ಟೀಂ ಇಂಡಿಯಾದ ಮಾಜಿ ನಾಯಕ, ವಿಶ್ವ ಕ್ರಿಕೆಟನ್ನು ಆಳಿದ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ಎ ಮತ್ತು ಅಂಡರ್ 19 ತಂಡದ ಕೋಚ್ ಹುದ್ದೆಯಿಂದ ವಾಪಸ್ಸಾಗಿದ್ದಾರೆ. ದ್ರಾವಿಡ್ ಸ್ಥಾನಕ್ಕೆ ಬಿಸಿಸಿಐ ಇಬ್ಬರು ಹೊಸ ಕೋಚ್ಗಳನ್ನು ನೇಮಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
2015ರಿಂದ ಇಂಡಿಯಾ ಎ ಮತ್ತು ಅಂಡರ್ 19 ತಂಡದ ಗುರುವಾಗಿ ದ್ರಾವಿಡ್ ಕರ್ತವ್ಯ ನಿರ್ವಹಿಸುತ್ತಿದ್ದರು. ದ್ರಾವಿಡ್ ಅವರನ್ನು ಇದೀಗ ಕೋಚ್ ಹುದ್ದೆಯಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಒಬ್ಬರನ್ನಲ್ಲ ಇಬ್ಬರನ್ನು ತಂದು ಕೂರಿಸಿದೆ ಬಿಸಿಸಿಐ. ದ್ರಾವಿಡ್ ಎ ಮತ್ತು ಅಂಡರ್ 19 ಎರಡೂ ತಂಡಕ್ಕೆ ಗುರುವಾಗಿ ಕಿರಿಯರಿಗೆ ಅತ್ಯುತ್ತಮ ತರಬೇತಿ ನೀಡಿದ್ದರು. ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ಅಂಡರ್ 19 ಟೀಮ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿ ಈ ವರ್ಷದ ಆರಂಭದಲ್ಲಿ ನೇಮಕವಾಗಿದ್ದರು. ದ್ರಾವಿಡ್ ಎನ್ಸಿಎ ಮುಖ್ಯಸ್ಥರಾಗಿ ನೇಮಕವಾದ ಹಿನ್ನೆಲೆಯಲ್ಲಿ ಕೋಚ್ ಹುದ್ದೆಗೆ ಬೇರೆಯವರನ್ನು ತರಲಾಗಿದೆ. ಸೌರಾಷ್ಟ್ರದ ಮಾಜಿ ಬ್ಯಾಟ್ಸ್ ಮನ್ ಸೀತಾಂಶು ಕೋಟಕ್ ಅವರು ಇಂಡಿಯಾ ‘ಎ’ ಗೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅಂತೆಯೇ ಅಂಡರ್ 19 ಕೋಚ್ ಆಗಿ ಮಾಜಿ ವೇಗಿ ಪರಾಸ್ ಮಾಂಬ್ರೆ ಆಯ್ಕೆಯಾಗಿದ್ದಾರೆ. ಕೋಟಕ್ ಅವರು 130 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ‘ಎ’ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಇತ್ತೀಚಿನ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕಾರ್ಯ ನಿರ್ವಹಿಸಿದ್ದರು.
ಪರಾಸ್ ಮಾಂಬ್ರೆ ಅವರು ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನಾಡಿದ್ದಾರೆ. ಆದರೆ, ದ್ರಾವಿಡ್ ಸಹಾಯಕರಾಗಿ ಕಳೆದ ಮೂರು ವರ್ಷಗಳಿಂದ ಇಂಡಿಯಾ ‘ಎ’ ಹಾಗೂ ಅಂಡರ್ 19 ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಬೌಲಿಂಗ್ ಕೋಚ್ ಆಗಿ ರಮೇಶ್ ಪವಾರ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ನೇಮಕವಾಗಿದ್ದಾರೆ. ಹೃಷಿಕೇಶ್ ಕಾನಿಟ್ಕರ್ ಅಂಡರ್ 19 ತಂಡದ ಬ್ಯಾಟಿಂಗ್ ಕೋಚ್ ಆಗಲಿದ್ದಾರೆ.
ಕಿರಿಯರ ತಂಡಕ್ಕೆ ರಾಹುಲ್ ದ್ರಾವಿಡ್ ಬದಲಿಗೆ ಬೇರೆ ಕೋಚ್ಗಳ ಆಯ್ಕೆ..!
Date: