ಬಾಕಿ ಉಳಿದಿರುವ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಹಾಲಿ ಸಂಸದ ಕರಡಿ ಸಂಗಣ್ಣ ಅವರು ಈ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ಹರಸಾಹಸ ಮಾಡುತ್ತಿದ್ದು, ಟಿಕೆಟ್‍ಗಾಗಿ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ನಾಮಪತ್ರ ಸಲ್ಲಿಸಲು ಏ.4 ಕಡೆಯ ದಿನವಾಗಿದ್ದು, ಎಲ್ಲಾ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಬಿಜೆಪಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಪ್ರಚಾರದ ಭರಾಟೆಯಲ್ಲಿದ್ದಾರೆ.
ಈಗ ಕೊಪ್ಪಳ ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ನಿನ್ನೆ ರಾಜ್ಯ ಬಿಜೆಪಿ ಮುಖಂಡರು ಶ್ರೀರಾಮುಲು ಜೊತೆ ಚರ್ಚೆ ನಡೆಸಿದರು. ಆದರೆ ಶ್ರೀರಾಮುಲು ಇದಕ್ಕೆ ಸುತಾರಾಂ ಒಪ್ಪಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸುವುದು; ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೈಗೆ ಸ್ಪರ್ಧಿಸುವುದರಿಂದ ಜನರಲ್ಲಿ ತಪ್ಪು ಭಾವನೆ ಬರುತ್ತದೆ.
ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಶ್ರೀರಾಮುಲು ಕೊಪ್ಪಳದಲ್ಲಿ ಸ್ಪರ್ಧಿಸಿದರೆ ಈ ಭಾಗದ ಐದು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರವಾಗಿದೆ. ಆದರೆ ಶ್ರೀರಾಮುಲು ಇದಕ್ಕೆ ಒಪ್ಪಿದಂತೆ ಕಂಡುಬರುತ್ತಿಲ್ಲ.