ಭಾರತ ವಿಶ್ವಕಪ್ ಗೆಲ್ಲದೇ ಇರಬಹುದು. ಆದರೆ. ಎವರ್ಗ್ರೀನ್ ಟೀಮ್. ಭಾರತ ತಂಡದ ಆಟಕ್ಕೆ ಇಡೀ ವಿಶ್ವ ಕ್ರಿಕೆಟೇ ತಲೆಬಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನುವ ಹಣೆಪಟ್ಟಿಯೊಂದಿಗೆ ಇಂಗ್ಲೆಂಡ್ಗೆ ಹೋಗಿತ್ತು. ಅದಕ್ಕೆ ತಕ್ಕಂತೆ ಇಂಗ್ಲೆಂಡ್ನಲ್ಲಿ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನವನ್ನೇ ನೀಡಿತ್ತು. ಒಂದೇ ಒಂದು ಸೋಲು ಕಾಣದೆ ಸೆಮಿಫೈನಲ್ ಪ್ರವೇಶಿಸಿತ್ತು. ಉಪ ನಾಯಕ ರೋಹಿತ್ ಶರ್ಮಾ ಅವರಂತೂ ಒಂದಲ್ಲ ಎರಡಲ್ಲ 5 ಶತಕಗಳನ್ನು ಸಿಡಿಸಿ ಈ ಬಾರಿ ನಮಗೇ ಕಪ್ ಕಣ್ರೋ ಎಂದು ಸಾರಿದ್ದರು. ಆದರೆ, ಸೆಮಿಫೈನಲ್ನಲ್ಲಿ ಭಾರತ ಮುಗ್ಗರಿಸಿತು. ನ್ಯೂಜಿಲೆಂಡ್ ವಿರುದ್ಧ 18ರನ್ಗಳಿಂದ ಭಾರತ ಸೋಲುವುದರೊಂದಿಗೆ ವಿಶ್ವಕಪ್ ಆಸೆ ಕಮರಿತು.
ವಿಶ್ವಕಪ್ ಬೆನ್ನಲ್ಲೇ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಈಗಾಗಲೇ ಟಿ20 ಮತ್ತು ಒಡಿಐ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಟೆಸ್ಟ್ಗೆ ಅಣಿಯಾಗಿದೆ. ವಿರಾಟ್ ಕೊಹ್ಲಿ ಒಡಿಐನಲ್ಲಿ ಸತತ 2 ಸೆಂಚುರಿ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ನಲ್ಲಿ ಫಾರ್ಮ್ ಗೆ ಮರಳುವ ಸಾಧ್ಯತೆ ಹೆಚ್ಚಿದೆ.
ಸದ್ಯ ವಿಷಯ ಏನಂದರೆ ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ..! ನಂಬರ್ 1 ಪಟ್ಟದಲ್ಲಿರುವುದು ಹಿಟ್ ಮ್ಯಾನ್, ಡಬಲ್ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ, 2019ರಲ್ಲಿ ರೋಹಿತ್ ಶರ್ಮಾ 6 ಒಡಿಐ ಸೆಂಚುರಿ ಸಿಡಿಸಿದ್ದಾರೆ. ಕೊಹ್ಲಿ 5 ಒಡಿಐ ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಅಡಿಲೇಡ್, ನಾಗ್ಪುರ ಹಾಗೂ ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 104, 116, 123 ರನ್ ಮಾಡಿದ್ದರು. ಇತ್ತೀಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ 2 ಮತ್ತು ಕೊನೆಯ (3ನೇ) ಏಕದಿನ ಪಂದ್ಯದಲ್ಲಿ 120, 114ರನ್ಗಳಿಂದ ಸತತ ಎರಡು ಶತಕ ಮಾಡಿದ್ದರು. ಇದರೊಂದಿಗೆ 5 ಶತಕ ಬಾರಿಸಿದ್ದಾರೆ.
ರೋಹಿತ್ ಶರ್ಮಾ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 133, ಸೌಥಾಂಪ್ಟನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 122, ಮ್ಯಾಂಚೆಸ್ಟರ್ನಲ್ಲಿ ಪಾಕಿಸ್ತಾನ ವಿರುದ್ಧ 140, ಬರ್ಮಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ 102, ಬರ್ಮಿಂಗ್ ಹ್ಯಾಮ್ನಲ್ಲಿ ಬಾಂಗ್ಲಾದೇಶದ ವಿರುದ್ಧ 104, ಲೀಡ್ಸ್ನಲ್ಲಿ ಶ್ರೀಲಂಕಾ ವಿರುದ್ಧ 103ರನ್ ಬಾರಿಸಿದ್ದರು. ಒಟ್ಟು ಈ ಸಾಲಿನಲ್ಲಿ 6 ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಇನ್ನು ಒಂದೇ ಒಂದು ಒಡಿಐ ಶತಕಗಳಿಸಿದ್ರೆ ರೋಹಿತ್ ಜೊತೆ ಸಮಾನ ಸ್ಥಾನ ಹಂಚಿಕೊಳ್ಳುತ್ತಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಒಡಿಐ ಶತಕಗಳಿಸಿದವರ ಪಟ್ಟಿಯಲ್ಲಿ ನಂಬರ್ 1 ಪಟ್ಟ ಅಲಂಕರಿಸಲು ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಪೈಪೋಟಿ ಇದೆ.