ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭದ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅಗಲಿರುವ ಅಂಬರೀಶ್ ಅವರ ಕೆಲಸಗಳು ಮುನ್ನೆಲೆಗೆ ಬರುತ್ತಿವೆ. ಜನ ಅಂಬಿ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಅಂಬಿ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಂಬರೀಶ್ ಅವರಿಗೂ ಮತ್ತು ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಅಂಬರೀಶ್ ಜೊತೆಯಲ್ಲಿ 35 ವರ್ಷಗಳ ಒಡನಾಟ ಹೊಂದಿದ್ದರು. ಅರಮನೆಯ ಕಷ್ಟದ ಸಂದರ್ಭದಲ್ಲಿ ಅಂಬರೀಶ್ ಬೆನ್ನೆಲುಬಾಗಿ ನಿಂತಿದ್ದರು. ಅವರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಎಂದಿರುವ ಯದುವೀರ್ ಅಂಬರೀಶ್ ಅವರಿಗೆ ಮೈಸೂರು ರಾಜ ಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದಿದ್ದಾರೆ.
ಸುಮಲತಾ ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ಅವರ ಹೋರಾಟಕ್ಕೆ ಒಳ್ಳೆಯದಾಗಲಿ. ಬಹಿರಂಗ ಪ್ರಚಾರಕ್ಕೆ ನಾನು ತೆರಳುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ. ಮಂಡ್ಯದ ಜನರಿಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡುತ್ತಾರೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ತಮ್ಮ ಬೆಂಬಲ ಸೂಚಿಸಿದರು.