1. ಕಸ ವಿಂಗಡೆ ಮಾಡ್ದೇ ಇದ್ರೆ ದಂಡ..!
ಬೆಂಗಳೂರಿನ ನಾಗರಿಕರು ಹಸಿ, ಒಣ ಹಾಗೂ ಅಪಾಯಕಾರಿ ಕಸಗಳನ್ನು ಕಡ್ಡಾಯವಾಗಿ ವಿಂಗಡಿಸಲೇ ಬೇಕು. ಕಸ ಬೇರ್ಪಡಿಸದೇ ಬೇಜವಬ್ದಾರಿ ಮೆರೆದರೆ ಕರ್ನಾಟಕ ನಗರಪಾಲಿಕೆ ಕಾಯಿದೆ 1976ನ್ನು ಉಲ್ಲಂಘನೆ ಮಾಡಿದಂತಾಗುತ್ತೆ. ಅಂಥವರಿಗೆ ಬಿಬಿಎಂಪಿ ದಂಡ ವಿಧಿಸುವ ಅಧಿಕಾರವನ್ನು ಹೊಂದಿದೆ.
ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೈಕೋರ್ಟ್ ಹೊರಡಿಸಿರುವ ಈ ಆದೇಶ ಮಹತ್ವದ್ದಾಗಿದೆ. ನ್ಯಾ. ಬಿ.ವಿ ನಾಗರತ್ನ ಹಾಗೂ ನ್ಯಾ. ಎನ್ ಕುಮಾರ್ ಅವರನ್ನೊಳಗೊಂಡ ನ್ಯಾಯ ಪೀಠ ನಿನ್ನೆ ನೀಡಿರೋ ಆದೇಶದಂತೆ ಬೆಂಗಳೂರಿನ ನಾಗರಿಕರು ಕಡ್ಡಾಯವಾಗಿ ಮನೆಯಲ್ಲೇ ಹಸಿ, ಒಣ, ಅಪಾಯಕಾರಿ ಕಸವನ್ನು ಬೇರ್ಪಡಿಸಲು ಆದೇಶಿಸಿದೆ.
ಕಸ ವಿಂಗಡಣೆಗೆ ಹಸಿರು, ಕೆಂಪು ಡಬ್ಬ ಹಾಗೂ ಚೀಲವೊಂದನ್ನು ಬಳಸಬೇಕು. ಹಸಿ ಕಸಗಳನ್ನು ಹಸಿರು ಡಬ್ಬಿಗೂ, ಅಪಾಯಕಾರಿ ಕಸಗಳನ್ನು ಕೆಂಪು ಡಬ್ಬಿಗೂ ಮತ್ತು ಒಣ ಕಸವನ್ನು ಚೀಲಕ್ಕೂ ಹಾಕ ಬೇಕು.
* ಹಸಿ ಕಸ : ಅಡುಗೆ ತ್ಯಾಜ್ಯ, ಹಣ್ಣು-ತರಕಾರಿ, ಸೊಪ್ಪು, ಮೊಟ್ಟೆ, ಟಿಶ್ಯೂ ಪೇಪರ್ ಟೀ ಬ್ಯಾಗಿನಂತಹ ಕಸಗಳು.(ಹಸಿರು ಡಬ್ಬಕ್ಕೆ)
* ಒಣ ತ್ಯಾಜ್ಯ : ವೃತ್ತಪತ್ರಿಕೆ, ಪಿಜ್ಞಾ ಬಾಕ್ಸ್, ಕಾಗದದ ಲೋಟ, ಮನೆಯ ಕಸ ಮುರಿದ ಗಾಜುಗಳು, ಕೂದಲು ಮೊದಲಾದವು. (ಚೀಲಕ್ಕೆ)
* ಅಪಾಯಕಾರಿ ತ್ಯಾಜ್ಯ : ಇಂಜೆಕ್ಷನ್, ವೈದ್ಯಕೀಯ ತ್ಯಾಜ್ಯ, ನ್ಯಾಪ್ಕಿನ್, ಡೈಪರ್ಗಳು. (ಕೆಂಪು ಡಬ್ಬಕ್ಕೆ)
ಹೀಗೆ ಕಸವನ್ನು ಪ್ರತ್ಯೇಕಿಸುವಾಗ ಪ್ಲಾಸ್ಟಿಕ್ನಲ್ಲಿ ಕಸವನ್ನು ಹಾಕುವಂತೆ ಇಲ್ಲ. ಪೌರಕಾರ್ಮಿಕರೂ ಅಷ್ಟೇ ಎಲ್ಲಾ ಕಸವನ್ನು ಒಟ್ಟು ಗೂಡಿಸ ಬಾರದು. ಬೇರ್ಪಡಿಸಿದ ಕಸವನ್ನು ಬೇರೆ ಬೇರೆ ಸಂಸ್ಕರಣಾ ಸ್ಥಳಕ್ಕೇ ಕೊಂಡಯ್ಯಲಾಗುವುದು.
2. ಬಿಬಿಎಂಪಿ ವಿರುದ್ಧ ಕೇಬಲ್ ಆಪರೇಟ್ ಗಳು ಆಕ್ರೋಶ
ಬಿಬಿಎಂಪಿ ಯಾವುದೇ ಸೂಚನೆಯನ್ನೂ ನೀಡದೆ ಬೆಂಗಳೂರಲ್ಲಿ ಕೇಬಲ್ಗಳನ್ನು ಕತ್ತರಿಸಲು ಮುಂದಾಗಿದ್ದು , ಬಿಬಿಎಂಪಿಯ ಕ್ರಮಕ್ಕೆ ಕೇಬಲ್ ಆಪರೇಟರ್ಗಳು ಮುನಿಸಿಕೊಂಡಿದ್ದಾರೆ.
ಬಿಬಿಎಂಪಿಯ ಕ್ರಮವನ್ನು ಖಂಡಿಸಿ ಭಾನುವಾರ ಮೂರುಗಂಟೆಗಳ ಕಾಲ ನಗರದಲ್ಲಿ ಕೇಬಲ್ ಬಂದ್ ಮಾಡಲು ಆಪರೇಟರ್ಗಳು ನಿರ್ಧರಿಸಿದ್ದಾರೆ. ಬಿಬಿಎಂಪಿ ನಗರದ ಅಂದವನ್ನು ಹೆಚ್ಚಿಸೋಕೆ ಅಂತ ಈಗಾಗಲೇ ಇಂದಿರಾ ನಗರದಲ್ಲಿ ಕೇಬಲ್ ಕತ್ತರಿಸಿದ್ದುಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಕೇಬಲ್ ಕತ್ತರಿಸ್ತಾರೆ. ಬಿಬಿಎಂಪಿ ಈಗಲೇ ಕೇಬಲ್ ಕತ್ತರಿಸೋ ಕಾರ್ಯವನ್ನು ನಿಲ್ಲಿಸಿ ಒಂದು ವರ್ಷದ ಕಾಲಾವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ಕ್ರಮವನ್ನು ವಿರೀಧಿಸಿ ರಾಜ್ಯಾದಾದ್ಯಂತ ಕೇಬಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತೆ ಎಂದು ಕೇಬಲ್ ಆಪರೇಟರ್ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಎಚ್ಚರಿಸಿದ್ದಾರೆ.
3. ನಿರ್ಭಯಾ ಪ್ರಕರಣ ; ಬಾಲಾಪರಾಧಿ ಬಿಡುಗಡೆ ತಡೆಗೆ ನಕಾರ..!
ದೆಹಲಿಯಲ್ಲಿ ನಿರ್ಭಯಾ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದು, ಡಿಸೆಂಬರ್ 20ಕ್ಕೆ ಆತ ಬಿಡುಗಡೆಯಾಗಲಿದ್ದಾನೆ.
2012ರ ಡಿಸೆಂಬರ್ನಲ್ಲಿ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಆರು ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆ ಗುಂಪಿನಲ್ಲಿದ್ದ ಬಾಲಾಪರಾಧಿ ಮೂರು ವರ್ಷ ಜೈಲುಶಿಕ್ಷೆ ಅನುಭವಿಸಿದ್ದಾನೆ. ಈಗ 21 ವರ್ಷಕ್ಕೆ ಕಾಲಿಟ್ಟಿರುವ ಬಾಲಪರಾಧಿಯನ್ನು ಬಿಡುಗಡೆ ಮಾಡಬಾರದೆಂದು ಸುಬ್ರಮಣ್ಯಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
4. ಪ್ರಶಾಂತ್ ಕಿಶೋರ್ಗೆ ಜೆಡಿಎಸ್ ಗಾಳ..!
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನೂ, ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಯನ್ನು ಗೆಲ್ಲಿಸುವಲ್ಲಿ ಮಹತ್ತರ ಪಾತ್ರವಹಿಸಿದ ರಾಜಕೀಯ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಕರ್ನಾಟಕಕ್ಕೆ ಕರೆತರುವ ಪ್ರಯತ್ನದಲ್ಲಿ ಜೆಡಿಎಸ್ ಇದೆ.
ಮುಂಬರುವ 2018ರ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿ ರಣತಂತ್ರ ರೂಪಿಸುವ ಸಲುವಾಗಿ ಪ್ರಶಾಂತ್ ಅವರನ್ನು ಕರೆತರಲು ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡ ಮತ್ತು ರಾಜ್ಯಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ಆಲೋಚಿಸಿದ್ದಾರೆ..! ಜೆಡಿಎಸ್ನ ಯುವನಾಯಕ ಹಾಗೂ ದೇವೆಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ತಮ್ಮ ಆಪ್ತರ ಮೂಲಕ ಪ್ರಶಾಂತ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈಗ ವಿದೇಶ ಪ್ರವಾಸದಲ್ಲಿರೋ ಪ್ರಶಾಂತ್ ಸುಮಾರು 20 ವರ್ಷಗಳ ಹಿಂದಿನ ಕರ್ನಾಟಕ ರಾಜಕಾರಣದ ಸಮಗ್ರ ಮಾಹಿತಿಯನ್ನು ಒದಗಿಸಿ, ಅದರ ಅಧ್ಯಯನದ ನಂತರ ಸಾಧ್ಯಾಸಾಧ್ಯತೆಗಳ ಬಗ್ಗೆ ನಿರ್ಧಾರ ತಿಳಿಸುವುದಾಗಿ ಪ್ರಶಾಂತ್ ಹೇಳಿದ್ದಾರೆಂದು ಎನ್ನಲಾಗುತ್ತಿದೆ.
5. ಕಸದಿಂದ ಕರೆಂಟ್..!
ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಪೋಲ್ಯಾಂಡ್ ಮೂಲದ ಕಂಪನಿಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರ ಒಪ್ಪಂದವನ್ನು ಮಾಡಿಕೊಂಡಿದೆ.
ಅಂದಾಜು 350 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ನಿತ್ಯ 400 ಟನ್ ಕಸದಿಂದ 4 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದೆ. ಖಾಸಗಿ ಹೋಟೆಲ್ ಒಂದರಲ್ಲಿ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಾಪ್ರಭ , ಎಕೋಲಾಗ್ ಕಂಪನಿಯ ನಿರ್ದೇಶಕ ರಾಬಟರ್ಟ್ ಜಾನ್ಸ್ ಒಪ್ಪಂದಕ್ಕೆ ಸಹಿ ಹಾಕಿದರು.
6. ಡಿಕೆಶಿ, ಬಿಎಸ್ವೈ ನಿರಾಳ..!
ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ್ ನೆಮ್ಮದಿಯ ನಿಟ್ಟುಸಿರು ಬಿಟ್ಟು ನಿರಾಳರಾಗಿದ್ದಾರೆ.
ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸುವ ಮೂಲಕ ಇವರಿಬ್ಬರಿಗೆ ಬಿಗ್ ರಿಲೀಫ್ ಸಿಕ್ಕಿದೆ..!
ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳ ಸಂಬಂಧ ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸುವಂತೆ ಡಿಕೆಶಿ, ಬಿಎಸ್ವೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್ ಏಕ ಸದಸ್ಯಪೀಠವು ಇವತ್ತು ತೀರ್ಪು ಪ್ರಕಟಿಸಿ ಪ್ರಕರಣವನ್ನು ರದ್ದು ಮಾಡುವಂತೆ ಆದೇಶ ಹೊರಡಿಸಿದೆ..!
7. ಲೋಕಾಯುಕ್ತ ನೇಮಕ ಪ್ರಕ್ರಿಯೆ ಆರಂಭ
ಲೋಕಾಯುಕ್ತರ ನೇಮಕಕ್ಕೆ ರಾಜ್ಯ ಸರ್ಕಾರ ಪ್ರಕೆಯೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ಡಿಸೆಂಬರ್ 21ರಂದು ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರದ ಸಭೆ ಕರೆದಿದೆ. ಉಬಯ ಸದನಗಳ ನಾಯಕರು, ಪ್ರತಿಪಕ್ಷ ನಾಯಕರು, ಸ್ಪೀಕರ್, ಉಚ್ಚನ್ಯಾಯಲಯದ ಮುಖ್ಯನ್ಯಾಯಮೂರ್ತಿಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾನೂನು ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವ ಪ್ರಸ್ತಾಪ ಕೇಳಿ ಬರ್ತಾ ಇದೆ. ಈ ಉದ್ದೇಶದಿಂದ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನಾಯಕ್ ಲೋಕಾಯುಕ್ತರಾಗಿ ನೇಮಕವಾಗೋ ಸಾಧ್ಯತೆ ಹೆಚ್ಚಿದೆ.
8. ಚಳ್ಳಕೆರೆ ಹೈಡ್ರೋಜನ್ ಬಾಂಬ್ ಘಟಕಕ್ಕೆ ಭಾರೀ ವಿರೋಧ
ಕರ್ನಾಟಕದ ರಹಸ್ಯ ಪ್ರದೇಶವೊಂದರಲ್ಲಿ ಭಾರತವು ಬೃಹತ್ ಹಾಗೂ ಉತೃಷ್ಟ ಅಣು ಸ್ಥಾವರ ನಿರ್ಮಾಣ ಮಾಡುತ್ತಿದೆ ಎಂದು ಅಂತರಾಷ್ಟ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದೆ. ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಜಲಜನಕ ಬಾಂಬ್ ತಯಾರಿಸುವ ಉದ್ದೇಶದಿಂದ ಭಾರತ ಸರ್ಕಾರ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಲ್ಲಿ ಹೇಳಿದೆ. ಇದೇ ವೇಳೆ ಕರ್ನಾಟಕ ಸರ್ಕಾರ ಈ ಬೃಹತ್ ಯೋಜನೆಗಾಗಿ ಚಳ್ಳಕೆರೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂಬ ಸುದ್ದಿ ತಿಳಿದ ಸ್ಥಳಿಯರು ಈ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
9. ರಾಜ್ಯದಲ್ಲಿ 684 ಸರ್ಕಾರಿ ಶಾಲೆಗಳು ಬಂದ್
ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತಹ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಿಗೆ ನೀಡಬೇಕೆಂಬ ಸದುದ್ದೇಶ ಮತ್ತೆ ವಿಫಲವಾಗಿದೆ. ಏಕೆಂದರೆ ರಾಜ್ಯದಲ್ಲಿ ಈ ಬಾರಿ 684 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಂದ್ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗಳ ಜೊತೆಗೆ 40 ಅನುದಾನ ಹಾಗೂ 474 ಅನುದಾನ ರಹಿತ ಶಾಲೆಗಳು ಸಹ ವಿದ್ಯಾರ್ಥಿಗಳಿಲ್ಲದೆ ಬಾಗಿಲು ಹಾಕಿವೆ. 2014-15ರಲ್ಲಿ 535 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತ ತಲುಪಿದ್ದವು. 2015-16ರಲ್ಲಿ ಇದರ ಪ್ರಮಾಣ 684ಕ್ಕೆ ಏರಿಕೆಯಾಗಿದೆ. ಇದೇ ರೀತಿ 2014-15ರಲ್ಲಿ ಅನುದಾನಕ್ಕೊಳಪಟ್ಟಿದ್ದ 15 ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಶೂನ್ಯ ಸಂಪಾದನೆ ಮಾಡಿದ್ದವು. 2015-16ರಲ್ಲಿ 40 ಅನುದಾನಿತ ಶಾಲೆಗಳಲ್ಲೂ ಕೂಡಾ ವಿದ್ಯಾರ್ಥಿಗಳಿಲ್ಲ.
10. ರಷ್ಯಾದ ಎಸ್-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ
ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ತಂತ್ರಜ್ಞಾನವನ್ನು ಖರೀದಿಸಲು ಭಾರತ ಮುಂದಾಗಿದೆ. ರಷ್ಯಾದಲ್ಲಿ ನಡೆಯಲಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾಸ್ಕೊ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ತೆರಳಲಿರುವ ಸಂದರ್ಭದಲ್ಲೇ ಈ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ರಷ್ಯಾ ಒದಗಿಸಲಿರುವ ಈ ಕ್ಷಿಪಣಿಗಳು ಅತ್ಯಂತ ದೂರ ವ್ಯಾಪ್ತಿಯಲ್ಲಿ ನಡೆಯಬಹುದಾದ ವಾಯುದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲವು. ಹಳೆಯ ಕ್ಷಿಪಣಿಗಳ ಬದಲಿಗೆ ರಷ್ಯಾದ ಎಸ್-400 ಟ್ರಿಯಂಫ್ ವಾಯು ರಕ್ಷಣಾ ಕ್ಷಿಪಣಿಗಳು ಸೇರ್ಪಡೆಯಾದರೆ ಭಾರತದ ವಾಯುಪಡೆಯ ಬಲ ಇನ್ನೂ ನೂರು ಪಟ್ಟು ಹೆಚ್ಚಲಿದೆ.