ಮುಂಬರುವ ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಬದಲಾಗಿ ಕೆಲವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ .
ಇಂದು ಸ್ಪಷ್ಟನೆಯನ್ನ ನೀಡಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಷ್ ಅವರು, ರಾಜಕೀಯದ ಬಗ್ಗೆ ತಮ್ಮ ಮುಂದಿನ ನಿರ್ಧಾರಗಳನ್ನು ಮಾರ್ಚ್ 18ರ ಒಳಗಾಗಿ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸುತ್ತಿದ್ದಾರೆ.
ಕಾಂಗ್ರೆಸ್ನ ಟ್ರಬಲ್ ಶೂಟರ್ ಆಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಮಂಡ್ಯದ ಕಾಂಗ್ರೆಸ್ ಮುಖಂಡರ ಜೊತೆ ಸಭೆ ಮಾಡಿದ ಬಗ್ಗೆ ಮಾಹಿತಿ ಇಲ್ಲ ಎಂದು ಸುಮಲತಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಆದರೆ ಮಂಡ್ಯದಲ್ಲಿ ನನಗೆ ಕೆಲವು ಕಾಂಗ್ರೆಸ್ ಮುಖಂಡರ ಪರಿಚಯ ಇದೆ ಅವರನ್ನು ಭೇಟಿಮಾಡಿ ಮಾತನಾಡಿ ಸಭೆಯ ಬಗ್ಗೆ ಮಾಹಿತಿ ಪಡೆಯುವೆ ಎಂದು ಹೇಳಿದರು. ಮಂಡ್ಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಯಾವ ಕಾಂಗ್ರೆಸ್ ಮುಖಂಡರು ಸಹ ನನಗೆ ಒತ್ತಡ ಹೇರಿಲ್ಲ, ಎಲ್ಲರೂ ಗೌರವದಿಂದಲೇ ಕಂಡಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಮಂಡ್ಯವನ್ನು ಕಾಂಗ್ರೆಸ್‌ಗೆ ಉಳಿಸಿಕೊಳ್ಳಲು ಕಷ್ಟವಾಗಬಹುದು ನೀವು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಸಲಹೆಗಳನ್ನು ಕೊಟ್ಟಿದ್ದಾರೆ ಅಷ್ಟೆ ಎಂದು ಸುಮಲತಾ ಅವರು ಹೇಳಿದರು.
ತಮ್ಮ ಪರ ಪ್ರಚಾರಕ್ಕೆ ಬರುವ ನಟರ ಬಗ್ಗೆ ಮಾತನಾಡಿದ ಸುಮಲತಾ, ದರ್ಶನ್ ಅವರು ನನ್ನ ದೊಡ್ಡಮಗನಿದ್ದಂತೆ, ನನ್ನನ್ನು ತಾಯಿಂತೆ ಕಾಣುತ್ತಾರೆ, ಅವರು ಬಂದೇ ಬರುತ್ತಾರೆ, ಅಷ್ಟೆ ಅಲ್ಲ ಚಿತ್ರರಂಗದ ಎಲ್ಲರೂ ನನ್ನ ಬೆನ್ನಿಗಿದ್ದಾರೆ, ಅಂಬರೀಶ್ ಅವರ ಮೇಲೆ ಅವರಿಗಿದ್ದ ಪ್ರೀತಿಗೆ ಉದಾಹರಣೆ ಇದು ಎಂದು ಸುಮಲತಾ ಹೇಳಿದರು. ಆದರೆ ಯಾವ-ಯಾವ ನಟರು ಪ್ರಚಾರಕ್ಕೆ ಬರುತ್ತಾರೆ ಎಂದು ಪಟ್ಟಿ ನೀಡಲು ಸುಮಲತಾ ನಿರಾಕರಿಸಿದ್ದಾರೆ. ಇದರ ಜೊತೆಗೆ ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಪ್ರಶ್ನೆ ಎದುರಾದಾಗ, ನಾನೇ ಮಾತನಾಡಿ ಸ್ಪಷ್ಟನೆ ನೀಡುವವರೆಗೆ ಯಾವುದನ್ನೂ ನಂಬಬೇಡಿ,
ಸುಳ್ಳು ಸುದ್ದಿಗಳು ಹೆಚ್ಚು ಹರಿದಾಡುತ್ತಿವೆ. ಮಾಧ್ಯಮದವರು ಸಹ ಊಹಾಪೋಹದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿದರು. ಸುಮಲತಾ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಪಟ್ಟು ಹಿಡಿದಿರುವುದು ಮಂಡ್ಯ ರಾಜಕಾರಣಕ್ಕೆ ಹೊಸ ಕಳೆ ತಂದಿದೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಕೈತಪ್ಪಿದ್ದು, ಪಕ್ಷೇತರವಾಗಿಯಾದರೂ ಚುನಾವಣೆ ಎದುರಿಸಿಯೇ ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾರ್ಚ್ 18ರ ಒಳಗಾಗಿ ಅವರು ಪ್ರಕಟಿಸಲಿದ್ದಾರೆ. ಸುಮಲತಾ ಅಂಬರೀಷ್ ಅವರ ಎಲ್ಲ ನಿರ್ಧಾರಗಳು ಇದೆ ತಿಂಗಳು ತಿಳಿಯಲಿದ್ದು, ಚುನಾವಣೆಗೆ ಸ್ಪರ್ಧೆ ಮಾಡ್ತಾರಾ ಅಥವಾ ಕಣದಿಂದ ಹಿಂದೆ ಸರಿಯುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.