ಸಚಿವ ಹೆಚ್.ಡಿ ರೇವಣ್ಣ ಸುಮಲತಾ ಅಂಬರೀಶ್ ಅವರ ಬಗ್ಗೆ ನೀಡಿದ್ದ ಹೇಳಿಕೆ ತುಂಬಾ ವಿವಾದವನ್ನು ಹುಟ್ಟುಹಾಕಿದೆ. ಸ್ವತಃ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗಿದು ನುಂಗಲಾರದ ತುಪ್ಪವಾಗಿದೆ.
‘ಗಂಡ ಸತ್ತು ಇನ್ನೂ 2 ತಿಂಗಳು ಆಗಿಲ್ಲ. ಸುಮಲತಾಗೆ ರಾಜಕೀಯ ಬೇಕಿತ್ತಾ’ ಎಂಬ ಹೇಳಿಕೆ ನೀಡಿದ್ದ ರೇವಣ್ಣ ಬಳಿಕ ಕೂಡ ತಪ್ಪು ತಿದ್ದುಕೊಳ್ಳದೇ, ‘ನಾನ್ಯೇಕೆ ಕ್ಷಮೆ ಕೇಳಲಿ. ಸುಮಲತಾ ಇಷ್ಟು ದಿನ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದರು. ಈಗ ರಾಜಕೀಯದಲ್ಲಿ ಬಣ್ಣ ಹಚ್ಚುತ್ತಿದ್ದಾರೆ’ ಎಂದು ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದರು.
ರೇವಣ್ಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತಹದ್ದಂತೂ ಅಲ್ಲ. ಎಲೆಕ್ಷನ್ ಹತ್ತಿರ ಇರುವುದರಿಂದ ಸುಮ್ಮನೆ ಇರಲೂ ಸಾಧ್ಯವಿಲ್ಲ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರೇ ಅಣ್ಣ ರೇವಣ್ಣ ಅವರ ಪರವಾಗಿ ಕ್ಷಮೆಯಾಚಿಸಿದ್ದಾರೆ. ರೇವಣ್ಣ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರೇವಣ್ಣ ಎಚ್ಚರಿಕೆಯಿಂದ ಮಾತನಾಡಬೇಕಿತ್ತು. ನಮ್ಮ ಕುಟುಂಬದವರು ಮಹಿಳೆಯರಿಗೆ, ಜನಸಾಮಾನ್ಯರಿಗೆ, ಯಾರಿಗೂ ಅಗೌರವ ಸಲ್ಲಿಸಿದವರಲ್ಲ. ಈಗ ರೇವಣ್ಣ ಅವರ ಹೇಳಿಕೆಯಿಂದ ನೋವಾಗಿದ್ದರೆ ನಾನೇ ಕ್ಷಮೆ ಕೇಳುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
ಅಣ್ಣ ರೇವಣ್ಣ ಅವರ ಎಡವಟ್ಟಿಗೆ ಕುಮಾರಸ್ವಾಮಿ ಅವರು ಕ್ಷಮೆ ಕೇಳಲೇ ಬೇಕಿದ್ದುದು ಅನಿವಾರ್ಯವಾಗಿತ್ತು. ಮಗ ನಿಖಿಲ್ ಕುಮಾರಸ್ವಾಮಿ ಸುಮಲತಾ ಅವರ ವಿರುದ್ಧ ಕಣಕ್ಕಿಳಿಯುತ್ತಿರುವುದರಿಂದ ರೇವಣ್ಣ ಹೇಳಿಕೆ ಜೆಡಿಎಸ್ ಮತ್ತು ನಿಖಿಲ್ಗೆ ಭಾರೀ ಪೆಟ್ಟು. ಇದೀಗ ಕುಮಾರಸ್ವಾಮಿ ಡ್ಯಾಮೇಜ್ ಕಂಟ್ರೋಲ್ಗೆ ಕ್ಷಮೆಯಾಚನೆ ಅಸ್ತ್ರ ಬಳಸಿದ್ದಾರೆ. ಆದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಅಲ್ಲವೇ.?
ರೇವಣ್ಣ ಹೇಳಿಕೆಗೆ ಸಿಎಂ ಕ್ಷಮೆಯಾಚನೆ; ಅಷ್ಟಕ್ಕೂ ಕುಮಾರಸ್ವಾಮಿ ಕ್ಷಮೆ ಕೇಳಿದ್ದು ಯಾಕೆ ಗೊತ್ತೇ..?
Date: