ಫೇಸ್ ಬುಕ್ ನ ವೈಯಕ್ತಿಕ ಮಾಹಿತಿ ದುರಪಯೋಗವಾಗಿರುವ ಬೆನ್ನಲ್ಲೇ ಇದೇ ಫೇಸ್ ಬುಕ್ ಒಡೆತನದ ಸಂಸ್ಥೆಯಾದ ವಾಟ್ಸಪ್ ಕೂಡ ಸುರಕ್ಷಿತವಾಗಿಲ್ಲ ಎಂಬ ಶಾಕಿಂಗ್ ನ್ಯೂಸ್ ಬಂದಿದೆ.
ವಿಶ್ವದ ಶೇ 25ಕ್ಕಿಂತ ಹೆಚ್ಚು ಮಂದಿ ಬಳಸುವ ಇನ್ ಸ್ಟೆಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಅಷ್ಟೊಂದು ಸೇಫಲ್ಲ ಎಂದು ಹೇಳಲಾಗುತ್ತಿದೆ. ಅಕಸ್ಮಾತ್ ಮಾಹಿತಿ ಕನ್ನಹಾಕಿದರೆ ಅದರ ವಿರುದ್ಧ ಯಾವ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳದ ನಿಯಮ ಅದರಲ್ಲಿ ಅಡಕವಾಗಿದೆ ಎಂದು ತಜ್ಞರು ಹೇಳ್ತಿದ್ದಾರೆ.
ವಾಟ್ಸಪ್ ಮೂಲಕ ನಡೆಯುವ ಸಂವಹನವನ್ನು ಗೂಢಲಿಪಿಗೆ ಪರಿವರ್ತಿಸಲಾಗುತ್ತದೆ ಎಂದು ವಾಟ್ಸಪ್ ಹೇಳುತ್ತಿದ್ದರೂ ಕರೆಗಳ ವಿವರ, ಮೆಟಾಡೇಟಾ ಮುಂತಾದವುಗಳನ್ನು ಸಂಗ್ರಹಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ತಜ್ಞರೊಬ್ಬರು ಎಚ್ಚರಿಸಿದ್ದಾರೆ.
ಜೊತೆಗೆ ಉದ್ಯೋಗಿಗಳ ಸಂಬಳ , ಆಪ್ ನಿರ್ವಹಣೆ, ಬೌದ್ಧಿಕ ನೀತಿ ತಯಾರಿಕೆ ಸೇರಿದಂತೆ ನಾನಾ ಸಂಬಂಧವಾಗಿ ವಾಟ್ಸಪ್ ಗೆ ಹಣ ಖರ್ಚಾಗುತ್ತದೆ. ಉಚಿತ ಸೇವೆ ನೀಡುವ ವಾಟ್ಸಪ್ ತನ್ನ ಬಳಕೆದಾರರ ಮಾಹಿತಿ ಸಂಗ್ರಹಿಸಿ , ಫೇಸ್ ಬುಕ್ ಜೊತೆ ಹಂಚಿಕೊಳ್ಳುವ ಮೂಲಕ ವಾಟ್ಸಪ್ ಹಣ ಗಳಿಸುತ್ತದೆ ಎನ್ನುವ ಆರೋಪ ಸಹ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಲು ಬರಲ್ಲ. ನೀವು ಯಾವುದೇ ದೇಶದವರಾಗಿದ್ದರೂ ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಬೇಕಂತೆ.