ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ಲಖನೌನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದ ಆರೋಪದಡಿ ಮಂಗಳೂರಿನ ಆಶಾ ಪ್ರಕಾಶ್ (52) ಎಂಬುವರನ್ನು ಬಂಧಿಸಿದ ಬನಶಂಕರಿ ಪೋಲಿಸ್
- 2018ರ ಡಿಸೆಂಬರ್ ಕೊನೆ ವಾರದಲ್ಲಿ ಲಖನೌ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಆಶಾ, ‘ನಾನು ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ. ಕೆಲಸದ ನಿಮಿತ್ತ ಲಖನೌಗೆ ಬರುತ್ತಿದ್ದೇನೆ. ಡಿ.29ರಿಂದ ಜ.3ರವರೆಗೆ ಒಳ್ಳೆಯ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ’ ಎಂದು ಹೇಳಿದ್ದರು. ಆ ಮಾತನ್ನು ನಂಬಿ ಅವರು ರೂಂ ಬುಕ್ ಮಾಡಿದ್ದರು.
ಮೂರು ದಿನವಾದರೂ ರೂಪಾ ಬಾರದಿದ್ದಾಗ, ಅಲ್ಲಿನ ಅಧಿಕಾರಿಯೊಬ್ಬರು ಕರೆ ಮಾಡಿ ವಿಚಾರಿಸಿದ್ದರು. ‘ನಾನು ಯಾವುದೇ ರೂಮ್ ಬುಕ್ ಮಾಡಿಲ್ಲ’ ಎಂದು ರೂಪಾ ಹೇಳಿದ್ದರು.
ಆಶಾ ಮೊಬೈಲ್ ಕಳವಾದ ಸಂಬಂಧ ಕೊಟ್ಟಿದ್ದ ದೂರಿನಲ್ಲಿ ಐಎಂಇಐ ಸಂಖ್ಯೆಯನ್ನು ಬರೆದಿದ್ದರು. ಆದರೆ, ಅವರು ಈಗ ಅದೇ ಐಎಂಇಐ ಸಂಖ್ಯೆಯ ಮೊಬೈಲನ್ನು ಬಳಸುತ್ತಿದ್ದಾರೆ. ಕಳವಾಗಿತ್ತು ಎಂದಾದರೆ ಈ ಮೊಬೈಲ್ ಯಾವುದು? ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆ ವಿವರ (ಸಿಡಿಆರ್) ಆಧರಿಸಿ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದರು.