ನುಗ್ಗೇಕಾಯಿ ಸಾಂಬಾರ್ ಎಲ್ಲಾರ ಮನೆಯಲ್ಲೂ ಬಹಳ ಸಾಮಾನ್ಯ. ನುಗ್ಗೇಕಾಯಿ ಸೇವಿಸಿದರೆ ಮಲಬದ್ಧತೆ ಮಂಗಮಾಯವಾಗುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ಇನ್ನು ಬಾಣಂತಿಯರಿಗೆ ಚೆನ್ನಾಗಿ ಹಾಲಾಗಲೆಂದು ನುಗ್ಗೆ ಸೊಪ್ಪಿನ ಸಾರು ಮಾಡಿಕೊಡಲಾಗುತ್ತದೆ. ನುಗ್ಗೇಕಾಯಿಯಲ್ಲಿ ಇಷ್ಟೇ ಅಲ್ಲ, ಬಹಳಷ್ಟು ಆರೋಗ್ಯಕಾರಿ ಅಂಶಗಳಿವೆ, ಹಾಗಾಗಿಯೇ ಇದು ಸೂಪರ್ ಫುಡ್ ಎನ್ನುತ್ತಾರೆ ವಿಜ್ಞಾನಿಗಳು.
ಹಾಗಾದರೆ ಜೈವಿಕ ವಿಜ್ಞಾನ ರಾಷ್ಟ್ರೀಯ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸಸ್)ವು ಸಂಶೋಧನೆ ನಡೆಸಿ ನುಗ್ಗೆ ಬಗ್ಗೆ ಕಂಡುಕೊಂಡಿರುವುದೇನೇನು? ನುಗ್ಗೇ ಗಿಡದಲ್ಲಿ ಐದು ಔಷಧ ರೀತಿಯ ಮಾಲೆಕ್ಯೂಲ್ಸ್ ಹಾಗೂ ಮೂರು ವಿಟಮಿನ್(ಎ,ಇ,ಸಿ )ಗಳಿದ್ದು, ಇದು ದೊಡ್ಡದೊಂದು ಬಯೋಕೆಮಿಕಲ್ ಫ್ಯಾಕ್ಟರಿಯೇ ಆಗಿದೆ ಎಂದು ಎನ್ಸಿಬಿಎಸ್ನ ಸಂಶೋಧಕರು ಹೇಳುತ್ತಿದ್ದಾರೆ.
‘ನುಗ್ಗೇ ಸೊಪ್ಪು, ಹೂವು ಹಾಗೂ ಕಾಯಿಗಳು ಲಿಪಿಡ್ ಮೆಟಾಬಾಲಿಸಂ(ತೂಕ ಇಳಿಸಲು ಬೇಕಾದದ್ದು)ಗೆ ಸಹಾಯಕವಾಗುವಂಥ ಅಂಶಗಳಿಂದ ಶ್ರೀಮಂತವಾಗಿದ್ದು, ಇದರಿಂದ ಡಯಾಬಿಟೀಸ್, ನರ ಹಾಗೂ ಹೃದಯ ಸಮಸ್ಯೆಗಳು, ಕ್ಯಾನ್ಸರ್ ಅನ್ನು ದೂರ ಇಡಬಹುದು. ಈ ಗಿಡವು ಮಿನರಲ್ಗಳ ಖನಿಜವಾಗಿದೆ,’ ಎನ್ನುತ್ತಾರೆ ಸಂಶೋಧಕರು
ಈ ಸಂಶೋಧನೆಯಿಂದಾಗಿ ಸುಮ್ಮನೆ ಸಾಂಬಾರ್ನಲ್ಲಿ ತೇಲುತ್ತಿದ್ದ ನುಗ್ಗೇಕಾಯಿಗೆ ಜಾಗತಿಕ ಅಟೆನ್ಶನ್ ಸಿಕ್ಕಿದಂತಾಗಿದೆ. ನುಗ್ಗೇಕಾಯಿಯಲ್ಲಿರುವ ಅರ್ಸೋಲಿಕ್ ಆ್ಯಸಿಡ್ ಹಾಗೂ ಓಲಿನೋಲಿಕ್ ಆ್ಯಸಿಡ್ ಬಂಜೆತನದ ವಿರುದ್ಧ ಹೋರಾಡುತ್ತವೆ. ನುಗ್ಗೆ ಸೊಪ್ಪಿನಲ್ಲಿ ಪಾಲಕ್ನಲ್ಲಿ ಇರುವ ಐರನ್ಗಿಂತ 30 ಪಟ್ಟು ಹೆಚ್ಚು ಐರನ್ ಹಾಗೂ 100 ಪಟ್ಟು ಹೆಚ್ಚಿನ ಕ್ಯಾಲ್ಶಿಯಂ ಇದೆ ಎಂಬುದನ್ನೂ ಸಂಶೋಧನೆ ದೃಢಪಡಿಸಿದೆ. ನುಗ್ಗೆ ಮರದ ಕಾಂಡ ಹಾಗೂ ಬೇರುಗಳಲ್ಲಿ ಐರನ್, ಝಿಂಕ್ ಹಾಗೂ ಮೆಗ್ನೀಶಿಯಂ ಟ್ರಾನ್ಸ್ಪೋರ್ಟರ್ಗಳು ಹೇರಳವಾಗಿವೆ’ ಎನ್ನುತ್ತಾರೆ ಈ ಅಧ್ಯಯನದ ಮೊದಲ ಲೇಖಕ ನಸೀರ್ ಪಾಶಾ. ಅಧ್ಯಯನ ವರದಿಯು ‘ಜಿನಾಮಿಕ್ಸ್’ ಜರ್ನಲ್ನಲ್ಲಿ ಪ್ರಕಟವಾಗಿದೆ. ನುಗ್ಗೇಮರದ ಪ್ರತಿ ಭಾಗವೂ ಔಷಧೀಯ ಗುಣಗಳನ್ನು ಹೊಂದಿರುವುದನ್ನು ಈಗಾಗಲೇ ಆಯುರ್ವೇದ ದೃಢಪಡಿಸಿದೆ.