ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯುವಂತೆ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಕಾಮ ಪಿಶಾಚಿ ವಿನಯ್ ಶರ್ಮಾ ಮನವಿ ಮಾಡಿದ್ದಾನೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿ ಸಲ್ಲಿಸಿರುವ ಅರ್ಜಿಗೆ ತಾನು ಸಹಿ ಮಾಡಿಲ್ಲ ಎಂದು ವಿನಯ್ ಶರ್ಮಾ ಹೇಳಿಕೊಂಡಿದ್ದಾನೆ. ಈತನ ಪರ ವಕೀಲ ಎಪಿ ಸಿಂಗ್ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳ ಪರಿಶೀಲನೆಗೆಂದು ಕಳುಹಿಸಲಾಗಿರುವ ಕ್ಷಮಾದಾನ ಅರ್ಜಿಯನ್ನು ಅನುಮತಿ ಪಡೆಯದೆ, ವಿನಯ್ ಶರ್ಮಾ ಅಥವಾ ಕಾನೂನಿನ ಪ್ರತಿನಿಧಿ ಒಪ್ಪಿಗೆಯಿಲ್ಲದೆ ಕಳುಹಿಸಲಾಗಿದೆ. ಆದ್ದರಿಂದ ಆ ಅರ್ಜಿಯನ್ನು ರದ್ದುಗೊಳಿಸಬೇಕು. ಹೊಸ ಅರ್ಜಿಯನ್ನು ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಪ್ರಕರಣದ ಪ್ರಮುಖ ಆರೋಪಿ ವಿನಯ್ ಶರ್ಮಾ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ಕೇಂದ್ರ ಗೃಹಸಚಿವಾಲಯ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು.
ಪ್ರಕರಣದ ಹಿನ್ನೆಲೆ : 2012ರ ಡಿಸೆಂಬರ್ 16ರಂದು ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಮೇಲೆ ಆಕೆಯ ಸ್ನೇಹಿತನ ಎದುರೇ ಅಪ್ರಾಪ್ತ ಸೇರಿ ಆರು ಮಂದಿ ಕಾಮಾಂಧರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸಾವು – ಬದುಕಿನ ನಡುವೆ ಹೋರಾಡಿ ಯುವತಿ ಡಿಸೆಂಬರ್ 29ರಂದು ಮೃತಪಟ್ಟಿದ್ದಳು.
ಆರು ಮಂದಿ ಅಪರಾಧಿಗಳಲ್ಲಿ ರಾಮ್ ಸಿಂಗ್ ಎಂಬಾತ 2013ರಲ್ಲಿ ವಿಚಾರಣೆ ಸಂದರ್ಭದಲ್ಲೇ ತಿಹಾರ್ ಜೈಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಬಾಲಾಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಉಳಿದ ನಾಲ್ವರು ಗಲ್ಲುಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ,