ತುಂಬಾ ತುಂಟ ಹುಡ್ಗ…! ಸಿಕ್ಕಾಪಟ್ಟೆ ತರ್ಲೆ ಮಾಡ್ತಾನೆ, ಹೇಳಿದ್ದು ಕೇಳಲ್ಲ ಅನ್ನೋ ದೂರು ಪ್ರತಿನಿತ್ಯ ಅಪ್ಪ-ಅಮ್ಮನಿಗೆ ಬರ್ತಿತ್ತು. ವರ್ಷಕ್ಕೊಂದು ಶಾಲೆಯಲ್ಲಿ ವಿದ್ಯಾಭ್ಯಾಸ. ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಿಕ್ಷಣ ಮುಗಿಸುವಷ್ಟರಲ್ಲಿ ಐದು ಶಾಲೆ ಬದಲಾಯಿಸಿದ್ದ ಈ ವ್ಯಕ್ತಿ ಇಂದು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ‘ದಿಗ್ವಿಜಯದ’ ಹಾದಿಯಲ್ಲಿ ಮುನ್ನಡೆದಿದ್ದಾರೆ.
ಇವರು ಹರ್ಷವರ್ಧನ್ ಬ್ಯಾಡನೂರು. ದಿಗ್ವಿಜಯ ಸುದ್ದಿವಾಹಿನಿಯ ಸಿನಿಮಾ ಬ್ಯೂರೋ ಮುಖ್ಯಸ್ಥರು. ಇವರ ಹುಟ್ಟೂರು ಶೈಕ್ಷಣಿಕ ನಗರಿ ತುಮಕೂರು ಜಿಲ್ಲೆಯ ಪಾವಗಡ. ಬೆಳೆದಿದ್ದೆಲ್ಲಾ ರಾಜ್ಯ ರಾಜಧಾನಿ ಬೆಂಗಳೂರಲ್ಲಿ. ಅಪ್ಪ ಬ್ಯಾಡನೂರು ಶಾಂತವೀರಪ್ಪ, ತಾಯಿ ರಾಧಮ್ಮ, ಅಕ್ಕ ರಾಜ್ಯಶ್ರೀ ವಿಶಾಂತ್, ಬಾವ ವಿಶಾಂತ್. ಪತ್ನಿ ಶಾಂತಲಾ ಸರಳ ಜೀವನ ವಾಹಿನಿಯಲ್ಲಿ ಕಾರ್ಯಕ್ರಮ ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಂಕದಕಟ್ಟೆಯ ದೊಡ್ಡಣ್ಣ ವಿದ್ಯಾಸಂಸ್ಥೆ, ಗಂಗೋತ್ರಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, ಸೆಂಟ್ ಲಾರೆನ್ಸ್ ನಲ್ಲಿ 8 ಮತ್ತು 9ನೇ ತರಗತಿ ಹಾಗೂ ಶಾಂತಿಧಾಮದಲ್ಲಿ 10ನೇ ತರಗತಿ ನಂತರ ರಾಜಾಜಿನಗರದ ಎಸ್.ನಿಜಲಿಂಗಪ್ಪ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ್ರು. ಮನೆಯಲ್ಲಿ ಎಲ್ಲರೂ ಶೈಕ್ಷಣಿಕ ಕ್ಷೇತ್ರದಲ್ಲೇ ಇರೋದ್ರಿಂದ ಇವರು ಕೂಡ ಉಪನ್ಯಾಸಕ ಆಗಬೇಕು ಎಂಬುದು ಅಪ್ಪ-ಅಮ್ಮನ ಆಸೆಯಾಗಿತ್ತು. ಆದ್ರೆ ಹರ್ಷರ್ಧನ್ ಅವರಿಗೆ ಬೇರೆ ಕ್ಷೇತ್ರದಲ್ಲಿ ಬೆಳೆಯುವ ಹುಮ್ಮಸ್ಸು. ಪಿಯು ಮುಗಿದ ಬಳಿಕ ಜಯನಗರದ ವಿಜಯ ಕಾಲೇಜಿನಲ್ಲಿ ಬಿಎ (ಜರ್ನಲಿಸಂ ಮತ್ತು ಇಂಗ್ಲಿಷ್) ಪದವಿಗೆ ಸೇರಿದ್ರು. ಪದವಿ ವ್ಯಾಸಂಗ ಮುಗಿಯುತ್ತಿದ್ದಂತೆ ಮನೆಯ ಆರ್ಥಿಕ ಪರಿಸ್ಥಿತಿ ನೋಡ್ಕೊಂಡು ಓದು ಮುಂದುವರೆಸೋ ಬದಲು ಕೆಲಸ ಮಾಡಲು ಡಿಸೈಡ್ ಮಾಡಿದ್ರು.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ರು. ಹೀಗಿರುವಾಗ ಟಿವಿ9ನಲ್ಲಿ ನೇಮಕಾತಿ ನಡೀತಾ ಇದೆ ಎನ್ನೋ ವಿಷ್ಯ ಗೆಳೆಯರೊಬ್ಬರಿಂದ ತಿಳೀತು. ಹೇಗಿದ್ರು ಓದಿದ್ದು ಜರ್ನಲಿಸಂ ಅಲ್ವಾ…? ಅದೇ ಕ್ಷೇತ್ರದಲ್ಲಿ ಮುಂದುವರೆಯುವ ಅಂತ ಟಿವಿ9ಗೆ ಇಂಟರ್ ವ್ಯೂಗೆ ಹೋದ್ರು. ಪಿಯುಸಿ ಮತ್ತು ಪದವಿ ವೇಳೆಯಲ್ಲಿ 5 ವರ್ಷಗಳ ಕಾಲ ಹಿಂದಿ ಭಾಷೆಯನ್ನು ಓದಿದ್ದರಿಂದ ಕನ್ನಡ ಸ್ವಲ್ಪ ಕಷ್ಟ ಆಗುತ್ತಿತ್ತು.
ಪಿಟುಸಿಯನ್ನು ಚೆನ್ನಾಗಿ ಕೊಡಲಿಲ್ಲ…! ಎಕ್ಸಾಮ್ ಕೂಡ ಅಷ್ಟಕಷ್ಟೇ…! ಆದ್ರೂ ಕೊನೆಯ ಅವಕಾಶವೊಂದಿತ್ತು…ಎಂ.ಡಿ ಮಹೇಂದ್ರ ಮಿಶ್ರ ಅವರೆದುರು ಇಂಟರ್ ವ್ಯೂ ಗೆ ಕೂರೋದು…! ಆಗಿದ್ದಾಗಲಿ ಅಂತ ಸಂದರ್ಶನ ಅಟೆಂಡ್ ಮಾಡಿದ್ರು.
ಬೆಂಗಳೂರು ಕುರಿತು ಸುದ್ದಿ ಮಾಡಿ ಅಂದ್ರೆ ಏನ್ ಮಾಡ್ತೀರ? ಅಂತ ಮಹೇಂದ್ರ ಮಿಶ್ರ ಕೇಳಿದ್ರು. ಹರ್ಷವರ್ಧನ್ ಅದು-ಇದು ಅಂತ ಒಂದಿಷ್ಟು ಸ್ಟೋರಿಗಳನ್ನು ಹೇಳಿದ್ರು. ‘ಇವೆಲ್ಲಾ ಮಾಮೂಲಿ. ನೀವು ಹೊಸದಾಗಿ ಏನ್ ಮಾಡ್ತೀರಿ’? ಮಿಶ್ರಾ ಅವರ ಪ್ರಶ್ನೆ. ಆಗ ಬ್ಯಾಂಗಲೋರನ್ನು ಬೆಂಗಳೂರು ಅಂತ ಮಾಡ್ಬೇಕು ಎಂಬ ಚರ್ಚೆ ನಡೀತಾ ಇತ್ತು. ಈ ವಿಷ್ಯವನ್ನು ಪ್ರಸ್ತಾಪಿಸಿ ‘ಬೆಂಗಳೂರು ಅಂತ ಹೆಸರು ಬದಲಾಯಿಸದ ಮಟ್ಟಿಗೆ ಇಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚುತ್ತಾ…’? ಕೇವಲ ಹೆಸರು ಕನ್ನಡೀಕರಣ ಮಾಡುವ ಜತೆಗೆ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು… ಎಂದ ಹರ್ಷವರ್ಧನ್, ಇದರ ಬಗ್ಗೆ ಅನ್ಯಭಾಷಿಕರಾಗಿ ನಿಮ್ಮ ಅಭಿಪ್ರಾಯವೇನು ಎಂದು ಮಿಶ್ರಾ ಅವರನ್ನೇ ಪ್ರಶ್ನಿಸಿದ್ರು….!
ಇದೊಂದು ಉತ್ತರದಿಂದ ಈ ಹುಡುಗನಲ್ಲಿ ಏನೋ ಇದೆ ಅಂತ ಮಹೇಂದ್ರ ಮಿಶ್ರ ಅವರಿಗನಿಸಿದ್ದೇ ತಡ ನೀವು ಸೆಲೆಕ್ಟ್ ಆಗಿದ್ದೀರಿ. ನಾಳೆಯಿಂದಲೇ ಬನ್ನಿ ಎಂದರು.
2007ರಲ್ಲಿ ಟಿವಿ9ನಲ್ಲಿ ಮೆಟ್ರೋ ಬ್ಯೂರೋ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರಿದ್ರು. ಈ ಮೊದಲು ಎಂಎನ್‍ಸಿ ಯಲ್ಲಿ ಬರ್ತಿದ್ದ ಸಂಬಳಕ್ಕಿಂತ ಅರ್ಧಪಟ್ಟಿಗಿಂತಲೂ ಕಡಿಮೆ ಸಂಬಳ ಅಂದು ಇವರಿಗೆ ಟಿವಿ9ನಲ್ಲಿ ಸಿಕ್ತಿದ್ದುದು..! ಕಡಿಮೆ ಸಂಬಳಕ್ಕೆ ಏಕೆ ಹೋಗ್ತಿ…? ನಿನಗೆ ಆ ಎಂಎನ್‍ಸಿನಲ್ಲೇ ಬೆಳವಣಿಗೆ ಇದೆ ಅಂತ ಮನೆಯಲ್ಲಿ. ಏನ್ ಮಾಡೋದು ಎಂಬ ಗೊಂದಲ ಇವರಲ್ಲಿ…! ಒಂದು ವಾರ ಬೆಳಗ್ಗೆ ಟಿವಿ9ನಲ್ಲಿ ರಾತ್ರಿ ಎಂಎನ್‍ಸಿಯಲ್ಲಿ ಕೆಲಸ ಮಾಡಿದ್ರು. ಆಮೇಲೆ ಗಟ್ಟಿ ನಿರ್ಧಾರ ತಗೊಂಡು ಟಿವಿ9 ಅನ್ನೇ ಆಯ್ಕೆ ಮಾಡಿಕೊಂಡ್ರು.
ನಂತರದ ದಿನಗಳಲ್ಲಿ ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕುವೆಂಪು ವಿವಿಯಿಂದ ಇಂಗ್ಲಿಷ್ ಎಂಎ, ಅಣ್ಣಾ ಮಲೈ ಯೂನಿವರ್ಸಿಟಿಯಿಂದ ಪಬ್ಲಿಕ್ ರಿಲೇಶನ್ಸ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪದವಿ ಪಡೆದ್ರು.
2010ರಲ್ಲಿ ಸಮಯ ಚಾನಲ್ ನಲ್ಲಿ ಅವಕಾಶ ಸಿಕ್ತು. ಇಲ್ಲಿ ರಿಪೋರ್ಟರ್ ಆಗಿ ನಂತರ 1.5 ವರ್ಷ ನಿರೂಪಕರಾಗಿ ಕೆಲಸ ಮಾಡಿದ್ರು. ಆ್ಯಂಕರಿಂಗ್ ಮಾಡ್ತಿದ್ದ ಇವರಿಗೆ ಆಫೀಸ್ ನಲ್ಲಿರೋಕೆ ಆಗ್ತಿರ್ಲಿಲ್ಲ…! ಫೀಲ್ಡ್ ನಲ್ಲಿ ಕೆಲಸ ಮಾಡ್ಬೇಕು ಅಂತ ಆಸೆ. ಮತ್ತೆ ರಿಪೋರ್ಟಿಂಗ್ ಕೊಡಿ ಅಂತ ಕೇಳಿಕೊಂಡ್ರು. ಸಿನಿಮಾ ಬ್ಯೂರೋದಲ್ಲಿ ಖಾಲಿ ಇದ್ದಿದ್ರಿಂದ ಸಿನಿಮಾ ರಿಪೋರ್ಟರ್ ಆದ್ರು.
2014ರಲ್ಲಿ ದೃಶ್ಯಮಾಧ್ಯಮ ಬಿಟ್ಟು ಮುದ್ರಣ ಮಾಧ್ಯಮಕ್ಕೆ ಬರುವ ಅವಕಾಶ ದೊರೆಯಿತು. ವಿಜಯವಾಣಿ ದಿನಪತ್ರಿಕೆಯಲ್ಲಿ ಸಿನಿಮಾ ವರದಿಗಾರರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ರು.
1 ವರ್ಷದ ಬಳಿಕ ಮತ್ತೆ ದೃಶ್ಯಮಾಧ್ಯಮ ಕೈಬೀಸಿ ಕರೆಯಿತು. 2015ರಲ್ಲಿ ಪುನಃ ಸಮಯ ಚಾನಲ್ ಗೆ ಹೋದ್ರು. ಕಾರಣಾಂತರದಿಂದ ಅದು ಸ್ಥಗಿತಗೊಂಡಾಗ ‘ಸುದ್ದಿ’ ಚಾನಲ್ ಕಡೆಗೆ ಪಯಣ ಬೆಳೆಸಿದ್ರು. ಇಲ್ಲಿ ಸ್ವಲ್ಪ ಸಮಯ ಮೆಟ್ರೋ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ರು.
2016ರಲ್ಲಿ ಪುನಃ ವಿಜಯವಾಣಿಯಿಂದ ಕರೆಬಂತು. ಸಿನಿಮಾ ವಿಭಾಗದ ಹಿರಿಯ ವರದಿಗಾರರಾಗಿ ವಿಜಯವಾಣಿ ಪತ್ರಿಕೆಗೆ ಮರುಪ್ರವೇಶ ಪಡೆದ್ರು. ನಂತರ ವಿಜಯವಾಣಿಯ ಬಳಗದ ದಿಗ್ವಿಜಯ ನ್ಯೂಸ್ ಆರಂಭವಾದಾಗ ಸಿನಿಮಾ ಬ್ಯೂರೋ ಮುಖ್ಯಸ್ಥರಾಗಿ ಮತ್ತೆ ದೃಶ್ಯಮಾಧ್ಯಮಕ್ಕೆ ಹಾರಿದ್ರು.
ವಿಜಯವಾಣಿ ದಿನಪತ್ರಿಕೆಯಲ್ಲಿ ಬಾಲಿವುಡ್ ಸ್ಟಾರ್ ಗಳಾದ ಶಾರೂಖ್ ಖಾನ್, ಕಾಜಲ್ ಅಗರ್ ವಾಲ್, ಗೋವಿಂದ, ಸುನೀಲ್ ಶೆಟ್ಟಿ, ರಿಶಿ ಕಪೂರ್, ಸುಶ್ಮಿತಾ ಸೇನ್, ಊರ್ವಶಿ ರೊಟೆಲಾ, ತೆಲುಗು ನಟ ಪ್ರಭಾಸ್ ಸೇರಿದಂತೆ ಅನೇಕ ಸಿನಿತಾರೆಯರ ಇಂಟರ್ ವ್ಯೂ ಮಾಡಿದ್ದಾರೆ. ಇತ್ತೀಚಿಗೆ ದಿಗ್ವಿಜಯದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರನ್ನು ಕೂಡ ಸಂದರ್ಶಿಸಿದ್ದಾರೆ.
ಸಮಯ ಚಾನಲ್ ನಲ್ಲಿರುವಾಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರೀಯಾಂಕ ಉಪೇಂದ್ರ ಮತ್ತಿತರ ಸ್ಟಾರ್ ನಟ-ನಟಿಯರನ್ನು, ಸಿನಿಮಾ ತಂಡದ ಸಾಕಷ್ಟು ಸಂದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ.
ಟಿವಿ9ನಲ್ಲಿರುವಾಗ ಅಕ್ರಮ ಕಟ್ಟಡ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸರಣಿ ವರದಿ ಮಾಡಿದ್ದರು. ಆರೋಪಿಗಳು ಹಣದ ಆಮಿಷವನ್ನೊಡ್ಡಿದ್ದರು. ಅದಕ್ಕೆ ಹರ್ಷ ಒಪ್ಪದಿದ್ದಾಗ ಜೀವಬೆದರಿಕೆ ಕೂಡ ಬಂದಿತ್ತು.
ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಬಂದಿತ್ತು. ಅವುಗಳನ್ನು ತಳ್ಳಿ ಹಾಕಿದ್ದರು. ಇನ್ಮುಂದೆ ಅವಕಾಶ ಸಿಕ್ಕರೆ ಬಳಸಿಕೊಳ್ತೀನಿ ಅಂತಿದ್ದಾರೆ. ತಂದೆ ಶಿಕ್ಷಕರು ಮಾತ್ರವಲ್ಲ ಸಾಹಿತಿಗಳೂ ಸಹ ಹೌದು. ಮಕ್ಕಳ ನಾಟಕ, ಕವಿತೆ ಸೇರಿದಂತೆ ಸುಮಾರು 30 ಪುಸ್ತಕಗಳನ್ನು ಬರೆದಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಮ್ಮ ಕೂಡ ಮಹಿಳಾ ತಂಡಗಳು ನಡೆಸುವ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಕ್ಕ ರಾಜ್ಯಶ್ರೀ ನಾಟ್ಯ ಮಯೂರಿ. ಮಿಸಸ್ ಕರ್ನಾಟಕದಲ್ಲಿ ಫಸ್ಟ್ ರನ್ನರ್ ಅಪ್ ಆಗಿದ್ದವರು.
ಇಂಥಾ ಕುಟುಂಬದ ಹಿನ್ನೆಲೆಯಲ್ಲಿ ಬಂದಿರೋ ಹರ್ಷ ಅವರಿಗೂ ನಾಟಕ ಕಲೆ ಸಿದ್ಧಿಸಿದೆ. ಶಾಲಾ ದಿನಗಳಲ್ಲಿ ಅನೇಕ ಪ್ರದರ್ಶನ ನೀಡಿದ್ದರು. ಮೀಡಿಯಾಕ್ಕೆ ಕಾಲಿಟ್ಟ ಮೇಲೂ ಇಂಟರ್ ಮೀಡಿಯಾ ಕಾಂಪಿಟೇಶನ್ ಗಳಲ್ಲಿ ದಾಮೋದರ್, ಪ್ರಶಾಂತ್, ಕಿಶೋರ್ ಅವರಂತಹ ಪ್ರತಿಭಾನ್ವಿತ ಸ್ನೇಹಿತರೊಡಗೂಡಿ ಅಭಿನಯಿಸಿದ್ದೂ ಉಂಟು. ಕವಿತೆ ಬರೆಯುತ್ತಿರುತ್ತಾರೆ. ಕವನ ಸಂಕಲನವೊಂದನ್ನು ಹೊರತರಲು ಯೋಚಿಸ್ತಿದ್ದಾರೆ.
2016ರಲ್ಲಿ ‘ಇಂಡಿವುಡ್ ಮೀಡಿಯಾ ಅವಾರ್ಡ್’ಗೆ ಭಾಜನರಾಗಿರುವ ಹರ್ಷವರ್ಧನ್ ನಾನಾ ಕಡೆಗಳಲ್ಲಿ ಸನ್ಮಾನಿತರಾಗಿದ್ದಾರೆ. ವೃತ್ತಿಪರ ಪತ್ರಕರ್ತ, ತುಂಬಾ ಕೆಲಸ ಮಾಡ್ತಾರೆ. ಆದ್ರೆ, ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡಿಕೊಳ್ಳೋದು ಇವರಿಗೆ ಗೊತ್ತಿಲ್ಲ…! ಈ ವಿಷ್ಯಕ್ಕೆ ಫ್ರೆಂಡ್ಸ್ ಹತ್ರ ಯಾವಾಗ್ಲೂ ಬೈಯಿಸಿಕೊಳ್ತಿರ್ತಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು