ಆರಂಭಿಕ ಆಟಗಾರ ಅಂಬಟಿ ರಾಯ್ಡು ( 82) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 70) ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್ ಗಳಿಂದ ಪರಾಭವಗೊಳಿಸಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿಯನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ಆರಂಭಿಕ ಆಟಗಾರ ಡಿಕಾಕ್ (53) ಹಾಗೂ ಎಬಿ ಡಿವಿಲಿಯರ್ಸ್ (68) ಅವರ ಅರ್ಧಶತಕದ ಬಲದಿಂದ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205ರನ್ ಗಳನ್ನು ಮಾಡಿತು.
ಸವಾಲಿನ ಮೊತ್ತ ಬೆನ್ನತ್ತಿದ ಸೂಪರ್ ಕಿಂಗ್ಸ್ ಕೇವಲ 8 ರನ್ ಗಳಿಸುವಷ್ಟರಲ್ಲಿ ವ್ಯಾಟ್ಸನ್ (7)ವಿಕೆಟ್ ಕಳೆದುಕೊಂಡಿತ್ತು. ರೈನ (11), ಬಿಲ್ಲಿಂಗ್ಸ್ (9) ಹಾಗೂ ಬಡ್ತಿ ಪಡೆದು ಬಂದ ರವೀಂದ್ರ ಜಡೇಜ (3) ಹೆಚ್ಚು ಹೊತ್ತು ನಿಲ್ಲಲಿಲ್ಲ. 74ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ತಂಡವನ್ನು ಮೇಲೆತ್ತಿದ್ದು ಆರಂಭಿಕ ಆಟಗಾರ ರಾಯ್ಡು ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಧೋನಿ. ಇವರಿಬ್ಬರು 101 ರನ್ ಜೊತೆಯಾಟ ಆಡಿದರು. ಅಂತಿಮವಾಗಿ ಬ್ರಾವೋ 7 ಎಸೆತಗಳಲ್ಲಿ ತಲಾ ಒಂದು ಸಿಕ್ಸ್ ಒಂದು ಬೌಂಡರಿ ಯೊಂದಿಗೆ 14 ರನ್ ಗಳಿಸಿ ಅಜೇಯರಾಗಿ ಉಳಿದರು.
ಧೋನಿಯ ಅಜೇಯ 70 ರನ್ ಆಟದಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಇತ್ತು. ರಾಯ್ಡು ಅವರ 82 ರನ್ ಗಳ ಆಟದಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿ ಇತ್ತು.