ಕರ್ನಾಟಕದ ಸಿಂಗಂ ಎಂದೇ ಜನಪ್ರಿಯರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿತ್ರರಂಗಕ್ಕೆ ಬರುತ್ತಿದ್ದಾರೆ. ತಮಿಳು ನಿರ್ದೇಶಕ ರಾಜ್ ಕುಮಾರ್ ನಿರ್ದೇಶನದ ಅರಬ್ಬೀ ಸಿನಿಮಾ ಮೂಲಕ ಕರ್ನಾಟಕ ಕಂಡಿದ್ದ ದಕ್ಷ ಹಾಗೂ ಖಡಕ್ ಪೊಲೀಸ್ ಅಧಿಕಾರಿ ತೆರೆಗೆ ಬರಲಿದ್ದಾರೆ.
ಬೆಂಗಳೂರು ಮೂಲದ ಎರಡೂ ಕೈಗಳಲ್ಲಿದ ಪ್ಯಾರ ಈಜಪಟು ಕೆ ಎಸ್ ವಿಶ್ವಾಸ್ ಅವರ ಬದುಕನ್ನಾಧರಿತ..ಅವರ ಸಾಧನೆಯ ಕುರಿತ ಸಿನಿಮಾ ಅರಬ್ಬೀ. ಈ ಸಿನಿಮಾದಲ್ಲಿ ಸ್ವತಃ ವಿಶ್ವಾಸ್ ತಮ್ಮ ಪಾತ್ರವನ್ನು ಮಾಡಲಿದ್ದಾರೆ. ಅಣ್ಣಾಮಲೈ ವಿಶ್ವಾಸ್ ಅವರ ಕೋಚ್ ಆಗಿ ನಟಿಸಲಿದ್ದಾರೆ.
ಪ್ಯಾರಾ ಈಜುಪಟು ಸಾಧನೆಯಾಧಾರಿತ ಸಿನಿಮಾವಾಗಿರುವುದರಿಂದ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ ಎಂದಿದ್ದಾರೆ ಅಣ್ಣಾಮಲೈ.
ಪುತ್ತೂರಿನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮಲೈ ಅತಿಥಿಯಾಗಿ ಬಂದಿದ್ದರು. ಆ ವೇಳೆ ಸಿನಿಮಾ ತಂಡ ಹೀಗೊಂದು ಪಾತ್ರ ಇದೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕೂಡ ಅಣ್ಣಾಮಲೈ ಒಪ್ಪಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಲೈ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಉಡುಪಿ, ಚಿಕ್ಕಮಗಳೂರಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದಿಗೂ ಅಲ್ಲಿನ ಜನರಿಗೆ ಅಚ್ಚು-ಮೆಚ್ಚು.
ದಕ್ಷ, ಪ್ರಾಮಾಣಿಕತೆಗೆ ಹೆಸರಾಗಿದ್ದ , ರೌಡಿ-ಪುಡಾರಿ, ಪುಂಡರಿಗೆ , ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಅಣ್ಣಾಮಲೈ ಸಿನಿಮಾದಲ್ಲಿ ಮಿಂಚಲಿದ್ದು, ಅವರನ್ನು ಮುಂದೆ ತೆರೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಬಹುದಾ ಎನ್ನುವ ತವಕ ಅಭಿಮಾನಿಗಳಲ್ಲಿದೆ.