ಪತಿಯರು ಅಂದ್ರೆ ಪುರುಷರು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಪುನರಾವರ್ತಿತ ಸ್ವಾಭಾವಿಕ ಗರ್ಭಪಾತ ಪ್ರಮಾಣ ಕಡಿಮೆಯಾಗುತ್ತದೆ. ಏಕೆಂದರೆ ಯೋಗದಿಂದ ವೀರ್ಯಾಣು ಡಿಎನ್ಎದಲ್ಲಿನ ಗುಣಮಟ್ಟ ವೃದ್ಧಿಯಾಗುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಯ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಅಂಗರಚನಾಶಾಸ್ತ್ರ ವಿಭಾಗದ ಪರಿಣಿತರು ಈ ಸಂಶೋಧನೆ ನಡೆಸಿದ್ದಾರೆ. ಈ ಕುರಿತಾದ ವರದಿ ಆಂಡ್ರೋಲೊಜಿಯ ಎಂಬ ಮೆಡಿಕಲ್ ಜರ್ನಲ್ನ ಅಕ್ಟೋಬರ್ ಆವೃತ್ತಿ ಹಾಗೂ ಅಂತಾರಾಷ್ಟ್ರೀಯ ಜರ್ನಲ್ ಆಫ್ ಸೈಂಟಿಫಿಕ್ ರಿಸರ್ಚ್ನ ಆವೃತ್ತಿಯಲ್ಲೂ ಪ್ರಕಟವಾಗಿದೆ.
ಆಗಾಗ ಮರುಕಳಿಸುತ್ತಿದ್ದ ಸ್ವಾಭಾವಿಕ ಗರ್ಭಪಾತ ಹೊಂದುತ್ತಿದ್ದ ದಂಪತಿಗಳಲ್ಲಿ 60 ಪುರುಷರನ್ನು ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಅಧ್ಯಯನದ ಭಾಗವಾಗಿ ಬಳಸಲಾಯಿತು. ಅಧ್ಯಯನಕ್ಕೆ ಆಯ್ಕೆಯಾದ ಪುರುಷರು ಯೋಗ ಮಾಡಿದ ಇತಿಹಾಸವನ್ನೇ ಹೊಂದಿರಲಿಲ್ಲ. ಅವರನ್ನು 90 ದಿನಗಳವರೆಗೆ ನಿಯಮಿತವಾಗಿ ಯೋಗ ಮಾಡುವಂತೆ ಹೇಳಲಾಯಿತು ಎಂದು ಏಮ್ಸ್ನ ಅಂಗರಚನಾಶಾಸ್ತ್ರ ವಿಭಾಗದ ಮಾಲಿಕುಲರ್ ರಿಪ್ರೊಡಕ್ಸನ್ ಮತ್ತು ಜೆನೆಟಿಕ್ಸ್ ಪ್ರಯೋಗಾಲಯದ ಉಸ್ತುವಾರಿ ರಿಮಾ ದಾದ ತಿಳಿಸಿದರು.
ಮೂಲ ಆಕ್ಸಿಡೇಟಿವ್ ಒತ್ತಡ ಹಾಗೂ ವೀರ್ಯ ಡಿಎನ್ಎ ಹಾನಿಯು ಸಾಮಾನ್ಯ ಭ್ರೂಣದ ಅಭಿವೃದ್ಧಿಯ ಫಲೀಕರಣವನ್ನು ಕುಂಠಿತಗೊಳಿಸುವುದರಿಂದ ಗರ್ಭಪಾತವಾಗುತ್ತದೆ. ಅನಾರೋಗ್ಯಕರ ಹವ್ಯಾಸಗಳಾದ ಧೂಮಪಾನ, ಅತಿ ಹೆಚ್ಚು ಮದ್ಯ ಸೇವನೆಯು ಡಿಎನ್ಎಗೆ ಹಾನಿಯುಂಟು ಮಾಡುತ್ತದೆ. ಅಲ್ಲದೆ, ಹೆಚ್ಚು ಕ್ಯಾಲೋರಿ ಹೊಂದಿದ ಹಾಗೂ ಪೌಷ್ಟಿಕಾಂಶವಿಲ್ಲದ ಆಹಾರ ಸೇವನೆ, ಜಡವಾದ ಜೀವನಶೈಲಿ, ಅತಿಯಾದ ಮೊಬೈಲ್ ಬಳಕೆ, ಅತಿಯಾದ ಮಾನಸಿಕ ಒತ್ತಡ ಹಾಗೂ ಒಬೆಸಿಟಿಯಿಂದ ಡಿಎನ್ಎ ಹಾನಿಗೊಳಗಾಗಿ ಗರ್ಭಪಾತವಾಗುವ ಸಂಭವ ಹೆಚ್ಚಾಗಿದೆ ಎಂದು ಹೇಳಲಾಗಿದೆ.