ಯೂಟ್ಯೂಬ್ ಸ್ಟಾರ್, ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ, ಲಿರಿಕ್ಸ್ ರೈಟರ್ ಹುಚ್ಚ ವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?ತನ್ನ ಸಿನಿಮಾ ನೋಡಿಲ್ಲ ಅಂತ ಜನರಿಗೆ ಬೈದ ವೆಂಕಟ್, ನಟಿ ರಮ್ಯಾ ನನ್ ಹೆಂಡ್ತಿ ಎಂದ ವೆಂಕಟ್, ವಿವಾದಗಳ ಮೂಲಕ ಸುದ್ದಿಯಾಗಿ , ಯೂ ಟ್ಯೂಬ್ ಸ್ಟಾರ್ ಆಗಿ, ಕನ್ನಡ ಬಿಗ್ ಬಾಸ್ ಸೀಸನ್ 4 ಕ್ಕೆ ಎಂಟ್ರಿಕೊಟ್ಟವರು. ಬಿಗ್ ಬಾಸ್ ಮನೆಯಲ್ಲಿಯೂ ಹುಚ್ಚಾಟ ಆಡಿ ಪ್ರತಿಸ್ಪರ್ಧಿಗೆ ಹೊಡೆದು ಮನೆಯಿಂದ ಹೊರಬಂದ ವೆಂಕಟ್. ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ.
ಇದೀಗ ಚುನಾವಣೆ ಸಮಯ. ಈಗ ಇದೇ ವೆಂಕಟ್ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸೆಣೆಸಲು ರೆಡಿಯಾಗಿದ್ದಾರೆ.
ಹಾಲಿ ಶಾಸಕ ಕಾಂಗ್ರೆಸ್ ನ ಮುನಿರತ್ನ, ಬಿಜೆಪಿಯ ಮುನಿರಾಜು, ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಜೆಡಿಎಸ್ ಗೆ ಹಾರಿರೋ ಜಿ ಎಚ್ ರಾಮಚಂದ್ರ ಅವರ ಪ್ರತಿಸ್ಪರ್ಧಿಯಾಗಿ ವೆಂಕಟ್ ಕಣದಲ್ಲಿದ್ದಾರೆ. ಹುಚ್ಚವೆಂಕಟ್ ಆಗಿ ಕಣದಲ್ಲಿಲ್ಲ ಬದಲಾಗಿ ಇವರೀಗ ಎಲ್ ವೆಂಕಟರಾಮ್…!
ವೆಂಕಟ್ ಅವರು ಎಲ್ಲರಂತೆ ಮನೆಮನೆಗೆ ಹೋಗಿ ಓಟ್ ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ. ತಾನು ಶಾಸಕನಾಗಬೇಕಿದ್ದರೆ ನೀವೇ ಮತಹಾಕಿ ಎಂದು ಮತದಾರರಿಗೆ ಆಜ್ಞೆ ಮಾಡಿದ್ದಾರೆ. ಕುಕ್ಕರ್ ಗಿಕ್ಕರ್ ಆಮಿಷ ಒಡ್ಡಲು ಬಂದರೆ ಕುಕ್ಕರಿನಿಂದ ಕೊಡುವವರ ತಲೆಯ ಮೇಲೆಯೇ ಕುಕ್ಕಿ ಎಂದಿದ್ದಾರೆ.
ವೆಂಕಟ್ ಅವರ ಅಫಿಡವಿಟ್ಟಿನಲ್ಲಿ ಹತ್ತಾರು ವಿಶೇಷತೆಗಳಿವೆ. ಇವರು ಜೆಪಿ ನಗರದ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸೇರಿದ್ದರು. ಆದರೆ ಅದನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ 13,08,733 ರೂ ಮಾತ್ರ.
ತಂದೆಯಿಂದ 1ಕೋಟಿ 7ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ವೆಂಕಟ್ ಅವರ ಕೈಯಲ್ಲಿರೋದು ಕೇವಲ 10 ಸಾವಿರ ರೂಪಾಯಿ. ಕಾರ್ಪೋರೇಷನ್ ಬ್ಯಾಂಕ್ ನಲ್ಲಿ 124.42 ರೂ, ಐಸಿಐಸಿಐ ಬ್ಯಾಂಕ್ ನಲ್ಲಿ 133.85 ರೂ, ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಸೊನ್ನೆ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 61.06ರೂಪಾಯಿ ಇದೆ. 1.5ಲಕ್ಷ ರೂ ಮೌಲ್ಯದ ಹ್ಯುಂಡೈ ಎಸೆಂಟ್ ಕಾರಿದೆ. ಅವರ ಒಟ್ಟು ಚರಾಸ್ತಿ ಮೊತ್ತ 1,60,319 ರೂ ಮಾತ್ರ…! ಯಾವುದೇ ಸ್ಥಿರಾಸ್ಥಿಯೂ ಇಲ್ಲ.