ಬಿಜೆಪಿ ಸಂಸದ ಶ್ರೀರಾಮುಲು ಮದುವೆಗೆ ಬರಲಿಲ್ಲ ಎಂದು ಅವರ ಅಭಿಮಾನಿಯೊಬ್ಬ ಎರಡು ಬಾರಿ ತನ್ನ ಮದುವೆಯನ್ನು ಕ್ಯಾನ್ಸಲ್ ಮಾಡಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಡಕಿ ಎಂಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಂಜುನಾಥ್ ಹೆಬ್ಬುಲಿ (ಹೆಬ್ಬುಲಿ ಕುಟುಂಬದ ಅಡ್ಡಹೆಸರು) ಮದುವೆ ಕ್ಯಾನ್ಸಲ್ ಮಾಡಿದ ವರ. ಈತ ಸಂಸದ ಶ್ರೀರಾಮುಲು ತನ್ನ ಮದುವೆಗೆ ಬರಲಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ…!

ಹಿರಿಯರೆಲ್ಲಾ ಸೇರಿ ಮಂಜುನಾಥ್ ಮತ್ತು ಅವರ ತಮ್ಮ ಹನುಮೇಶ್ ಗೆ ಅದೇ ಗ್ರಾಮದ ಯುವತಿಯರಾದ ಲಕ್ಷ್ಮಿ ಮತ್ತು ರೇಖಾ ಎಂಬುವವರ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದರೆ, ತನ್ನ ಮದುವೆಗೆ ಶ್ರೀರಾಮುಲು ಬರಲಿಲ್ಲ ಎಂದು ಮಂಜುನಾಥ್ ಸತತ ಎರಡನೇ ಬಾರಿಗೆ ಮದುವೆ ಕ್ಯಾನ್ಸಲ್ ಮಾಡಿದ್ದಾನೆ…!

ಸಹೋದರರಿಬ್ಬರಿಗೆ ಒಟ್ಟಿಗೆ ಒಂದೇ ಖರ್ಚಲ್ಲಿ ಮದುವೆ ಮಾಡೋಣ ಅಂತಿದ್ದ ಕುಟುಂಬಸ್ಥರಿಗೆ ನಿರಾಸೆಯಾಗಿದೆ. ಅವರ ಬುದ್ಧಿಮಾತನ್ನು ಮಂಜುನಾಥ್ ಕೇಳಲಿಲ್ಲ.

ಹೀಗೆ ಇದ್ದರೆ ಇವನಿಗೆ ಈ ಜನ್ಮದಲ್ಲಿ ಮದುವೆ ಆಗಲ್ಲ. ಇವನಿಂದ ಇವನ ತಮ್ಮನಿಗೂ ಮದುವೆ ಆಗಲ್ಲ ಅಂತ ತಿಳಿದ ಮನೆಯವರು ಸೇರಿ ಸುಮಾರು 25 ಮಂದಿ ಗ್ರಾಮಸ್ಥರು ಸೇರಿ ಮಂಜುನಾಥ್ ನನ್ನು ಶ್ರೀರಾಮುಲು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಾಗ ಶ್ರೀರಾಮುಲು ಅವರು ಇರಲಿಲ್ಲ. ಅವರು ಬರೋವರೆಗೂ ಅವರ ಮನೆ ಎದುರೇ ಮಲಗಿಕೊಂಡಿದ್ದಾರೆ. ಕೊನೆಗೂ ಶ್ರೀರಾಮುಲು ಅವರ ಭೇಟಿಯಾಗಿದೆ. ಅಭಿಮಾನಿಯ ಪ್ರೀತಿ , ಅಭಿಮಾನ ಮೆಚ್ಚಿರುವ ಶ್ರೀರಾಮುಲು ಮದುವೆಗೆ ಬರೋದಾಗಿ ಹೇಳಿದ್ದಾರೆ. ಮಾರ್ಚ್ 4ರಂದು ಮಂಜುನಾಥ್ ಅವರ ಮದುವೆ ಫಿಕ್ಸ್ ಆಗಿದೆ.







