ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದು ,ಕಾರು ನನ್ನದಲ್ಲ ಎಂದಿದ್ದಾರೆ.
ಜೆಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ಅಪಾರ್ಟ್ ಮೆಂಟ್ ಮುಂಭಾಗದ ನೋ ಪಾರ್ಕಿಂಗ್ ಝೋನ್ ನಲ್ಲಿ ಪದೇ ಪದೇ ಕಾರನ್ನು ಪಾರ್ಕ್ ಮಾಡಲಾಗುತ್ತದೆ ಎಂದು ಜೆಪಿ ನಗರದ ನಿವಾಸಿಯಾಗಿರುವ ಧನಂಜಯ್ ಪದ್ಮನಾಭಾಚಾರ್ ಆರೋಪಿಸಿ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಜೆಪಿ ನಗರ ನಿವಾಸಿಗಳು ಕಾರು ಯಾರದು ಎಂದು ತಿಳಿದುಕೊಳ್ಳಲು ಅವರೇ ಕಾರ್ ನಂಬರ್ ಬರೆದುಕೊಂಡು ಆರ್ ಟಿಓಗೆ ಹೋಗಿ ರೆಕಾರ್ಡ್ ನಲ್ಲಿ ಚೆಕ್ ಮಾಡಿಸಿದ್ದರು. ಅಲ್ಲಿ ರಕ್ಷಿತ್ ಶೆಟ್ಟಿ ಅವರದ್ದು ಎಂದು ತಿಳಿದು ಬಂದಿತ್ತು. ಬಳಿಕ ಸಂಚಾರದ ನೀತಿ, ನಿಯಮಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ಹೀರೋಗಳಿಗೆ ಬೇರೆ ನಿಯಮವಿದೆಯೇ ಎಂದು ಧನಂಜಯ್ ಅವರು ಟ್ವೀಟ್ ಮಾಡೋ ಮೂಲಕ ಪ್ರಶ್ನೆ ಮಾಡಿದ್ದರು.
ಜವಾಬ್ದಾರಿಯುತ ಯುವ ನಟರೇ ಈ ರೀತಿ ನಡೆದುಕೊಂಡರೆ ಹೇಗೆ ಅಂತಾ ಜನ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನೀವು ರಿಯಲ್ ಲೈಫ್ ನಲ್ಲಿ ಹೀರೋ ಆಗಬೇಕು ರೀಲ್ ಲೈಫ್ ನಲ್ಲಿ ಮಾತ್ರ ಅಲ್ಲ ಎಂದು ಟ್ವೀಟ್ ಮಾಡಿದ್ದರು.ಇದಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಆ ಕಾರ್ ನನ್ನದಲ್ಲ. ನಾನು ಕಾರನ್ನು ನನ್ನ ಗೆಳೆಯನಿಗೆ ಮಾರಾಟ ಮಾಡಿ ಒಂದು ವರ್ಷವಾಗಿದೆ. ಜೆಪಿ ನಗರದಲ್ಲಿ ಒಂದು ಸ್ಟುಡಿಯೋ ಇದೆ. ಅದರ ಪಕ್ಕದಲ್ಲಿಯೇ ಪಾರ್ಕ್ ಮಾಡಿದ್ದಾರೆ. ಆದರೆ ನಾನು ಅಲ್ಲಿಗೆ ಹೋಗಿಲ್ಲ. ಪಾರ್ಕಿಂಗ್ ಬೋರ್ಡ್ ನ್ನು ಸರ್ಕಾರವರಾಗಲಿ ಅಥವಾ ಪೊಲೀಸರು ಹಾಕಿಲ್ಲ. ಅಲ್ಲಿನ ನಿವಾಸಿಗಳೇ ಹಾಕಿದ್ದಾರೆ. ಅಲ್ಲಿ ಕಾರ್ ಪಾರ್ಕಿಂಗ್ ಮಾಡುವುದು ತಪ್ಪು. ಆದರೆ ನಾನು ಕಾರ್ ಪಾರ್ಕ್ ಮಾಡಿಲ್ಲ. ತಪ್ಪು ನನ್ನದಲ್ಲ ಎಂದಿದ್ದಾರೆ.