ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರಕ್ಕೆ ಶ್ರೀಲಂಕಾ ತತ್ತರಿಸಿದೆ. ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ರೋಹಿತ್ ಶರ್ಮಾ ಇಂದು ಇಂದೋರ್ ನಲ್ಲಿ ನಡೆಯುತ್ತಿರೋ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ (118) ಸಿಡಿಸಿ ಲಂಕಾ ಬೌಲರ್ ಗಳ ಬೆವರಿಳಿಸಿದ್ದಾರೆ. ಶ್ರೀಲಂಕಾ ನಿಗಧಿತ 20 ಓವರ್ ಗಳಲ್ಲಿ 261ರನ್ ಗಳ ಗುರಿ ಬೆನ್ನಟ್ಟ ಬೇಕಿದೆ.
ಟಾಸ್ ಗೆದ್ದ ಶ್ರೀಲಂಕಾ ಭಾರತಕ್ಕೆ ಬ್ಯಾಟಿಂಗ್ ಮಾಡುವಂತೆ ಆಮಂತ್ರಿಸಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಕಳೆದ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದ ರಾಹುಲ್ ಈ ಪಂದ್ಯದಲ್ಲೂ ಅರ್ಧಶತಕದೊಂದಿಗೆ ಗಮನ ಸೆಳೆದ್ರು.
ಈ ಜೋಡಿ 165 ರನ್ ಗಳ ಜೊತೆಯಾಟವಾಡಿತು. ರೋಹಿತ್ ಶರ್ಮಾ 43 ಎಸೆತಗಳಲ್ಲಿ 118 ರನ್ ಗಳಿಸಿದ್ರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ ಗಳಿದ್ದವು.
ರಾಹುಲ್ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ಗಳ ಮೂಲಕ 89 ರನ್ ಗಳಿಸಿ ಫೆವಿಲಿಯನ್ ಸೇರಿದ್ರು. ರೋಹಿತ್ ಔಟ್ ಆದ ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2 ಸಿಕ್ಸರ್, 2 ಬೌಂಡರಿ ಸಹಿತ 28 ರನ್ ಗಳ ಕೊಡುಗೆ ನೀಡಿದ್ರು. ಹಾರ್ದಿಕ್ ಪಾಂಡ್ಯ 3 ಎಸೆತಗಳಲ್ಲಿ 1 ಸಿಕ್ಸರ್. 1 ಬೌಂಡರಿ ಸಹಿತ 10 ರನ್ ಬಾರಿಸಿದ್ರು. ಮನೀಶ್ ಪಾಂಡೆ 1ರನ್ ಗಳಿಸಿ, ದಿನೇಶ್ ಕಾರ್ತಿಕ್ 5ರನ್ ಗಳಿಸಿ ಅಜೇಯರಾಗಿ ಉಳಿದ್ರು.