ಸಾವಿನ ಅಧಿಪತಿಯಾದ ಯಮಧರ್ಮರಾಯ ಮತ್ತು ಆತನ ಸಹಾಯಕ ಚಿತ್ರಗುಪ್ತ ಕುಶಾಲನಗರದ ಆಸುಪಾಸಿನಲ್ಲಿ ಸಂಚರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದು ಪ್ರೀತಿಯಿಂದ ಹೇಳುವ ಬುದ್ಧಿಮಾತು…ಈಗ ಹೂ ಕೊಟ್ಟು ಹೇಳುತ್ತಿದ್ದೇವೆ.. ಮತ್ತದೇ ರಿಪೀಟ್ ಆದ್ರೆ ಹೇಳಕ್ಕಾಗಲ್ಲ ಯಮಪಾಶ ರೆಡಿ ಇದೆ ಹುಷಾರ್ ಎಂಬ ಸಂದೇಶವಿತ್ತು!
ಇದೇನು ಅಂದ್ರಾ? ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಲು ಹಾಗೂ ಜನಜಾಗೃತಿ ಮೂಡಿಸಲು ಕೊಡಗು ಜಿಲ್ಲಾ ಪೊಲೀಸರು 31ನೇ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಇಲ್ಲಿನ ಫೀಲ್ಡ್ ಮಾರ್ಶಲ್ ಕಾರಿಯಪ್ಪ ಸರ್ಕಲ್ ಬಳಿ ಹೀಗೊಂದು ವಿನೂತನ ಪ್ರದರ್ಶನ ನೀಡಿದ ಪರಿ ಇದು. ಪೊಲೀಸ್ ಸಿಬ್ಬಂದಿ ಶಾಜಿ ಮತ್ತು ಪಾರ್ಥ ಯಮ ಮತ್ತು ಚಿತ್ರಗುಪ್ತನ ವೇಷಧರಿಸಿದ್ದರು.
ಯಮ ಮತ್ತು ಚಿತ್ರಗುಪ್ತ ಇಬ್ಬರೂ ಸೇರಿ ಹೆಲ್ಮೆಟ್ ಇಲ್ಲದ ಸಂಚರಿಸುತ್ತಿದ್ದ ಬೈಕ್ ಸವಾರರನ್ನು, ಸೀಟ್‌ಬೆಲ್ಟ್ ಹಾಕದಿರುವ ಚಾಲಕರನ್ನು ನಿಲ್ಲಿಸಿ ಎಚ್ಚರಿಕೆ ನೀಡಿದರು. ಮತ್ತೊಮ್ಮೆ ಇದೇ ರೀತಿ ಕಾನೂನು ಉಲ್ಲಂಘಿಸಿದರೆ ನೇರವಾಗಿ ಯಮಲೋಕಕ್ಕೆ ಕರೆದೊಯ್ಯುವುದಾಗಿ ಹೇಳಿದರು.
ಯಮಧರ್ಮ ತನ್ನ ವಾಹನ ಕೋಣವನ್ನೇರಿ ಬಂದಿದ್ದ. ಒಂದು ಕೈಯಲ್ಲಿ ಗದೆ, ಇನ್ನೊಂದು ಕೈಯಲ್ಲಿ ಯಮಪಾಶವೂ ಇತ್ತು.ಎಚ್ಚರಿಕೆ ನೀಡಿದ ಬಳಿಕ ಗುಲಾಬಿ ಹೂ, ಚಾಕಲೇಟುಗಳನ್ನು ನೀಡಿ `ಗಾಂಧಿಗಿರಿ’ ಎನ್ನುವ ಭಿತ್ತಿಫಲಕ ಪ್ರದರ್ಶಿಸಿದ್ದು ಗಮನ ಸೆಳೆಯಿತು. ಸೋಮವಾರಪೇಟೆ ಡಿವೈಎಸ್ಪಿ ಎಚ್ ಎಂ ಶೈಲೇಂದ್ರ, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಾರ ಕಾನೂನುಗಳನ್ನು ಖಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು. ಅಲ್ಲದೆ ದುಪ್ಪಟ್ಟು ದಂಡ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟರು.
ಕುಶಾಲನಗರದಲ್ಲಿ ಚಿತ್ರಗುಪ್ತನೊಂದಿಗೆ ಯಮರಾಯ! ಇದು ಸಿನಿಮಾ ಸ್ಟೋರಿ ಅಲ್ವೇ ಅಲ್ಲ!
Date: