ವ್ಯಕ್ತಿಯೊಬ್ಬ 5 ಲಕ್ಷ ರೂಗಳಿಗೆ ಪತ್ನಿ ಮತ್ತು ಮಕ್ಕಳನ್ನು ಮಾರಾಟ ಮಾಡಲು ಮುಂದಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಕೊಯಿಲಕುಂಟ್ಲಾ ನಿವಾಸಿ ಪಸುಪೊಲ್ಟಿ ಮಡ್ಡಿಲೆಟಿ (30) ಎಂಬಾತನೇ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು ಡೀಲ್ ಮಾಡಿಕೊಂಡ ಭೂಪ.
ಈತ ನಂದ್ಯಾಳ್ ನಗರದ ವೆಂಕಟಮ್ಮ (35) ಅವರನ್ನು ಮದ್ವೆಯಾಗಿದ್ದು,ಈ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ.
ಮಡ್ಡಿಲೆಟಿ ಮದ್ಯವ್ಯಸನಿ ಹಾಗೂ ಜೂಜು ದುರಾಭ್ಯಾಸ ಅಂಟಿಸಿಕೊಂಡಿದ್ದು, ಅತಿಯಾದ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲು ಪತ್ನಿ, ಮಕ್ಕಳ ಮಾರಾಟಕ್ಕೆ ಮುಂದಾಗಿ ದ್ದಾನೆ.
ಮೊದಲು ವಯಸ್ಸಿಗೆ ಬಂದ ತನ್ನ ಮಗಳನ್ನು ಮಾರಾಟ ಮಾಡಲು ನಿರ್ಧರಿಸಿ ಅದರಂತೆ 1.5 ಲಕ್ಷ ರೂಗಳಿಗೆ ಆಕೆಯನ್ನು ಸಂಬಂಧಿಕರೊಬ್ಬರ ಮಗನಿಗೆ ಕೊಡುವುದಾಗಿ ಯೋಚಿಸಿದ್ದ. ಆಕೆಗೆ ಆ ವೇಳೆ ವಯಸ್ಸಾಗಿರದ ಕಾರಣ ವಯಸ್ಸಿಗೆ ಬಂದಾಗ ಕೊಡುವುದಾಗಿ ಹೇಳಿ ಹಣ ಪಡೆದಿದ್ದ. ಆ ಹಣ ಖರ್ಚಾದ ಬಳಿಕ 10, 8ಮತ್ತು 6 ವರ್ಷದ ಉಳಿದ ಹೆಣ್ಣುಮಕ್ಕಳು 4 ವರ್ಷದ ಮಗನನ್ನೂ ಅಡವಿಡಲು ಯೋಚಿಸಿದ್ದನಂತೆ.
ಈತನ ಸಹೋದರ ಬುಸ್ಸಿ ಪತ್ನಿ ಮತ್ತು ಮಕ್ಕಳನ್ನು 5 ಲಕ್ಷ ರೂಗಳಿಗೆ ಮಾರಾಟ ಮಾಡಲು ಹೇಳಿದ್ದು, ಅವರಿಬ್ಬರು ಡೀಲ್ ಮಾಡಿಕೊಂಡಿದ್ದಾರೆ. ಪತ್ರಕ್ಕೆ ಸಹಿ ಹಾಕಲು ಪತ್ನಿ ವೆಂಕಟಮ್ಮ ನಿರಾಕರಿಸಿದಾಗ ಕಿರುಕುಳ ನೀಡಲಾರಂಬಿಸಿದ್ದಾನೆ. ಇದರಿಂದ ಬೇಸತ್ತ ವೆಂಕಟಮ್ಮ ತವರು ಸೇರಿದ್ದು, ನಂದ್ಯಾಳ್ ತಾಲೂಕು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.