ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. ಹಾಲಿ ಜೆಡಿಎಸ್ ವಶದಲ್ಲೇ ಇರುವ ಲೋಕಸಭಾ ಕ್ಷೇತ್ರ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣವಿಲ್ಲ. ಸುಮಲತಾ ಅಂಬರೀಶ್ ಪರವಾಗಿ ಜನರು ಒಲವು ಹೊಂದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಬಂದಿರುವ ಗುಪ್ತಚರ ಇಲಾಖೆ ವರದಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಸೇರಿದೆ.
ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿರುವ ಅವರು ವರದಿ ತರಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಪಕ್ಷದ ಮುಂದಿನ ನಡೆ ಏನಾಗಿರಬೇಕು? ಎಂದು ಚರ್ಚಿಸಿದ್ದಾರೆ. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಆದರೆ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್, ಟಿಕೆಟ್ ನೀಡಲು ನಿರಾಕರಿಸಿದೆ. ಮಾ.18ರಂದು ತಮ್ಮ ಮುಂದಿನ ನಡೆಯನ್ನು ಘೋಷಣೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಜನ ಬೆಂಬಲ ಹೆಚ್ಚಿಗೆ ಸಿಗುತ್ತಿದೆ. ಸುಮಲತಾ ಅವರು ಯಾರ ಬಗ್ಗೆಯೂ ಟೀಕೆಗಳನ್ನು ಮಾಡದೇ ಪ್ರಚಾರ ಮಾಡುತ್ತಿದ್ದಾರೆ, ಇದು ಅವರಿಗೆ ಸಹಾಯಕವಾಗಲಿದೆ. ಜೆಡಿಎಸ್, ಬಿಜೆಪಿ . ಮಾಜಿ ಸಚಿವ ಎಸ್.ಡಿ.ಜಯರಾಮ್ ನಿಧನರಾದಾಗ ಪತ್ನಿ ಪ್ರಭಾವತಿ ಆಯ್ಕೆಯಾಗಿದ್ದರು. ಹೀಗೆ ಅನುಕಂಪದ ಆಧಾರದ ಮೇಲೆ ಸುಮಲತಾ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿದೆ. ಸುಮಲತಾ ಅಂಬರೀಶ್ ವಿರುದ್ಧ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಜೆಡಿಎಸ್ ಗೆಲ್ಲಲು ಭಾರೀ ಶ್ರಮ ಹಾಕಬೇಕು ಎಂದು ವರದಿ ಹೇಳಿದೆ.
ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಆದ್ದರಿಂದ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಕುಮಾರಸ್ವಾಮಿ ಅವರ ಪಾಲಿಗೆ ಪ್ರತಿಷ್ಠೆಯಾಗಿದೆ. ಆದ್ದರಿಂದ, ಅವರು ಮಂಡ್ಯದಲ್ಲಿ ಕಾರ್ಯತಂತ್ರವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.