ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೈಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆ ಡಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಓರ್ವ ಬಾಲಕಿಯನ್ನು ರಕ್ಷಿಸಿ ಮೂವರು ಮಹಿಳೆಯರನ್ನು ಅರೆಸ್ಟ್ ಮಾಡಿದ್ದಾರೆ.
ದಾವಣಗೆರೆ ಮೂಲದ ಗೀತ (33), ಅನಿತಾ ಅಲಿಯಾಸ್ ಕಾವ್ಯ (34) , ರೂಪಾ (28) ಬಂಧಿತರು. ಪ್ರಮುಖ ಆರೋಪಿ ಶಿವು ಮತ್ತು ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ.
ಬಂಧಿತ ಮಹಿಳೆಯರು ದಾವಣಗೆರೆ, ಗದಗ ಸೇರಿದಂತೆ ನಾನಾ ಕಡೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅಪ್ರಾಪ್ತ ಬಾಲಕಿಯರಿಗೆ ಹಣದ ಆಸೆ ತೋರಿಸಿ ವೈಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಬಾಲಕಿಯರನ್ನು ಅಪಹರಿಸಿ ಬೇರೆ ಬೇರೆ ಕಡೆಗಳಿಗೆ ಸಾಗಿಸುತ್ತಿದ್ದರು.
ಆರೋಪಿ ಮಹಿಳೆಯರು ದಾವಣಗೆರೆ ಮನೆಯೊಂದರಲ್ಲಿ ವಾಸವಿದ್ದರು. ಇವರೊಡನೆ 16ವರ್ಷದ ಬಾಲಕಿಯನ್ನು ಸಹ ಇರಿಸಿಕೊಂಡಿದ್ದರು. ಮೈತ್ರಿ ಉಜ್ವಲ ಸಂಸ್ಥೆ ಸದಸ್ಯರು ಅನುಮಾನ ವ್ಯಕ್ತಪಡಿಸಿ ಬಾಲಕಿಯನ್ನು ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಗ ಈಕೆಗೆ ಎಚ್ ಐವಿ ಇರುವುದು ತಿಳಿದಿದೆ.ಆ ಸಂತ್ರಸ್ತ ಬಾಲಕಿಯನ್ನು ವಿಚಾರಿಸಲಾಗಿ ಉದ್ಯೋಗ ಮತ್ತು ಹಣದ ಆಮಿಷವೊಡ್ಡಿ ವೈಶ್ಯಾವಾಟಿಕೆಗೆ ತಳ್ಳಿರುವುದು ಬೆಳಕಿಗೆ ಬಂದಿದೆ. ಬಾಲಕಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ ಪಿ ಆರ್ ಚೇತನ್ ತಿಳಿಸಿದ್ದಾರೆ.