ದೇಶದ ಸುಪ್ರಸಿದ್ಧ ದೇವಾಲಯಗಳಲ್ಲಿ ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯವೂ ಒಂದು. ತಿರುಪತಿ ವೆಂಕಟೇಶ…ತಿಮ್ಮಪ್ಪನಿಗೆ ಅಪಾರ ಸಂಖ್ಯೆಯ ಭಕ್ತಾದಿಗಳಿದ್ದಾರೆ. ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಕೋಟಿಗೆ ವಿಶೇಷ ಪ್ರೀತಿ, ವಿಶೇಷ ಅಭಿಮಾನ, ಭಾರಿ ಗೌರವ. ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸಲೆಂದೇ ಇರುವ ತಿಮ್ಮಪ್ಪ ಮಂಗಳ ಗ್ರಹಕ್ಕೆ ಹೋಗುತ್ತಿದ್ದಾರೆ.
ಅರೆ, ಏನಿದು ಎಂದ್ರಾ? ತಿಮ್ಮಪ್ಪನ ಹೆಸರು ಮಂಗಳನಲ್ಲಿ ಅಚ್ಚಾಗುತ್ತಿದೆ. ಇದೇನಿದು ತಲೆಗೆ ಹುಳಬಿಟ್ರಲಾ ಅಂತಿದ್ದೀರಾ?
ವಿಷಯ ಏನ್ ಗೊತ್ತಾ? ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಇದೆಯಲ್ಲಾ ಅದು 2020ರಲ್ಲಿ ಮಂಗಳ ಗ್ರಹಕ್ಕೆ ಉಡಾವಣೆ ಮಾಡುವ ರಾಕೆಟ್ ನಲ್ಲಿ ತಿರುಪತಿ ನಿವಾಸನ ಹೆಸರು ಹೋಗಲಿದೆ.
ಕೆಂಪುಗ್ರಹ ಮಂಗಳಕ್ಕೆ ನಾಸಾ ಉಡಾವಣೆ ಮಾಡಲಿದ್ದು, ರಾಕೆಟ್ ನ ರೋವರ್ ಒಳಗೆ ಒಂದು ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಈ ಚಿಪ್ ನಲ್ಲಿ ಸುಮಾರು 1 ಕೋಟಿ ಹೆಸರನ್ನು ನಮೂದಿಸಿ ಮಂಗಳಕ್ಕೆ ಕಳುಹಿಸುತ್ತಿದ್ದು, ತಿಮ್ಮಪ್ಪನ ಹೆಸರು ಕೂಡ ಇರಲಿದೆ.
ಮಂಗಳ ಗ್ರಹಕ್ಕೆ ನಿಮ್ಮ ಹೆಸರು ಕಳುಹಿಸಿ ಎಂದು ಸಂಸ್ಥೆ ವೆಬ್ ಸೈಟ್ ನಲ್ಲಿ ಹೇಳಿತ್ತು. ವಿಶ್ವದ ನಾನಾ ಕಡೆಗಳಿಂದ ಹೆಸರುಗಳು ಹೋಗಿದ್ದವು. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ರಮಣ ರೆಡ್ಡಿ ತಿರುಪತಿ ವೆಂಕಟೇಶ್ವರ ಸ್ವಾಮಿ ಹೆಸರು ಕಳುಹಿಸಿದ್ದರು. ಅವರು ಹೇಳಿರುವ ಹೆಸರು ಮಂಗಳಕ್ಕೆ ಹೋಗಲಿದೆ ಎಂದು ನಾಸಾ ಸಂದೇಶ ಕಳಹಿಸಿದೆ. ರಮಣ ರೆಡ್ಡಿಯವರೇ ಈ ಬಗ್ಗೆ ಹೇಳಿದ್ದಾರೆ.