ಫೇಸ್ ಬುಕ್ ವಿಚಾರದಲ್ಲಿ ಪತಿ-ಪತ್ನಿಯ ಜೊತೆ ನಡೆದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೌಮ್ಯ (23) , ಅನೂಪ್ (34) ಮೃತ ದಂಪತಿ.
ಹಾಸನ ಮೂಲದ ಇವರು ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಎಂಟನೇ ಮೈಲಿಯಲ್ಲಿ ವಾಸವಿದ್ದರು. ಅನೂಪ್ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡ್ತಿದ್ದ. ಮೂರು ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿದ್ದರು. ಇವರಿಗೆ 2ವರ್ಷದ ಗಂಡು ಮಗುವಿದ್ದು, ಸೌಮ್ಯ ಅವರ ತಾಯಿಯ ಮನೆಯಲ್ಲಿ ಬೆಳೆಯುತ್ತಿದೆ.
ಅನೂಪ್ ಮನೆಯಲ್ಲಿರುವಾಗ ಹೆಚ್ಚು ಸಮಯ ವಾಟ್ಸಪ್, ಫೇಸ್ ಬುಕ್ ನಲ್ಲಿ ಕಳೆಯುತ್ತಿದ್ದರು. ಸ್ನೇಹಿತರ ಜೊತೆ ಚಾಟ್ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಯುವತಿಯೊಬ್ಬಳ ಜೊತೆ ಅನೂಪ್ ಚಾಟ್ ಮಾಡುತ್ತಿರುವಾಗ ಅದನ್ನು ಸೌಮ್ಯ ನೋಡಿ, ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಸೌಮ್ಯ ಅಳುತ್ತಾ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಅನೂಪ್ ಸಹ ಮತ್ತೊಂದು ರೂಂ ಗೆ ಹೋಗಿ ನೇಣಿಗೆ ಶರಣಾಗಿದ್ದಾರೆ.
ಜಗಳವಾದ ಕೂಡಲೇ ಬೆಳಗ್ಗೆ 10 ಗಂಟೆ ಸುಮಾರಿಗೆ ಸೌಮ್ಯ ಸೋಮವಾರಪೇಟೆಯಲ್ಲಿರುವ ಸಹೋದರನಿಗೆ ಕರೆಮಾಡಿ ಬೆಂಗಳೂರಿಗೆ ಬಂದು ನನ್ನ ಕರೆದುಕೊಂಡು ಹೋಗು, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಹೇಳಿದ್ದರು. ಗಾಬರಿಗೊಂಡ ಸಹೋದರ ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆಮಾಡಿ ಸೌಮ್ಯಳ ಮನೆ ಬಳಿ ಹೋಗುವಂತೆ ಹೇಳಿದ್ದರು. ಅವರ ಸಂಬಂಧಿಕರು 12 ಗಂಟೆ ಸುಮಾರಿಗೆ ಸೌಮ್ಯಳ ಮನೆ ಬಳಿ ಬಂದಾಗ ಮನೆ ಒಳಗಿನಿಂದ ಲಾಕ್ ಆಗಿತ್ತು. ನಂತರ 2 ಗಂಟೆ ಸುಮಾರಿಗೆ ಸಹೋದರ ಬಂದು ಕಿಟಕಿಯಲ್ಲಿ ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ನಡುವೆ ಮದ್ವೆ ಆದಗಲಿನಿಂದ ಆಗಾಗ ಜಗಳ ಆಗುತ್ತಲೇ ಇತ್ತು. ಫೇಸ್ ಬುಕ್ ಅಲ್ಲದೆ ಬೇರೆ ಕಾರಣವೂ ಇರಬಹುದು ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಬಯಲಾಗಬೇಕಿದೆ.