ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಬರುವಂತಹ ಪ್ರಮುಖ ದೇವಾಲಯಗಳಲ್ಲಿ ಏಪ್ರಿಲ್ 26ರಂದು ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಕುರಿತಂತೆ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ, ರಾಜ್ಯದ ಉತ್ತಮ ಆದಾಯವಿರುವ 110 ದೇವಾಲಯಗಳಲ್ಲಿ 2020 ರ ಏಪ್ರಿಲ್ 26 ರಂದು ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿವಾಹವಾಗುವವರಿಗೆ ಎಪಿಎಲ್, ಬಿಪಿಎಲ್ ಮಾನದಂಡವಿಲ್ಲ. ವರನಿಗೆ ಹೂವಿನ ಹಾರ, ಪಂಚೆ, ಅಂಗಿ ಮತ್ತು ಶಲ್ಯಕ್ಕಾಗಿ 5 ಸಾವಿರ ರೂ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10 ಸಾವಿರ ರೂ, ವಧವಿಗೆ ಚಿನ್ನದ ತಾಳಿ, ಅಂದಾಜು 8 ಗ್ರಾಂನ ಚಿನ್ನದ ಗುಂಡಿಗಾಗಿ 40 ಸಾವಿರ ರೂಗಳನ್ನು ನೀಡಲಾಗುವುದು. ಮದುವೆ ದಿನವೇ ಹಣವನ್ನು ವಧು – ವರರ ಖಾತೆಗೆ ಆರ್ ಟಿ ಜಿ ಎಸ್ ಮೂಲಕ ಜಮಾ ಮಾಡಲಾಗುವುದು ಎಂದರು.
ಮೊದಲ ಬಾರಿಗೆ ವಿವಾಹವಾಗುವವರಿಗೆ ಮಾತ್ರ ಸಾಮೂಹಿಕ ವಿವಾಹದಲ್ಲಿ ಅವಕಾಶವಿದೆ. ವಧು ವರರು ಪ್ರಾಪ್ತ ವಯಸ್ಕರಾಗಿದ್ದು, ಸರಕಾರದ ಅಧಿಕೃತ ದಾಖಲೆಗಳನ್ನು ನೀಡಬೇಕು. ವಿವಾಹ ನಡೆಯುವ ಸ್ಥಳದಲ್ಲೇ ವಿವಾಹ ನೋಂದಣಿ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಾಂಡ್ ವಿತರಣೆ ಸಹ ನೀಡಲಾಗುವುದು , ರಾಜ್ಯದ ಪ್ರಮುಖ ಖಾಸಗಿ ಸಂಸ್ಥೆಗಳು ತಮ್ಮ ನಿಧಿಯಿಂದ ವಧು ವರರಿಗೆ ಉಚಿತ ಉಡುಗೊರೆ ನೀಡುವುದಾದರೆ ಅದಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ಪೇಜಾವರ ಶ್ರೀಗಳು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ, ಇನ್ಫೋಸಿಸ್ಸಿನ ಸುಧಾಮೂರ್ತಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.