ಕಲ್ಪನಾ ಸರೋಜ್. ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಎಲ್ಲ ಕಷ್ಟ ನಷ್ಟಗಳನ್ನು ಎದುರಿಸಿ ದಾರಿ ಕಾಣದಾದಾಗ ತಾವೇ ಅವಕಾಶವನ್ನು ಸೃಷ್ಟಿಸಿಕೊಂಡು ಇಂದು ನೂರಾರು ಕೋಟಿಯ ಒಡತಿಯಾಗಿದ್ದಾರೆ.
ಕಲ್ಪನಾ ಜನಿಸಿದ್ದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ರೂಪರ್ಖೇಡಾ ಎಂಬ ಹಳ್ಳಿ, ತಂದೆಗೆ ಪೊಲೀಸ್ ಇಲಾಖೆಯ ದಫೇದಾರ್, ದಲಿತರು ಎಂಬ ಕಾರಣಕ್ಕೆ ಶಾಲೆಯಲ್ಲಿ ಅವರಿಗೆ ದಿನವೂ ಅವಮಾನವಾಗುತ್ತಿತ್ತು. ಮುಂದೆ ಕುಟುಂಬಕ್ಕೆ ಒದಗಿದ ಕಷ್ಟಗಳ ಕಾರಣ 9ನೇ ತರಗತಿಗೆ ಓದು ನಿಲ್ಲಿಸಿಬೇಕಾಯಿತು. ಈ ಸಂದರ್ಭದಲ್ಲಿಯೇ, ಕುಟುಂಬದ ಹಿರಿಯರ ಒತ್ತಡಕ್ಕೆ ಮಣಿದು 1973ರಲ್ಲಿ ಬಾಲ್ಯವಿವಾಹವಾದರು. ಆಗ ಅವರಿಗೆ ಕೇವಲ 12 ವರ್ಷ!
ಬಾಲ್ಯವಿವಾಹವಾದ ನಂತರ ಸ್ಲಂ ಪ್ರದೇಶದಲ್ಲಿ ಪತಿಯ ಜೊತೆ ವಾಸಿಸಿದ ಕಲ್ಪನಾ ಗಂಡನ ಕುಟುಂಬದವರ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಗುರಿಯಾದರು. ಮುಂದೆ ಗಂಡನ ಮನೆಯವರಿಂದ ಕಿರುಕುಳ ತಾಳಲಾರದೆ ತವರುಮನೆಗೆ ಹಿಂದಿರುಗಿದರು.ಗಂಡ ಬಿಟ್ಟವಳೆಂಬ ಸಮಾಜದ ಟೀಕೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದು ಉಂಟು.
ಮುಂದೆ 1978 ರಲ್ಲಿ ಬಂಧುಗಳ ಜೊತೆ ಮುಂಬೈ ಗೆ ಬಂದು ಒಂದು ಟೈಲರಿಂಗ್ ಶಾಪ್ನಲ್ಲಿ 2 ರೂಪಾಯಿ ದಿನಗೂಲಿಯ ನೌಕರಿಗೆ ಸೇರಿದರು. ಶ್ರದ್ಧೆಯಿಂದ ದುಡಿಯುತ್ತಿದ್ದ ಕಲ್ಪನಾವರನ್ನು ಗಮನಿಸಿದ ಮಾಲೀಕರು ತಿಂಗಳ ಸಂಬಳವನ್ನು 60 ರೂಪಾಯಿನಿಂದ 400 ರೂಪಾಯಿಗಳಿಗೆ ಏರಿಸಿದರು. ಮುಂದೆ ಅಲ್ಮೇರಾ ತಯಾರಿಸಿ ಮಾರುವ ವ್ಯಕ್ತಿಯೊಬ್ಬನ ಪರಿಚಯವಾಯಿತು. ಪರಿಚಯ ಪ್ರೇಮವಾಯಿತು ಮುಂದೆ ಅವರನ್ನೇ ಮದುವೆಯಾದರು. ಅಮರ್-ಸೀಮಾ ಎಂಬ ಎರಡು ಮಕ್ಕಳ ತಾಯಿಯಾದರು.
ಗಂಡನ ಜೊತೆಯಲ್ಲಿ ಅಲ್ಮೇರಾ ಬಿಜಿನೆಸ್ನ ಗುಟ್ಟುಗಳನ್ನೆಲ್ಲಾ ಸ್ವಲ್ಪ ಸ್ವಲ್ಪ ತಿಳಿದುಕೊಂಡಿದ್ದರು. 1989 ರಲ್ಲಿ ಗಂಡ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ವೇಳೆ ಮತ್ತೆ ಚುಚ್ಚು ಮಾತುಗಳಿಗೆ ಒಳಗಾದರೂ, ಆದರೂ, ಅದಕ್ಕೆಲ್ಲಾ ಕಿವಿಗೊಡದೆ ಒಂದು ಮಹತ್ವದ ಸಾಧನೆಯೊಂದಿಗೆ ಎಲ್ಲರಿಗೂ ಉತ್ತರ ಕೊಡಬೇಕೆಂದು ನಿರ್ಧರಿಸಿದ್ರು. ಸೈಟ್ ಮಾರಿದ ಹಣದಿಂದ ಮಾರ್ಕೆಟಿಂಗ್ ಅಧಿಕಾರಿಯೊಬ್ಬರ ಸಲಹೆಯಂತೆ ಅಹಮದ್ನಗರದಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯಲ್ಲಿ ಶೇ.60 ರಷ್ಟು ಷೇರು ಖರೀದಿಸಿದ್ರು.
ನೋಡಿ, ನಂತರದಲ್ಲಿ ಆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿದರು. ಆದರೆ, ಐದಾರು ವರ್ಷ ಲಾಭದಲ್ಲಿ ನಡೆದ ಫ್ಯಾಕ್ಟರಿ ನಂತರ ನಷ್ಟಕ್ಕೆ ಬಿತ್ತು. ಹಲವು ಕಷ್ಟಗಳ ನಂತರ ಮುಂದೆ ಫ್ಯಾಕ್ಟರಿ ಪುನರಾರಂಭವಾಯಿತು. ಈ ನಡುವೆಯೂ ರೆಫ್ರಿಜರೇಟರ್ನಲ್ಲಿ ಬಳಕೆಯಾಗುವ ಹವಾನಿಯಂತ್ರಿತ ಟ್ಯೂಬ್ಗಳು ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವ ಕಾಪರ್ ಕಾಯಿಲ್ಗಳನ್ನು ಕಮನಿ ಟ್ಯೂಬ್ಸ್ ಉತ್ಪಾದಿಸಿದರು.
ವಿಶೇಷ ಎಂದರೆ, 2006ರಲ್ಲಿ ಮೈತುಂಬಾ ಸಾಲದ ಹೊರೆ ಹೊತ್ತಿದ್ದ ಈ ಕಂಪನಿ, ಇಂದು ಬಹುದೊಡ್ಡ ಲಾಭದೊಂದಿಗೆ ಮುನ್ನಡೆಯಿತು. ಇದರ ಪರಿಣಾಮವಾಗಿ ಇಂದು ಕಮನಿ ಟ್ಯೂಬ್ಸ್ನ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಪುನರ್ ಪ್ರಾರಂಭವಾದ ಆರು ವರ್ಷಗಳಲ್ಲಿ ಕಂಪನಿಯ ಲಾಭ 200 ಕೋಟಿ ದಾಟಿತು. ಈಗ ಅಹಮದಾಬಾದ್ನಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯ ಒಡೆತನವೂ ಕಲ್ಪನಾ ಅವರದ್ದೇ.
ಅಷ್ಟೇ ಅಲ್ಲ, ಕಲ್ಪನಾ ಸರೋಜ್ ಅಸೋಸಿಯೇಟ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಏಜೆನ್ಸಿ, ಅಂಬೇಡ್ಕರ್, ಜ್ಯೋತಿ ಬಾಪುಲೆಯವರ ಹೆಸರಲ್ಲಿ ಶಾಲೆ-ಕಾಲೇಜುಗಳನ್ನು ಮತ್ತು ಸ್ಟೀಲ್ ತಯಾರಿಕಾ ಕಂಪನಿಯನ್ನು ಆರಂಭಿಸಿದರು. ಇವರ ಈ ಸಾಧನೆಗೆ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.ಇವರನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತೀಗಣ್ಯರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಇನ್ನು ಇವರ ಸಾಧನೆಯೂ ಅನೇಕರಿಗೆ ಸ್ಫೂರ್ತಿಯಾಗಿದೆ.