ನ್ಯೂಜಿಲ್ಯಾಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೇ ವೋವೆಲ್ ಮೌಂಟ್ ಮೌಂಗನ್ಯುಯಿ ಕ್ರೀಡಾಂಗಣ ಸಜ್ಜಾಗಿದೆ.
ರಾಹುಲ್ ದ್ರಾವಿಡ್ ಕೋಚ್ ಆಗಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತ ಫೈನಲ್ ಪ್ರವೇಶಿಸುತ್ತಿರುವುದು ಇದು 6ನೇ ಬಾರಿ. 3 ಬಾರಿ ವಿಶ್ವಕಪ್ ಭಾರತಕ್ಕೆ ಒಲಿದಿದೆ. 2 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದೀಗ 4ನೇ ವಿಶ್ವಕಪ್ ಅನ್ನು ಭಾರತಕ್ಕೆ ತರಲು ಪೃಥ್ವಿ ಶಾ ನೇತೃತ್ವದ ಟೀಂ ಇಂಡಿಯಾ ತಯಾರಾಗಿದೆ.
ಫೈನಲ್ ಪಂದ್ಯ ಮುಗಿಯುವ ತನ ಮೊಬೈಲ್ ಬಳಸಬೇಡಿ ಎಂದು ಗುರು ದ್ರಾವಿಡ್ ತಮ್ಮ ಶಿಷ್ಯರಿಗೆ ಸೂಚಿಸಿದ್ದಾರೆ.
ಇದು 12ನೇ ಅಂಡರ್ 19 ವಿಶ್ವಕಪ್. ಮೊದಲ ವಿಶ್ವಕಪ್ ನಡೆದಿದ್ದು 1988ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದ ಈ ವಿಶ್ವಕಪ್ ಅನ್ನು ಆಸ್ಟ್ರೇಲಿಯಾವೇ ಗೆದ್ದಿತ್ತು. ಪಾಕಿಸ್ತಾನ್ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 10 ವರ್ಷದ ಬಳಿಕ 2ನೇ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ಇಲ್ಲಿ ಇಂಗ್ಲೆಂಡ್ ಗೆದ್ದಿತ್ತು. ನ್ಯೂಜಿಲ್ಯಾಂಡ್ ರನ್ನರ್ ಅಪ್ ಆಗಿತ್ತು.
ಶ್ರೀಲಂಕಾದಲ್ಲಿ 2000ನೇ ಇಸವಿಯಲ್ಲಿ ನಡೆದ 3ನೇ ವಿಶ್ವಕಪ್ ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ಭಾರತ ತಂಡ ಫೈನಲ್ ನಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸಿ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಭಾರತಕ್ಕೆ ಒಲಿದ ಮೊದಲ ಅಂಡರ್ 19 ವಿಶ್ವಕಪ್ ಇದು. ಇದನ್ನು ತಂದುಕೊಟ್ಟ ನಾಯಕ ಕೈಫ್ ಮುಂದೆ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿ ಮಿಂಚಿದ್ದು ಇತಿಹಾಸ.
2002ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ 4ನೇ ವಿಶ್ವಕಪ್ ನಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತ್ತು. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನ ಪಡೆದಿತ್ತು.
2004ರಲ್ಲಿ ಬಾಂಗ್ಲದೇಶದಲ್ಲಿ ನಡೆದಿದ್ದು 5ನೇ ವಿಶ್ವಕಪ್. ಇಲ್ಲಿ ವಿಜಯಿ ಆಗಿದ್ದು ಪಾಕಿಸ್ತಾನ. ವೆಸ್ಟ್ ಇಂಡೀಸ್ ರನ್ನರ್ ಅಪ್.
2006ಲ್ಲಿ ಶ್ರೀಲಂಕಾದಲ್ಲಿ 6ನೇ ವಿಶ್ವಕಪ್ ನಡೆದಿತ್ತು. ಭಾರತ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿ ಸೋಲನುಭವಿಸಿತ್ತು. ಇದರೊಂದಿಗೆ ಪಾಕ್ ಸತತ ಎರಡು ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ರನ್ನರ್ ಅಪ್ ಆಗಿದ್ದ ಈ ತಂಡದಲ್ಲಿದ್ದ ರೋಹಿತ್ ಶರ್ಮ ಇಂದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ದ್ವಿಶತಕಗಳ ಸರದಾರರಾಗಿದ್ದಾರೆ. ಚೇತೇಶ್ವರ ಪೂಜಾರ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಟೀಂ ಇಂಡಿಯಾದ ಟೆಸ್ಟ್ ಟೀಂಲ್ಲಿ ಕಾಯಂ ಸ್ಥಾನ ಪಡೆದಿದ್ದಾರೆ. ಪೀಯೂಶ್ ಚಾವ್ಲ ಕೂಡ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
2008ರಲ್ಲಿ ಮಲೇಷ್ಯಾದಲ್ಲಿ ನಡೆದ 7ನೇ ವಲ್ರ್ಡ್ ಕಪ್ ನಲ್ಲಿ ಭಾರತ ಸೌತ್ ಆಫ್ರಿಕಾ ವಿರುದ್ಧ ಗೆದ್ದು ಎರಡನೇ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಭಾರತಕ್ಕೆ ಈ ವಿಶ್ವಕಪ್ ತಂದುಕೊಟ್ಟಿದ್ದು ಇಂದು ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ.
2010ರಲ್ಲಿ ಮತ್ತೆ ನ್ಯೂಜಿಲೆಂಡ್ ನಲ್ಲಿ ನೇ ವಿಶ್ವಕಪ್ ನಡೆದಿತ್ತು. ಇಲ್ಲಿ ವಿಶ್ವವಿಜೇತವಾಗಿದ್ದು ಆಸ್ಟ್ರೇಲಿಯಾ, ರನ್ನರ್ ಅಪ್ ಆಗಿದ್ದು ಪಾಕ್.
2012ರಲ್ಲಿ ಆಸ್ಟ್ರೇಲಿಯಾದಲ್ಲಿ 9ನೇ ವಿಶ್ವಕಪ್ ನಡೆಯಿತು ಇಲ್ಲಿ ಗೆದ್ದಿದ್ದು ಭಾರತ. ಆತಿಥೇಯ ಆಸೀಸ್ ರನ್ನರ್ ಅಪ್. ಈ ವಿಶ್ವಕಪ್ ನಲ್ಲಿ ಭಾರತ ತಂಡದ ನೇತೃತ್ವವಹಿಸಿದ್ದು ಉನ್ಮುಕ್ತ್ ಚಂದ್.
2014ರಲ್ಲಿ ಯುಎಇಯಲ್ಲಿ 10ನೇ ವಿಶ್ವಕಪ್ ತನ್ನದಾಗಿಸಿಕೊಂಡಿದ್ದು ದ.ಆಫ್ರಿಕಾ. ರನ್ನರ್ ಅಪ್ ಆಗಿದ್ದು ಪಾಕಿಸ್ತಾನ.2016ರಲ್ಲಿ ಬಾಂಗ್ಲಾದೇಶ 11ನೇ ವಿಶ್ವಕಪ್ ಗೆ ವೇದಿಕೆಯಾಗಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ ಫೈನಲ್ ತಲುಪಿದ್ದವು. ಭಾರತ ಸೋತಿತ್ತು.
ಇದುವರೆಗೆ ಅತಿ ಹೆಚ್ಚು ಬಾರಿ ವಿಶ್ವಕಪ್ ಫೈನಲ್ ತಲುಪಿರುವುದು ನಮ್ಮ ಭಾರತ. ಈ ಬಾರಿಯ ಫೈನಲ್ ಸೇರಿದಂತೆ ಒಟ್ಟು 6 ಬಾರಿ ಫೈನಲ್ ಪ್ರವೇಶಿಸಿರುವ ಕೀರ್ತಿ ನಮ್ಮದು.
ಭಾರತ 3 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 2 ಬಾರಿ ರನ್ನರ್ ಅಪ್ ಆಗಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ 3 ಬಾರಿ ಗೆಲುವು, 1 ಬಾರಿ ರನ್ನರ್ ಅಪ್, ಇಂಗ್ಲೆಂಡ್ 1 ಬಾರಿ ಗೆಲುವು, ಪಾಕಿಸ್ತಾನ್ 2ರಲ್ಲಿ ಗೆಲುವು, 3ರಲ್ಲಿ ರನ್ನರ್ ಅಪ್, ದ.ಆಫ್ರಿಕಾ 1ರಲ್ಲಿ ಗೆಲುವು, 2ರಲ್ಲಿ ರನ್ನರ್ ಅಪ್, ವೆಸ್ಟ್ ಇಂಡೀಸ್ 1 ಬಾರಿಗೆ ಗೆಲುವು, 1ಬಾರಿ ರನ್ನರ್ ಅಪ್ ಸ್ಥಾನ ಪಡೆದಿವೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಲಾ 1 ಬಾರಿ ರನ್ನರ್ ಅಪ್ ಆಗಿವೆ.
ಭಾರತಕ್ಕೆ 4ನೇ ಬಾರಿ ವಿಶ್ವಕಪ್ ತಂದುಕೊಡಲು ಉತ್ಸುಕರಾಗಿರುವ ದ್ರಾವಿಡ್ ಶಿಷ್ಯರು :
ಪೃಥ್ವಿ ಶಾ(ನಾಯಕ), ಮನ್ ಜೋತ್ ಕಾಲ್ರ, ಶುಬ್‍ಮನ್ ಗಿಲ್, ಹಿಮಾನ್ಶು ರಾಣಾ, ಅಭಿಷೇಕ್ ಶರ್ಮ, ಹಾರ್ವಿಕ್ ದೇಸಾಯಿ, ಅನುಕುಲ್ ರಾಯ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಇಶಾನ್ ಪೊರೆಲ್, ಅರ್ಷದೀಪ್ ಸಿಂಗ್, ಆರ್ಯನ್ ಜುಯಾಲ್, ಪಂಕಜ್ ಯಾದವ್, ರಿಯಾನ್ ಪರಾಗ್.
-ಧುನಿಕ ಕೊಡಗು