ಈರುಳ್ಳಿ ಬೆಲೆ ಗಗನಕ್ಕೇರಿದೆ. ನಾನಾ ಕಡೆಗಲ್ಲಿ ದ್ವಿಶತಕದತ್ತ ಸಾಗಿದೆ. ಕಂಗೆಟ್ಟಿಸಿರುವ ಈರುಳ್ಳಿ ಬಗ್ಗೆ ವಿವಿಧ ರೀತಿಯ ಟ್ರೋಲ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮದುವೆಗೆ ಗಿಫ್ಟ್ ಕೊಡೋ ಲೆವೆಲ್ಗೆ ಈರುಳ್ಳಿ ಬೆಲೆ ದುಬಾರಿಯಾಗಿದದೆ. ಇವುಗಳ ಬೆನ್ನಲ್ಲೇ ಅನೇಕ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ.
ಅದೇರೀತಿ ಕ್ಯಾಂಟರ್ ಚಾಲಕನೊಬ್ಬ ಈರುಳ್ಳಿ ಕದ್ದು, ಲಕ್ಷಾಂತರ ರೂ ಜೇಬಿಗಿಳಿಸಿಕೊಂಡು, ಟ್ಯಾಂಕರ್ ಪಲ್ಟಿಯಾಗಿದೆ. ಜನ ಈರುಳ್ಳಿ ಕದ್ದೊಯ್ದಿದ್ದಾರೆ ಎಂದು ಕಥೆ ಕಟ್ಟಿ ಬಳಿಕ ಪೊಲೀಸರ ಅತಿಥಿಯಾಗಿದ್ದಾನೆ.
ಚೇತನ್ ಎಂಬಾತ ಆರೋಪಿ ಚಾಲಕ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಕೆ ಜಿಗೆ 140 ರೂನಂತೆ 183 ಚೀಲ ಈರುಳ್ಳಿಯನ್ನು ತುಂಬಿ ಚೆನ್ನೈನ ಮೋರ್ವೆಲ್ ಕಂಪನಿಗೆ ಕಳುಹಿಸಲಾಗಿತ್ತು. ಚಾಲಕ ಚೇತನ್ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರಕೆರೆ ಬಳಿಯ ಯರಗುಂಟೇಶ್ವರ ನಗರದ ಬಳಿ ಬೇಕಂತಲೇ ಕ್ಯಾಂಟರ್ ಪಲ್ಟಿ ಮಾಡಿ ಆಸ್ಪತ್ರೆಗೆ ಸೇರುವ ನಾಟಕವಾಡಿದ್ದಾನೆ. ಮಾಲೀಕ ಆನಂದಗೆ ಕರೆಮಾಡಿ ಕ್ಯಾಂಟರ್ ಮಗಚಿ ಬಿದ್ದಿದೆ. ಜನ ಈರುಳ್ಳಿ ಹೊತ್ತೊಯ್ದರೆಂದು ಹೇಳಿದ್ದಾನೆ.
ಬಳಿಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊಲ್ಲಡಕುನಲ್ಲಿ 81 ಚೀಲ ಈರುಳ್ಳಿಯನ್ನು ಮಾರಿದ್ದಾನೆ. ಇದರ ಮೌಲ್ಯಸುಮಾರು 7 ಲಕ್ಷ ರೂ. ತಾವರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.