ನಿಮಗೆ ಈಗಾಗಲೇ ಗೊತ್ತಿದೆ…’ಫಸ್ಟ್ ನ್ಯೂಸ್ ‘ ಎಂಬ ಕನ್ನಡ ಸುದ್ದಿವಾಹಿನಿ ಶೀಘ್ರದಲ್ಲೇ ಲಾಂಚ್ ಆಗಲಿದೆ. ದೃಶ್ಯಮಾಧ್ಯಮ ಲೋಕದ ದಿಗ್ಗಜರಾದ ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಉದಯಿಸುತ್ತಿರೋ ಈ ಚಾನಲ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಈ ಚಾನಲ್ ಗೆ ಈಗ ಎಸ್ . ದಿವಾಕರ್ ಸೇರಿದ್ದಾರೆ. ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿ ಫಸ್ಟ್ ನ್ಯೂಸ್ ಕುಟುಂಬ ಸೇರಿರೋ ದಿವಾಕರ್ ಅವರ ಜೊತೆಗಿದೆ ಸುಮಾರು 25 ವರ್ಷಗಳ ಸುದೀರ್ಘ ಅನುಭವ.
ಪ್ರಜಾ ಟಿವಿ, ಈ ಟಿವಿ, ಟಿವಿ9 ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ದಿವಾಕರ್ ಅವರದ್ದು.
ಪ್ರಜಾ ಟಿವಿಯ ಬ್ಯುಸ್ ನೆಸ್ ಹೆಡ್ ಆಗಿದ್ದ ಇವರು, ಫಸ್ಟ್ ನ್ಯೂಸ್ ನಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.
1994 ರಲ್ಲಿ ಉದಯ ಟಿವಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ವೃತ್ತಿ ಜೀವನ ಆರಂಭಿಸಿದವರು ದಿವಾಕರ್. ನಂತರ ಟಿವಿ9ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ, ಬಳಿಕ ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿದರು. ಪಬ್ಲಿಕ್ ಟಿವಿಯಲ್ಲೂ ಕೆಲಕಾಲ ಈ ಜವಬ್ದಾರಿ ಹೊತ್ತಿದ್ದರು. ಈ ಟಿವಿಯಲ್ಲಿ ಸೇಲ್ಸ್ ವಿಭಾಗದ ನ್ಯಾಷನಲ್ ಹೆಡ್ ಆಗಿದ್ದರು.
ಇಷ್ಟೆಲ್ಲಾ ಅನುಭವದ ಬುತ್ತಿಯನ್ನು ತಮ್ಮೊಡನೆ ಕಟ್ಟಿಕೊಂಡಿರುವ ದಿವಾಕರ್ ಅವರು, ಯಾವುದೂ ಅಸಾಧ್ಯವಲ್ಲ ಎಂಬ ಘೋಷವಾಕ್ಯದೊಂದಿಗೆ ಬರಲಿರುವ ಫಸ್ಟ್ ನ್ಯೂಸ್ ಗೆ ತನ್ನ ಅನುಭವದ ಧಾರೆ ಎರೆಯಲು ಉತ್ಸುಕರಾಗಿದ್ದಾರೆ.