಮಾಡಿದ್ರು. ಉಪನ್ಯಾಸಕಿ ಸೀತಾರತ್ನ ಹಾಗೂ ಉಪನ್ಯಾಸಕ ತಿಮ್ಮೆಗೌಡ ಅವರು ತುಂಬಾ ಸಪೋರ್ಟ್ ಮಾಡಿದ್ರು. ಈ ವೇಳೆಯಲ್ಲೂ ಕಾಲೇಜಿನ ಕಾರ್ಯಕ್ರಮಗಳ ನಿರೂಪಣೆ ಮಾಡ್ತಿದ್ದುದು ಶ್ರುತಿ ಅವರೇ.


ಸೆಕೆಂಡ್ ಈಯರ್ ಡಿಗ್ರಿಯಲ್ಲಿರುವಾಗ ಮನಗೆ ಟಿವಿ ಬಂತು. ಉದಯದಲ್ಲಿ ಬರ್ತಿದ್ದ ‘ಹರಟೆ’ ಕಾರ್ಯಕ್ರಮವನ್ನು ತಪ್ಪದೇ ನೋಡ್ತಿದ್ದ ಶ್ರುತಿ ಅವರ ತಾಯಿ, ‘ನೀನು ಸುಧಾ ಬರಗೂರರಂತೆ ಆಗಬೇಕು. ಟಿವಿಯಲ್ಲಿ ಬರಬೇಕು’ ಎನ್ನುತ್ತಿದ್ದರಂತೆ. ಮಗಳು ನಿರೂಪಕಿ ಆಗುವ ಕನಸನ್ನು ತಾಯಿ ಕಂಡಿದ್ದರು.


ಒಮ್ಮೆ ಕಸ್ತೂರಿ ಚಾನಲ್ ನೋಡ್ತಿರುವಾಗ ನಿರೂಪಕರು ಬೇಕಾಗಿದ್ದಾರೆ ಎಂಬ ಜಾಹಿರಾತು ಶ್ರುತಿ ಅವರ ಕಣ್ಣಿಗೆ ಬಿತ್ತು. ಆಗ ಡಿಗ್ರಿ ಎಕ್ಸಾಮ್ ಮುಗಿದಿತ್ತಷ್ಟೇ. ಬೆಂಗಳೂರು ಬಸ್ ಹತ್ತಿದ್ರು. ಕಾಲೇಜು ದಿನಗಳಲ್ಲಿ ಒಂದೆರಡು ಬಾರಿ ಉಪನ್ಯಾಸಕರ ಜೊತೆ ಬೆಂಗಳೂರಿಗೆ ಬಂದು ಹೋಗಿದ್ದು ಬಿಟ್ಟರೆ ಒಂಟಿಯಾಗಿ ಬೆಂಗಳೂರಿಗೆ ಬಂದಿದ್ದು ಅದೇ ಮೊದಲು.


ಮೆಜಸ್ಟಿಕ್ ಗೆ ಬಂದಿಳಿದು ಮಂಡ್ಯದಿಂದ ಬರುತ್ತಿದ್ದ ಅಣ್ಣನಿಗೆ ಕಾದು, ಅವರ ಜೊತೆಯಲ್ಲಿ ಕಸ್ತೂರಿ ಆಫೀಸ್ ಗೆ ಹೋದ್ರು. ಇವರಂತೆ ಕೆಲಸ ಹುಡ್ಕೊಂಡು ಬಂದಿದ್ದ ಸುಮಾರು 50 ಮಂದಿ ಅಲ್ಲಿದ್ರು. ಅವರನ್ನು ನೋಡಿ ಶ್ರುತಿಗೆ ಭಯ ಆಗಿತ್ತು…! ಇವರ ಜೊತೆ ನಾನು ಕಾಂಪೀಟ್ ಮಾಡೋಕೆ ಆಗುತ್ತ ಅಂತ ಅಣ್ಣನತ್ರ ಹೇಳಿಕೊಂಡ್ರು. ನೀನು ಚೆನ್ನಾಗಿ ಮಾತಾಡ್ತಿ, ಪರೀಕ್ಷೆ ಬರೀತಿ ನಿಂಗೆ ಆಗೇ ಆಗುತ್ತೆ ಅಂತ ಅವರು ತಂಗಿಗೆ ಪ್ರೋತ್ಸಾಹ ನೀಡಿದ್ರು.


ಪರೀಕ್ಷೆ ಬರೆದ ಎಲ್ಲರಿಗೂ ಮತ್ತೆ ಫೋನ್ ಮಾಡಿ ಹೇಳ್ತೀವಿ ಅಂತ ಹೇಳಿಕಳುಹಿಸಿದ್ರು. ಆದ್ರೆ, ಶ್ರುತಿ ಅವರಿಗೆ ರೆಸ್ಯೂಮ್ ತೆಗೆದುಕೊಂಡು ಒಳಗೆ ಬನ್ನಿ ಅಂತ ಪ್ರೊಡಕ್ಷನ್ ಚೀಫ್ ಆಗಿದ್ದ ಪ್ರವೀಡ್ ಗೌಡರ್ ಕರೆದ್ರು. ಸ್ಕ್ರೀನ್ ಟೆಸ್ಟ್ ಗೆ ರೆಡಿ ಆಗಲು ಹೇಳಿದ್ರು. ಶ್ರುತಿ ಫಸ್ಟ್ ಟೈಮ್ ಮೇಕಪ್ ಮಾಡಿಕೊಂಡು ಕ್ಯಾಮೆರ ಮುಂದೆ ಹಾಜರಾದ್ರು…!

ಅವತ್ತು ಮೇಕಪ್ ಮಾಡಿದ್ದ ಮಂಜುಳಾ ಅವರು ನಿಮಗೆ ಕೆಲಸ ಆಗಬಹುದು, ಧೈರ್ಯದಿಂದ ಅಟೆಂಡ್ ಮಾಡಿ ಅಂತ ಬೆನ್ನುತಟ್ಟಿ ಕಳುಹಿಸಿಕೊಟ್ಟಿದ್ರು. ಸ್ಕ್ರೀನ್ ಟೆಸ್ಟ್‍ನಲ್ಲಿ ಪಾಸ್ ಆದ್ರು. ಪ್ರಮುಖ ಹುದ್ದೆಯಲ್ಲಿದ್ದ ಆನಂದ್, ಮನೋಜ್, ದಿವಾಕರ್ ಇಂಟರ್ ವ್ಯೂ ಮಾಡಿದ್ರು. ಶಾಲಾ-ಕಾಲೇಜು ದಿನಗಳ ಸರ್ಟಿಫಿಕೇಟ್ ತೋರಿಸಿದ ಶ್ರುತಿಯನ್ನು ನೋಡಿ, ನಗೆಬೀರಿ ಇವೆಲ್ಲ ಏನು ಬೇಡ ನಾಳೆಯಿಂದಲೇ ಕೆಲಸಕ್ಕೆ ಬನ್ನಿ ಅಂತ ಆಹ್ವಾನಿಸಿದ್ರು.


ಹೀಗೆ 2013ರ ಜುಲೈನಿಂದ ಕಸ್ತೂರಿ ವಾಹಿನಿ ಮೂಲಕ ಮಾಧ್ಯಮ ರಂಗ ಪ್ರವೇಶಿಸಿದ್ರು. ಆರಂಭದ ದಿನಗಳಲ್ಲಿ ಸ್ವಲ್ಪ ಸಮಯ ಡೆಸ್ಕ್ ನಲ್ಲಿ ಕೆಲಸ ಮಾಡಿದ್ರು. ಬಳಿಕ ನ್ಯೂಸ್ ಓದುವ ಅವಕಾಶ ಸಿಕ್ತು. ಆ ದಿನ ಇವರ ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ಊರವರೆಲ್ಲಾ ಮನೆಯಲ್ಲಿ ತುಂಬಿಕೊಂಡಿದ್ರಂತೆ. ಅಮ್ಮ ಫೋನ್ ಮಾಡಿ ವಿಶ್ ಮಾಡಿದ್ರು.


ಒಂದು ದಿನ ನ್ಯೂಸ್ ಓದುವಾಗ ಬ್ರೇಕಿಂಗ್ ನ್ಯೂಸ್ ಬಂತು. ಅದನ್ನು ನಿಭಾಯಿಸಲು ಸ್ವಲ್ಪ ಗಲಿಬಿಲಿಗೆ ಒಳಗಾದ್ರು. ಅಲ್ಲಿದ್ದ ಸೀನಿಯರ್ ಒಬ್ಬರು, ಹಳ್ಳಿಯಿಂದ ಯಾಕ್ ಬರ್ತೀರ ಸುಮ್ನೆ ಅಂತ ಬೈದು, ತಾವು ನ್ಯೂಸ್ ಮುಂದುವರೆಸಿದ್ರಂತೆ…! ಆ ದಿನ ತುಂಬಾ ನೊಂದುಕೊಂಡಿದ್ದ ಶ್ರುತಿ, ಹಠ ಕಟ್ಟಿ ಹಗಲಿರುಳು ಪ್ರಾಕ್ಟಿಸ್ ಮಾಡಲಾರಂಭಿಸಿದ್ರು.


ಆ್ಯಂಕರ್ ವಿಭಾಗದ ಮುಖ್ಯಸ್ಥರಾಗಿದ್ದ ಗಜಾನನ ಹೆಗಡೆಯವರು ಪ್ರೋತ್ಸಾಹದಿಂದ ಶ್ರುತಿ ಅವರಿಗೆ ಒಳ್ಳೊಳ್ಳೆಯ ಅವಕಾಶ ಸಿಕ್ತು. ಗಜಾನನ ಹೆಗಡೆಯವರು ತಮ್ಮ ಮನೆಯಲ್ಲೂ ಶ್ರುತಿ ಅವರನ್ನು ತನ್ನ ಹಿರಿಯ ಮಗಳು ಎಂದೇ ಪರಿಚಯಿಸಿದ್ದಾರಂತೆ. ಶ್ರುತಿ ಅವರು ಗಜಾನನ ಹೆಗಡೆ ಅವರ ಮೇಲೆ ಅಪಾರ ಗೌರವ, ಪ್ರೀತಿ ಇಟ್ಕೊಂಡಿದ್ದಾರೆ.


ಗಜಾನನ ಹೆಗಡೆಯವರು ತಮ್ಮ ಬುಲೆಟಿನ್ ಗಳನ್ನೂ ಸಹ ಶ್ರುತಿಗೆ ಬಿಟ್ಟುಕೊಟ್ಟು ಪ್ರೋತ್ಸಾಹಿಸಿದ್ರು. ಹಠದಿಂದ ಬದುಕಿದ್ರೆ, ಛಲವಿದ್ರೆ ಸಕ್ಸಸ್ ಸಿಗುತ್ತೆ ಎನ್ನುವ ಶ್ರುತಿ ಅವರನ್ನು ಹಿಂದೆ ಹಳ್ಳಿಯಿಂದ ಯಾಕ್ ಬರ್ತೀರಿ ಎಂದು ಅವಮಾನಿಸಿ, ಅಳಿಸಿದ್ದ ಸೀನಿಯರ್ ನಿರೂಪಕರು ಕೆಲವೇ ದಿನಗಳಲ್ಲಿ ಸಂಸ್ಥೆಯನ್ನು ಬಿಡಬೇಕಾಯ್ತು…! ಹೋಗುವಾಗ ಅವರೇ ಶ್ರುತಿಗೆ ವಿಶ್ ಮಾಡಿ ಹೋಗಿದ್ರು ಎಂದ್ರೆ ನೀವೇ ಲೆಕ್ಕಹಾಕಿ, ಅದಾಗಲೇ ಶ್ರುತಿ ಗೆದ್ದಿದ್ರು…!


ನಂತರ ಮನೋಜ್, ಆನಂದ್, ದಿವಾಕರ್ ಅವರು ಪ್ರಜಾಟಿವಿ ಮುಖ್ಯಸ್ಥರಾಗಿ ಹೋದರು. ಗಜಾನನ ಹೆಗಡೆಯವರ ಪಯಣ ಕೂಡ ಅತ್ತ ಸಾಗಿತ್ತು. ಶ್ರುತಿ ಅವರಿಗೂ ಅವರುಗಳು ಆಮಂತ್ರಣಕೊಟ್ಟರು. ಶ್ರುತಿ ಪ್ರಜಾ ಆಹ್ವಾನ ಸ್ವಾಗತಿಸಿದ್ರು.
ಪ್ರಜಾ ಟಿವಿಗೆ ಸೀನಿಯರ್ ಆ್ಯಂಕರ್ ಆಗಿ ಹೋದ ಶ್ರುತಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು, ಡಿಸ್ಕಷನ್ ಗಳನ್ನು ನಡೆಸಿಕೊಟ್ಟರು.


2016ರಲ್ಲಿ ಅಂದು ಬಿಟಿವಿಯಲ್ಲಿದ್ದ ಚಂದನ್ ಶರ್ಮಾ ಶ್ರುತಿ ಅವರಿಗೆ ಬಿಟಿವಿಗೆ ಬರುವಂತೆ ಆಫರ್ ಮಾಡಿದ್ರು. ಶ್ರುತಿ ಪಯಣ ಬಿಟಿವಿಯತ್ತ ಸಾಗಿತು. ಎರಡು ತಿಂಗಳಕಾಲದ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಬಳಿಕ ಬಿಟಿವಿಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗತೊಡಗಿದವು.


ಭೂಮಾಫಿಯಾ ಕುರಿತ ಸುದ್ದಿಗೆ ಸಂಬಂಧಿಸಿದಂತೆ ಪ್ರಭಾವಿಯೊಬ್ಬರನ್ನು ಶ್ರುತಿ ಲೈವ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ರು. ಕೇಸ್ ಕೂಡ ಆಗಿತ್ತು…! ಶ್ರುತಿಯ ಧೈರ್ಯ, ನ್ಯೂಸ್ ರೀಡಿಂಗ್ ಕ್ಯಪಾಸಿಟಿಗೆ ಎಮ್‍ಡಿ ಕುಮಾರ್ ಅವರೇ ಸ್ವೀಟ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅನಿವಾರ್ಯವಿದ್ದಾಗ ಇಡೀದಿನ ಒಬ್ಬರೇ ನ್ಯೂಸ್, ಡಿಸ್ಕಷನ್ ಎಲ್ಲವನ್ನು ಶ್ರುತಿ ನಡೆಸಿಕೊಟ್ಟಿದ್ದಾರೆ. ಇವರಂತಹ ಒಬ್ಬರು ಸಂಸ್ಥೆಯಲ್ಲಿದ್ದರೆ ಸಾಕು ಎಂಬ ಪಾಸಿಟೀವ್ ಅಭಿಪ್ರಾಯ ಮಾಧ್ಯಮ ವಲಯದಲ್ಲಿದೆ.


ಕಾಲೇಜು ದಿನಗಳಲ್ಲಿ ಅಮ್ಮನ ಜೊತೆ ಹೊಲದಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು. ಬಡತನದ ಆ ದಿನಗಳಲ್ಲಿ ನೆಂಟರಿಷ್ಟರು, ಬಂಧುಬಳಗದವರು ಯಾರು ಸರಿಯಾಗಿ ಮಾತಾಡಿಸ್ತಿರ್ಲಿಲ್ಲ. ಇವತ್ತು ಒಂದೊಳ್ಳೆ ಸ್ಥಾನದಲ್ಲಿದ್ದಾರೆ. ಈಗ ಎಲ್ಲರೂ ಇವರ ಬಗ್ಗೆ ಹೆಮ್ಮೆ ಪಡ್ತಾರೆ. ಎಲ್ಲರೂ ಮಾತಾಡ್ತಾರೆ.


ತನಗೆ ಅಣ್ಣ ಎರಡನೇ ಅಮ್ಮ ಎನ್ನುವ ಶ್ರುತಿ ತನ್ನ ಯಶಸ್ಸಿಗೆ ಬೆನ್ನೆಲುಬಾಗಿ ನಿಂತ ಅಮ್ಮ, ಅಣ್ಣ, ಉಪನ್ಯಾಸಕರು, ಮಾಧ್ಯಮ ಕ್ಷೇತ್ರದ ಹಿರಿಯರನ್ನು ಸದಾ ಸ್ಮರಿಸುತ್ತಾರೆ. ಇವರು ಸಾಧನೆಯ ಉತ್ತುಂಗವನ್ನೇರಲಿ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...