ವಾಹನ ಸವಾರರು ಪೊಲೀಸರಿಗೆ ವಾಹನ ದಾಖಲೆಗಳನ್ನು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ತೋರಿಸಬಹುದು ಎಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.
ಕೇಂದ್ರ ಸಾರಿಗೆ ಇಲಾಖೆ ದಾಖಲೆಗಳನ್ನು ಡಿಜಿ ಲಾಕರ್ ನಲ್ಲೇ ಪರಿಶೀಲಿಸಬಹುದು ಎಂದು ಮಾನ್ಯತೆ ನೀಡಿ ಆದೇಶ ಹೊರಡಿಸಿದೆ.
ಪೊಲೀಸರು , ಸಾರಿಗೆ ಇಲಾಖೆ ಅಧಿಕಾರಿಗಳು ಅಡ್ಡ ಹಾಕಿ ದಾಖಲೆ ಕೇಳಿದರೆ , ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡ ಹಾಗೂ ಕಾನೂನು ಕ್ರಮದಿಂದ ಪಾರಾಗಬಹುದು.
ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆಪಲ್ ಐಓಎಸ್ ಮುಖಾಂತರ ಡಿಜಿಲಾಕರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಸ್ಮಾರ್ಟ್ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದೆಂದು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ಆ್ಯಪ್ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ.
ಇದಲ್ಲದೇ ಕುಡಿದು, ಅಜಾಗರೂಕ ಚಾಲನೆ ಹಾಗೂ ಇನ್ನು ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮೂಲ ಚಾಲನಾ ಪತ್ರವನ್ನು ಮುಟ್ಟುಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ.