ಬೆಂಗಳೂರಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಾಣೆಯಾಗಿ 8 ತಿಂಗಳಾದ ಮೇಲೆ ಮಂಗಳಮುಖಿ ಆಗಿ ಸಿಕ್ಕಿದ್ದಾನೆ
ಮಂಡ್ಯದ ಕೆಆರ್ ಪೇಟೆ ತಾಲೂಕಿನ ಹಳ್ಳಿಯೊಂದರ ಬಾಲಕ ಬೆಂಗಳೂರಿನ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು 10ನೇ ತರಗತಿ ಓದುತ್ತಿದ್ದ. ಶಾಲೆಗೆ ರಜೆ ಇದ್ದಿದ್ದರಿಂದ 8 ತಿಂಗಳ ಹಿಂದೆ ಊರಿಗೆ ಹೋಗಿದ್ದ ಪೋಷಕರು, ಸಂಬಂಧಿಕರು, ಬಾಲ್ಯದ ಸ್ನೇಹಿತರೊಂದಿಗೆ ಕಾಲ ಕಳೆದಿದ್ದ. ರಜೆ ಮುಗಿಸಿ, ಬೆಂಗಳೂರಿಗೆ ಹೋಗುದಾಗಿ ಹೇಳಿ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ.
ಬಾಲಕ ನಾಪತ್ತೆಯಾಗಿದ್ದರಿಂದ ಪೋಷಕರು, ಕೆಆರ್ ಪೇಟೆ ಪಟ್ಟಣದ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಸುಮಾರು ದಿನಗಳು ಕಳೆದರೂ ಬಾಲಕ ಸಿಗದಿದ್ದರಿಂದ ಪೋಷಕರು ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದರು.
ಬಾಲಕನ ಗ್ರಾಮದ ಮಂಜು ಎಂಬವರು ಎಳೆನೀರು ಮಾರಾಟಕ್ಕೆ ಕೆಆರ್ ಪೇಟೆಯ ಸಂತೆಗೆ ಬಂದಿದ್ದಾಗ . ಈ ವೇಳೆ ಬಾಲಕ ಮಂಗಳಮುಖಿಯರ ಜೊತೆಗೆ ಅಂಗಡಿಗಳಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮಂಜು ನೋಡಿದ್ದಾರೆ. ಬಾಲಕನನ್ನು ಹಿಡಿಯಲು ಗ್ರಾಮಸ್ಥರು ಸೇರುತ್ತಿದ್ದಂತೆ, ಬಾಲಕ ಹಾಗೂ ಮಂಗಳಮುಖಿಯರು ಆಟೋದಲ್ಲಿ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರೊಬ್ಬರು ತಮ್ಮ ಬೈಕ್ ಏರಿ, ಆಟೋವನ್ನು ಹಿಂಬಾಲಿಸಿ ಹೊಸ ಕಿಕ್ಕೇರಿ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕೆಆರ್ ಪೇಟೆ ನಗರ ಠಾಣೆಗೆ ಬಾಲಕ ಹಾಗೂ ಮಂಗಳಮುಖಿಯರನ್ನು ಕರೆತಂದಿದ್ದಾರೆ.
ಬಾಲಕನನ್ನು ತೃತೀಯ ಲಿಂಗಿಯಾಗಿ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ವಸೂಲಿ ಮಾಡಲು ಬಾಲಕನನ್ನು ಕೆಲ ಮಂಗಳಮುಖಿಯರು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ವ್ಯಾಪಕ ತನಿಖೆ ನಡೆಸಿ, ಸತ್ಯ ಬಯಲಿಗೆಳೆಬೇಕು. ಮುಂದಿನ ದಿನಗಳಲ್ಲಿ ಅಪ್ರಾಪ್ತ ಬಾಲಕರು ಇಂತಹ ಕೃತ್ಯಕ್ಕೆ ಬಲಿಯಾಗದಂತೆ ತಡೆಯಬೇಕು ಎಂದು ಬಾಲಕನ ಪೋಷಕರ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೃತೀಯ ಲಿಂಗಿಯಾಗಿ ಬದಲಾದ ಬಾಲಕನೊಂದಿಗೆ ಮೂವರು ತೃತೀಯ ಲಿಂಗಿಗಳು ಪೊಲೀಸರ ವಶದಲ್ಲಿದ್ದಾರೆ.