ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ದರ್ಶನ್ ಇದೀಗ ಸ್ಪಷ್ಟನೆಯನ್ನು ನೀಡಿದ್ದಾರೆ.
ಸಿವಿ ರಾಮನ್ ನಗರದಲ್ಲಿ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಬಾಸ್, “ನಾನು ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲಲ್ಲ. ನಾನು ಮತ್ತು ಪಿಸಿ ಮೋಹನ್ ಕಳೆದ 15 ವರ್ಷದಿಂದ ಸ್ನೇಹಿತರು, ಈ ಹಿಂದೆ ಕೂಡ ನಾನು ಪಿಸಿ ಮೋಹನ್ ಪರ ಪ್ರಚಾರ ಮಾಡಿದ್ದೆ. ಈಗ ಕೂಡ ಮಾಡುತ್ತಿದ್ದೇನೆ. ಈ ಮೊದಲೆ ಹೇಳಿದಂತೆ ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುವವನು” ಎಂದು ಹೇಳಿದ್ದಾರೆ.
ನಾನು ಎಂಪಿ, ಎಂಎಲ್ಎ ಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡಿದರೆ ಒಂದೇ ಒಂದು ಪತ್ರವನ್ನು ಮಾತ್ರ ಬಯಸುತ್ತೇನೆ ಏಕೆಂದರೆ ಪ್ರತಿನಿತ್ಯ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್ ಗಳಿಗೆ ಹಣ ನೀಡಿ ಎಂದು ಬಹಳ ಜನರು ಬರುತ್ತಾರೆ. ಆಗ ಎಂಪಿ, ಎಂಎಲ್ಎ ಅವರಿಂದ ನಾನು ಒಂದು ಪತ್ರವನ್ನು ಬಯಸುತ್ತೇನೆ.
ನಾನು ಈ ಪತ್ರವನ್ನು ಬಯಸುವುದು ಏಕೆಂದರೆ ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಅಂದರೆ ಆಪರೇಶನ್ ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಇದಕ್ಕೊಸ್ಕರ ನಾನು ಕೆಲವು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಪಿಸಿ ಮೋಹನ್ ಬಿಟ್ಟರೆ ಯಾರ ಪರವಾಗಿ ಪ್ರಚಾರ ಮಾಡುವುದಿಲ್ಲ. ಮತ್ತೆ 13ರಂದು ನಾನು ಪಿಸಿ ಮೋಹನ್ ಪರ ಪ್ರಚಾರಕ್ಕೆ ಬೆಂಗಳೂರಿಗೆ ಬರುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದ ದರ್ಶನ್ ಗೆ ”ನೀವು ಮೋದಿ ಅಭಿಮಾನಿಯೇ..” ಎಂಬ ಪ್ರಶ್ನೆ ಕೂಡ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ”ನಾನು ಯಾರ ಫ್ಯಾನ್ ಅಲ್ಲ. ನನಗೆ ಗೊತ್ತಿರುವವರು, ಪರಿಚಯ ಇರುವವರು, ನಾನು ಇಷ್ಟ ಪಡುವವರಿಗಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಅಷ್ಟೇ” ಎಂದು ಪ್ರತಿಕ್ರಿಯೆ ನೀಡಿವುದರ ಮೂಲಕ ಎಲ್ಲರ ಗಮನವನ್ನು ಸೆಳೆದರು.