ಹಾಯ್ ಸ್ವೀಟು…
ಇಷ್ಟು ದಿನದ ಪರಿಚಯದಲ್ಲಿ ಎಲ್ಲೋ ಒಂದು ಸಾರಿ ಮಾತ್ರ ನಾ ನಿನ್ನನ್ನ ಹೀಗೆ ಕರ್ದಿರೋದು… ಮತ್ಯಾವತ್ತು ಹೀಗೆ ಕರ್ದಿರ್ಲಿಲ್ಲ, ಕರೀಬೇಕು ಅಂತ ಅನ್ನಿಸಿಯೂ ಇರಲಿಲ್ಲ, ಮುಂದೆ ಕರೆಯೋದೂ ಇಲ್ಲ, ಕಾರಣ ಗೊತ್ತಿಲ್ಲ. ಕೊನೇ ಸಾರಿ ಕೂಗ್ತಿದ್ದೀನಿ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕಿವಿಗೊಟ್ಟು ಕೇಳಿಬಿಡು, ಸ್ವೀಟೂ….
ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ, ನಿನ್ನಲ್ಲಿರೋ ಪ್ರೀತಿಗೆ ಪ್ರತಿಯಾಗಿ ನೀಡೋಕೆ ಪ್ರೀತಿಯೂ ಇಲ್ಲ. ನಾ ನಿನ್ನ ಜೀವನದಲ್ಲಿ ಬಂದ ಒಂದು ಪಾತ್ರ, ನೀ ಅಂದುಕೊಂಡಂತೆ ನಿನ್ನ ಜೀವನಕ್ಕೆ ಸೂತ್ರ ಅಲ್ಲ, ನಿನ್ನೆಡೆಗೆ ನನಗೆ ಸೆಳೆತವಿರುವುದು ನಿಜ ಆದರೆ ಅದು ಎಂದಿಗೂ ಪ್ರೀತಿಯಾಗಿ ಪರಿವರ್ತನೆ ಹೊಂದಲಾರದು, ಆದ್ದರಿಂದ ನನ್ನಿಂದ ಏನನ್ನೂ ಅಪೇಕ್ಷಿಸಬೇಡ.
ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀನಿ ಅಂತ ಅರ್ಥ ಆಗ್ತಾ ಇಲ್ವಾ?? ಪರ್ವಾಗಿಲ್ಲ ಬಿಡು ನಿಧಾನಕ್ಕೆ ಅರ್ಥ ಆಗುತ್ತೆ, ಹೆಣ್ಣಿನ ಭಾವನೆಗಳೇ ಹಾಗೆ ಕೆಲವೊಮ್ಮೆ ಅವಳಿಗೇ ಅರ್ಥವಾಗುವುದಿಲ್ಲ.. ಅವಳ ತೊಳಲಾಟಗಳಿಗೆ ಕಾರಣವನ್ನೂ ಅವಳೇ ಹುಡುಕಿಕೊಳ್ಳಬೇಕು, ಪರಿಹಾರವನ್ನೂ ಅವಳೇ ಕಂಡುಕೊಳ್ಳಬೇಕು. ಇದನ್ನ ಅವಳಿಗೆ ಯಾರೂ ಕಲಿಸಬೇಕಾಗಿಲ್ಲ, ತಾನಾಗೇ ಕಲಿತು ಬಿಡ್ತಾಳೆ.. ಹೆಣ್ಣಿನ ಜೀವನ ನೀವಂದುಕೊಂಡಷ್ಟು ಸುಲಭವಲ್ಲ.. ನಿಮ್ಮ ಕಣ್ಣಿಗೆ ನಾವು ಆಕಾಶದಲ್ಲಿ ಸ್ವತಂತ್ರವಾಗಿ ಹಾರೋ ಗಿಣಿಗಳ ಥರ ಕಾಣ್ತೀವಿ ಆದ್ರೆ ನಾವು ಕೇವಲ ಗಿಣಿಗಳು ಅಷ್ಟೇ, ನೀವಂದುಕೊಂಡಂತೆ ಸ್ವತಂತ್ರ ಗಿಣಿಗಳಲ್ಲ, ಹಾರುವುದು ಅನಿವಾರ್ಯ ಆದ್ದರಿಂದ ಹಾರಾಡ್ತೀವಿ, ಎಂದೋ ಒಂದು ದಿನ ಪಂಜರದೊಳಗೆ ಸೆರೆಯಾಗಲೇಬೇಕು ಅನ್ನೋದು ಗೊತ್ತಿದ್ದರೂ ಅದೆಲ್ಲವನ್ನೂ ಮರೆತು ಹಾರ್ತೀವಿ.. ಗುರುಗುಟ್ಟಿಕೊಂಡು ನೋಡುವ ಗಿಡುಗಗಳಿಂದ ತಪ್ಪಿಸಿಕೊಳ್ಳೋಕೆ ಹಾರ್ತೀವಿ, ಕೆಲ ನಾಟಕಗಳನ್ನ ಮಾಡಿ ಮೋಸಗಾರ್ತಿ ಅನ್ನೋ ಪಟ್ಟವನ್ನೂ ಕಟ್ಟಿಕೊಳ್ತೀವಿ.. ಆದ್ರೂ ಅದ್ಯಾವುದಕ್ಕೂ ಲೆಕ್ಕಿಸದೇ ಮತ್ತೆ ರೆಕ್ಕೆ ಬಿಚ್ಚಿ ಹಾರ್ತೀವಿ ಯಾಕಂದ್ರೆ ಹಾರುವುದು ಅನಿವಾರ್ಯ ಕರ್ಮ ನಮಗೆ.
ನೀವೇನಿದ್ರೂ ಹೆಣ್ಣನ್ನು ವರ್ಣಿಸೋಕೆ ಮಾತ್ರ ಲಾಯಕ್ಕು, ಅರ್ಥ ಮಾಡಿಕೊಳ್ಳೋಕಲ್ಲ. ನಾವು ನಕ್ಕರೂ ಅದಕ್ಕೊಂದು ಅರ್ಥ ಕಲ್ಪಿಸಿಕೊಳ್ಳೋ ನೀವು, ನಿಮ್ ಜೊತೆ ಕ್ಲೋಸಾಗಿದ್ರೆ ಸಾಕು ಅದನ್ನೇ ಲವ್ವು ಅಂತ ತಿಳ್ಕೊತೀರಿ, ನೀವೇ ಏನೇನನ್ನೋ ಕಲ್ಪಿಸಿಕೊಂಡು ಬಿಡ್ತೀರಿ, ನಮ್ಮ ಪ್ರತಿ ನಡೆಗೂ ಒಂದೊಂದು ಅರ್ಥವನ್ನು ಸೃಷ್ಟಿ ಮಾಡಿಕೊಳ್ತೀರಿ, ಇಷ್ಟೆಲ್ಲಾ ಆದ್ರೂ ನಮ್ಮ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗೋದೇ ಇಲ್ಲ. ಕೊನೆಗೊಂದು ದಿನ ನಿಮ್ಮ ಕಲ್ಪನೆಗಳೆಲ್ಲ ಸುಳ್ಳು ಅಂತ ಗೊತ್ತಾದಾಗ ನಮ್ಮನ್ನ ಮನಸಾರೆ ಶಪಿಸಿ ಬಿಡ್ತೀರಿ.. ಅದೆಷ್ಟು ಶಾಪ ತಟ್ಟಿರುತ್ತೋ ನಮ್ ಜೀವಕ್ಕೆ ದೇವ್ರಿಗೇ ಗೊತ್ತು.
ಹ್ಞಾಂ.. ಇದನ್ನೆಲ್ಲಾ ಯಾಕೆ ಹೇಳ್ದೇ ಅಂತ ಈಗ್ಲಾದ್ರೂ ಅರ್ಥವಾಯ್ತಾ?? ಆಗಿಲ್ಲ ಅಂದ್ರೆ ಹೋಗಿ ತುಂಬೆ ಗಿಡಕ್ಕೆ ನೇಣು ಹಾಕ್ಕೋ.. ಇನ್ನೂ ಬಿಡಿಸಿ ಹೇಳೋಕೆ ನನ್ನಿಂದ ಸಾಧ್ಯವಿಲ್ಲ. ಹೆಚ್ಚಂದ್ರೆ ಇನ್ನೊಂದ್ ಮಾತ್ ಹೇಳ್ತೀನಿ – ನಾ ನಿನ್ನನ್ನ ಪ್ರೀತ್ಸೋದು ಅಮಾವಾಸ್ಯೆ ದಿನ ಚಂದ್ರ ಕಂಡಷ್ಟೇ ಸತ್ಯ. ಹಾಗಂತ ಜಾಸ್ತಿ ಫೀಲ್ ಮಾಡ್ಕೋಬೇಡ. ನಾ ನಿನ್ ಪ್ರೀತಿಯನ್ನ ಒಪ್ಕೊಂಡಿಲ್ಲ ಅಂದ್ರೆ ಏನಂತೆ?? ನಿಂಗೆ ನನಗಿಂತ ಒಳ್ಳೇ ಹುಡುಗಿ ಸಿಗ್ತಾಳೆ ಬಿಡೋ. ಮದ್ವೆಗೆ ನನ್ನ ಕರೀದೇ ಇದ್ರೂ ಪರವಾಗಿಲ್ಲ ಬಟ್ ನಿಂಗೆ ಐ ಮೀನ್ ನಿನ್ ಹೆಂಡ್ತಿಗೆ ಹೆಣ್ಣು ಮಗು ಹುಟ್ಟಿದ್ರೆ ಅಪ್ಪಿತಪ್ಪಿನೂ ನನ್ ಹೆಸ್ರು ಇಡ್ಬೇಡ, ತುಂಬಾ ಹಳೇ ಹೆಸ್ರು ಆಗೋಗುತ್ತೆ. ಅಂದ್ಹಾಗೆ ಅವತ್ತು ನಿಂಗೆ ಮೆಸೇಜ್ ಮಾಡಿ ಲವ್ವೆಲ್ಲ ನಂಗೆ ಸರಿ ಬರಲ್ಲ, ನಮ್ಮ ಮನೇಲಿ ಒಪ್ಪೋದಿಲ್ಲ ಅಂತ ಹೇಳಿದ್ನಲ್ಲಾ ಅದು ಕೇವಲ ನೆಪ ಮಾತ್ರ, ನೈಜ ಕಾರಣಗಳು ಬೇರೇನೇ ಇದೆ ಆದ್ರೆ ಅದೇನು ಅನ್ನೋದು ನಂಗೆ ಗೊತ್ತಿಲ್ಲ ಅದನ್ನ ಕೇಳಲೂ ಬೇಡ ಗೊತ್ತಾದರೂ ನಾ ಹೇಳೋದಿಲ್ಲ ಯಾಕಂದ್ರೆ ನಾನೊಬ್ಬಳು ಹೆಣ್ಣು.
ಇಂತಿ ನಿನ್ನ ಮಾಜಿ ಕನಸು
• ಕೆ.ಎನ್.ಸ್ಕಂದ ಆಗುಂಬೆ
POPULAR STORIES :
100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?