ನಾವು ರಾಬಿನ್ ಹುಡ್ ಕಥೆಗಳು ಕೇಳಿದ್ದೇವೆ, ಆತನ ಕುರಿತ ಸಿನಿಮಾಗಳನ್ನು ನೋಡಿದ್ದೇವೆ. ಆತ ಶ್ರೀಮಂತರಿಂದ ಹಣವನ್ನು ಕದ್ದು ಬಡವರಿಗೆ ಹಂಚುತ್ತಿದ್ದ. ಆದ್ದರಿಂದ ಆತ ಸಮಾಜದಲ್ಲಿ ಉತ್ತಮ ಹೆಸರು ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಭಾರತದಲ್ಲೊಬ್ಬ ರಾಬಿನ್ ಹುಡ್ ಇದ್ದ ಎಂಬ ಸಂಗತಿ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆತ ಶ್ರೀಮಂತರಿಂದ ಹಣ ದೋಚಿ ಬಡವರಿಗೆ ಹಂಚುತ್ತಿದ್ದ. ಆದ್ದರಿಂದ ಆತನ ನೆನಪಿಗಾಗಿ ಕೇರಳ ರಾಜ್ಯದಲ್ಲಿ ಒಂದು ದೇವಸ್ಥಾನವನ್ನೇ ಕಟ್ಟಿಸಲಾಗಿದೆ..!
ಯೆಸ್.. ಕಾಯಂಕೋಳಂ ಕೋಚುನ್ನಿ ಎಂಬಾತ 19ನೇ ಶತಮಾನದಲ್ಲಿ ಕೇರಳವನ್ನೇ ನಡುಗಿಸಿದ್ದ ಕಳ್ಳ. ಈತ ಹುಟ್ಟಿದ್ದು, ಬೆಳೆದದ್ದು ಹಾಗೂ ದರೋಡೆ ಮಾಡಿದ್ದೆಲ್ಲವೂ ಟ್ರಾವಂಕೂರ್ ನಲ್ಲಿ. ಶ್ರೀಮಂತರನ್ನು ಅಡ್ಡಗಟ್ಟಿ, ದರೋಡೆ ಮಾಡುವುದೇ ಕೋಚುನ್ನಿ ಕೆಲಸವಾಗಿತ್ತು. ಅದರಿಂದ ಬಂದ ಹಣ, ಒಡವೆಗಳನ್ನು ಬಡ ಜನರಿಗೆ ದಾನ ಮಾಡುತ್ತಿದ್ದ. ಹೀಗಾಗಿ ಟ್ರಾವಂಕೂರ್ ಶ್ರೀಮಂತರಿಗೆ ದೊಡ್ಡ ತಲೆನೋವಾಗಿದ್ದರೂ ಕೂಡಾ ಕೋಚುನ್ನಿಯು ಬಡ ಜನರ ಪಾಲಿನ ಹೀರೋ ಆಗಿದ್ದ. ಆತ ಬಡ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಿದ್ದ. ಹೀಗೆ ನೂರಾರು ಮಂದಿ ಶ್ರೀಮಂತರನ್ನು ದೋಚಿ ಸಾವಿರಾರು ಜನ ಬಡವರಿಗೆ ಸಹಾಯ ಮಾಡಿದ್ದ ಕೋಚುನ್ನಿ 1859ರಲ್ಲಿ ಸೈನಿಕರ ಕೈಗೆ ಸಿಕ್ಕಿಬಿದ್ದ. ಬಳಿಕ ಆತನನ್ನು ತಿರುವನಂತಪುರಂನ ಪೂಜಾಪುರ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು.
ಕೋಚುನ್ನಿಯು ಮೂಲತಃ ಮುಸಲ್ಮಾನನಾಗಿದ್ದ. ಆದರೆ ಯಾವುದೇ ಧರ್ಮ ಬೇಧ ಮಾಡದೇ ಕಡುಬಡವರಿಗೆ ಸಹಾಯ ಮಾಡುತ್ತಿದ್ದ. ಹೀಗಾಗಿ ಹಿಂದು, ಮುಸ್ಲಿಂ ಎಂಬ ಭೇದ ಭಾವ ಮಾಡದೇ ಅಲ್ಲಿನ ಜನರು ಪಾತಂಥಿಟ್ಟ ಎಂಬಲ್ಲಿ ಕೋಚುನ್ನಿಗಾಗಿಯೇ ದೇವಾಲಯ ನಿರ್ಮಿಸಿ, ಕೋಚುನ್ನಿ ಪ್ರತಿಮೆ ಪ್ರತಿಷ್ಠಾಪಿಸಿದರು. ಹೀಗೆ ಸುಮಾರು 150 ವರ್ಷಗಳ ಹಿಂದಿನಿಂದಲೂ, ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಹಿಂದು ಹಾಗೂ ಮುಸ್ಲಿಂ ಭಕ್ತರು ಒಂದಾಗಿ ಬಂದು ಆತನಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಕೋಚುನ್ನಿ ದೇವಾಲಯಕ್ಕೆಂದೇ ಒಬ್ಬರು ಅರ್ಚಕರಿದ್ದು, ಪ್ರತಿ ತಿಂಗಳು ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಇನ್ನೊಂದು ವಿಶೇಷವೆಂದರೆ ಆ ಸಂದರ್ಭದಲ್ಲಿ ಕೋಚುನ್ನಿಗೆ ಇಷ್ಟವಾಗಿದ್ದ ದೀಪ, ಅಗರಬತ್ತಿ, ಅಡಿಕೆ ಎಲೆ, ಪಾನ್ ಬೀಡ, ತಂಬಾಕು, ಮದ್ಯ ಹಾಗೂ ಗಾಂಜಾಗಳನ್ನೂ ತಂದು ದೇವಾಲಯದಲ್ಲಿ ಇಡಲಾಗುತ್ತದೆ..!
ಈಗ ಸಮಾಜದಲ್ಲಿ ಹತ್ತಾರು ಜನರು ಕಳ್ಳರು ಸಿಗುತ್ತಾರೆ. ಅವರು ತಮ್ಮ ಹಿತಾಸಕ್ತಿಯನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಕೋಚುನ್ನಿಯಂತಹವರು ಅದಕ್ಕೆ ತದ್ವಿರುದ್ಧ. ಸಮಾಜ ಸೇವೆಯೇ ಆತನ ಆದ್ಯ ಕರ್ತವ್ಯವಾಗಿತ್ತು. ಆದ್ದರಿಂದಲೇ ಶತಮಾನಗಳು ಕಳೆದರೂ ಕೂಡಾ ಕೋಚುನ್ನಿಯ ಹೆಸರು ಇಂದಿಗೂ ಉಳಿದುಕೊಂಡಿದೆ.