ಟಿಕೆಟ್ ಇಲ್ದೆ ಬಸ್ ನಲ್ಲೋ, ಟ್ರೈನ್ ನಲ್ಲೋ ಪ್ರಯಾಣ ಬೆಳೆಸೋದೇ ಕಷ್ಟ. ಎಲ್ಲಿ ಚೆಕ್ಕಿಂಗ್ ಗೆ ಬಂದು ದಂಡ ಹಾಕ್ತಾರೋ ಎಂಬ ಭಯ ಇರುತ್ತೆ. ಹೀಗಿರುವಾಗ ಪಾಸ್ ಪೋರ್ಟ್ ಇಲ್ದೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿಮಾನಯಾನ ಮಾಡಲು ಸಾಧ್ಯವೇ….?
ಖಂಡಿತಾ ಸಾಧ್ಯವಿಲ್ಲ ಎಂಬ ಉತ್ತರ ನಿಮ್ಮಿಂದ ಬರುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಪತಿಯ ಪಾಸ್ ಪೊರ್ಟ್ ಬಳಸಿಕೊಂಡು ಲಂಡನ್ ನಿಂದ ಭಾರತಕ್ಕೆ ಬಂದು ತಲುಪಿದ್ದಾರೆ.
ಭಾರತ ಮೂಲದ ಗೀತಾ ಮೊದಾ ಉದ್ಯಮಿಯಾಗಿರೋ ತನ್ನ ಪತಿಯ ಪಾಸ್ ಪೋರ್ಟ್ ನಲ್ಲಿ ಎಮಿರೇಟ್ಸ್ ವಿಮಾನದ ಮೂಲಕ ಮ್ಯಾಂಚೆಸ್ಟರ್ ನಿಂದ ದೆಹಲಿಗೆ ಬಂದಿಳಿದಿದ್ದಾಳೆ. ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಚೆಕಿಂಗ್ ಮಾಡಿದಾಗ ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಬೇಜವಬ್ದಾರಿ ತನ ಬಯಲಾಗಿದೆ.
55ವರ್ಷದ ಗೀತಾ ಮೊದಾ ಮ್ಯಾಂಚೆಸ್ಟರ್ ನಲ್ಲಿ ಅಲಂಕಾರಿಕ ವಸ್ತುಗಳ ಮಾರಾಟ ಮಾಡುತ್ತಾರೆ. ಏಪ್ರಿಲ್ 23ರಂದು ವ್ಯಾಪಾರದ ಉದ್ದೇಶದಿಂದ ದೆಹಲಿಗೆ ತೆರಳಲು ತನ್ನ ಪಾಸ್ ಪೋರ್ಟ್ ಬದಲು ಪತಿಯ ಪಾಸ್ ಪೋರ್ಟ್ ತಂದಿದ್ದಾರೆ ಎನ್ನಲಾಗಿದೆ.
ಗೀತಾ ಅವರ ಬಳಿ ಎರಡು ಪಾಸ್ ಪೋರ್ಟ್ ಗಳೂ ಸಹ ಇದ್ದವು. ಆದ್ರೆ ಬ್ಯಾಗ್ ಎರಡು ಕೆಜಿಗೂ ಅಧಿಕ ತೂಕವಿದ್ದಿದ್ದರಿಂದ ಮ್ಯಾಂಚೆಸ್ಟರ್ ಏರ್ ಪೋರ್ಟ್ ಸಿಬ್ಬಂದಿ ಬ್ಯಾಗ್ ನಲ್ಲಿದ್ದ ವಸ್ತುಗಳನ್ನು ತೆಗೆದಿದ್ದಾರೆ. ಈ ವೇಳೆ ಪಾಸ್ ಪೋರ್ಟ್ ಮಿಸ್ ಆಗಿದೆ. ಗೀತ ಅವರ ಬಳಿ ಒಸಿಐ ಕಾರ್ಡ್ ಇದ್ದಿದ್ದರಿಂದ ಸಿಬ್ಬಂದಿ ಪಾಸ್ ಪೋರ್ಟ್ ನೋಡಿಲ್ಲ ಎನ್ನಲಾಗಿದೆ.
ಘಟನೆ ಬಗ್ಗೆ ಎಮಿರೇಟ್ಸ್ ಏರ್ ಲೈನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದೆ.