ಡಾಕ್ಟರ್ ಬರೆದಿದ್ದು ಮೆಡಿಕಲ್ ಶಾಪ್ ಅವರಿಗೆ ಅಥವಾ ಇನ್ನೊಬ್ಬ ಡಾಕ್ಟರ್ ಗೆ ಮಾತ್ರ ಅರ್ಥವಾಗೋದು ಅಂತ ನಾವು-ನೀವು ಹೇಳ್ತೀವಿ. ಇದೊಂದತರ ಸತ್ಯ ಕೂಡ.
ಆದ್ರೆ, ಬರೆದಿದ್ದು ಅರ್ಥ ಆಗಲ್ಲ, ಬರವಣಿಗೆ ಕೆಟ್ಟದ್ದಿದೆ ಅಂತ ಎಲ್ಲಾದರೂ ವೈದ್ಯರಿಗೆ ದಂಡ ಹಾಕದಿದ್ಯಾ? ಉತ್ತರ ಪ್ರದೇಶದ ನ್ಯಾಯಾಲಯ ಕೆಟ್ಟ ಬರವಣಿಗೆ ಎಂದು ಮೂವರು ವೈದ್ಯರಿಗೆ ತಲಾ 5000 ರೂ ದಂಡ ವಿಧಿಸಿದೆ.
ನ್ಯಾಯಾಧೀಶ ಅಜಯ್ ಲಂಬಾ ಮತ್ತು ನ್ಯಾಯಾಧೀಶ ಸಂಜಯ್ ಹರಕುಲಿ ಅವರನ್ನೊಳಗೊಂಡ ಅಲಹಬಾದ್ ನ ಲಕ್ನೋ ವಿಭಾಗೀಯ ಪೀಠ, ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ವೈದ್ಯರಿಗೆ ಈ ರೀತಿ ದಂಡ ವಿಧಿಸಿದೆ.
ಮೂರು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೆ ಸಂತ್ರಸ್ತರು ವೈದ್ಯರು ಬರೆದಿದ್ದು ನಮಗೆ ಅರ್ಥವೇ ಆಗಲಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.
ಸೀತಾಪುರ್, ಉನ್ನಾವೊ ಮತ್ತು ಗೊಂಡಾ ಜಿಲ್ಲಾ ಆಸ್ಪತ್ರೆಗಳ ವೈದ್ಯರಾದ ಡಾ.ಟಿ.ಪಿ. ಜೈಸ್ವಾಲ್, ಡಾ.ಪಿ.ಕೆ. ಗೋಯೆಲ್ ಮತ್ತು ಡಾ. ಆಶಿಶ್ ಸಕ್ಸೆನಾ ಅವರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ವೈದ್ಯಕೀಯ ಮಂಡಳಿಗೆ ನೋಟೀಸ್ ಜಾರಿ ಮಾಡಿರುವ ನ್ಯಾಯಾಲಯ, ಮುಂದಿನ ದಿನಗಳಲ್ಲಿ ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಮ ಓದುವ, ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವೈದ್ಯರು ಬರೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಂಪ್ಯೂಟರ್ ಬರಹದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಮರಣೋತ್ತರ ಪರೀಕ್ಷೆ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಕೂಡ ವೈದ್ಯರ ಕೆಟ್ಟ ಬರವಣಿಗೆಯಿಂದ ಅರ್ಥವಾಗದೇ ಪ್ರಕರಣದ ತೀರ್ಪಿನ ಮೇಲೆ ಪರಿಣಾಮ ಆಗುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಬರಹ ಪೊಲೀಸರಿಗೆ, ವಕೀಲರಿಗೆ ಎಲ್ಲರಿಗೂ ಅರ್ಥವಾಗುವ ರೀತಿ ಇರಬೇಕು ಎಂದು ನ್ಯಾಯಾಲಯ ಹೇಳಿದೆ.