ಭಾರಿ ಕುತೂಹಲ ಮೂಡಿಸಿದ್ದ ವಿಶ್ವಕಪ್ ಮುಗಿದಿದೆ. ಅತಿಥೇಯ ಇಂಗ್ಲೆಂಡ್ ನ್ಯೂಜಿಲೆಂಡನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ಪನ್ನು ಎತ್ತಿ ಹಿಡಿದಿದೆ. ಕ್ರಿಕೆಟ್ ಜನಕರಾದರೂ ಇಲ್ಲಿಯವರೆಗೆ ವಿಶ್ವಕಪ್ಗೆ ಮುತ್ತಿಕ್ಕುವ ಅವಕಾಶ ಸಿಗಲಿಲ್ಲ ಎಂಬ ಕೊರಗನ್ನು ಈ ಬಾರಿ ಇಂಗ್ಲೆಂಡ್ ತವರಿನಲ್ಲೇ ಹೋಗಲಾಡಿಸಿಕೊಂಡಿದೆ. ಇಂಗ್ಲೆಂಡ್ ತವರಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ಸೋಲಿಸಿ ಫೈನಲ್ ಗೆ ಬಂದಿದ್ದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ಲಗ್ಗೆ ಇಟ್ಟಿದ್ದ ಇಂಗ್ಲೆಂಡ್ ನಡುವೆ ಫೈನಲ್ ಫೈಟ್ ಅತ್ಯಂತ ರೋಚಕವಾಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 241ರನ್ ಮಾಡಿತು. 242ರನ್ ಗಳನ್ನು ಚೇಸ್ ಮಾಡಲು ಹೊರಟ ಇಂಗ್ಲೆಂಡ್ ಕೂಡ 241ರನ್ಗಳನ್ನಷ್ಟೇ ಗಳಿಸಿತು. ಇದರಿಂದಾಗಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 15ರನ್ ಮಾಡಿತು. ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೂಡ ಅಷ್ಟೇರನ್ ಮಾಡಿತು. ಸೂಪರ್ ಓವರ್ ಟೈ ಆಗಿದ್ದರಿಂದ ಬೌಂಡರಿ ಲೆಕ್ಕಾಚಾರದಲ್ಲಿ ಈ ಮ್ಯಾಚ್ ನಲ್ಲಿ ಹೆಚ್ಚು (24) ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ವಿನ್ ಎಂದು ಘೋಷಿಸಲಾಯಿತು. ನ್ಯೂಜಿಲೆಂಡ್ 16 ಬೌಂಡರಿ ಮಾತ್ರ ಸಿಡಿಸಿತ್ತು.
ನ್ಯೂಜಿಲೆಂಡ್ ಪರ ಸೂಪರ್ ಓವರ್ನಲ್ಲಿ ನೀಶಮ್ 5 ಬಾಲ್ಗಳಲ್ಲಿ 14ರನ್ ಮಾಡಿದ್ದರು. ಆದರೆ, ಕೊನೆಯ ಬಾಲ್ನಲ್ಲಿ ಗಪ್ಟಿಲ್ 2ರನ್ ಕದಿಯುವಾಗ ರನ್ ಔಟ್ ಬಲೆಗೆ ಬಿದ್ದರು. ಇದರಿಂದ ಚೊಚ್ಚಲ ವರ್ಲ್ಡ್ಕಪ್ ಗೆಲ್ಲುವ ಅವಕಾಶವನ್ನು ನ್ಯೂಜಿಲೆಂಡ್ ಮಿಸ್ ಮಾಡಿಕೊಂಡಿತು. ಇಂಗ್ಲೆಂಡ್ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ.
ಮ್ಯಾಚ್ ಬಳಿಕ ಟ್ವೀಟ್ ಮಾಡಿರುವ ನೀಶಮ್, ಇದು ನಿಜಕ್ಕೂ ನೋವುಂಟು ಮಾಡಿದೆ. ಮುಂದಿನ ಒಂದು ದಶಕದ ವರೆಗೆ ನಾನು ಇಲ್ಲಿನ ಅರ್ಧಶಗಂಟೆಯ ಆಟವನ್ನು ನೆನೆಯುವುದಿಲ್ಲ. ಇಂಗ್ಲೆಂಡ್‌ಗೆ ಶುಭಾಶಯಗಳು. ಗೆಲುವು ನಿಮಗೆ ಅರ್ಹವಾಗಿದೆ ಎಂದು ಟ್ವೀಟ್ ಮಾಡಿ ಇಂಗ್ಲೆಂಡ್‌ಗೆ ವಿಶ್ ಮಾಡಿದ್ದಾರೆ.
ಅದಾದ ನಂತರ ಮತ್ತೊಂದು ಟ್ವೀಟ್ನಲ್ಲಿ ನಮ್ಮ ತಂಡಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಧ್ವನಿ ದಿನಪೂರ್ತಿ ನಮ್ಮ ಕಿವಿಗೆ ಮುಟ್ಟುತ್ತಿತ್ತು. ಗೆದ್ದೇ ತೀರುವ ಹಂಬಲ ನಮ್ಮೊಳಗಿತ್ತು. ಆದರೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳೇ, ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದಿರಿ. ಬದಲಿಗೆ ಬೇಕರಿ ಕೆಲಸ ಬೇರೇನಾದರೂ ತೆಗೆದುಕೊಳ್ಳಿ. ಬೊಜ್ಜು ತುಂಬಿಸಿಕೊಂಡು 60 ವರ್ಷಕ್ಕೆ ಕೊನೆಯುಸಿರೆಳೆದರಷ್ಟೇ ಸಾಕು ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ.