ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲಿದ್ದಾರೆ. ಅವರು ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ವಂತೆ! ಇನ್ನೇನೆ ಇದ್ದರು ಪಕ್ಷದ ಯುವಕರಿಗೆ ಅನುಭವದ ಧಾರೆ ಎರೆಯುವ ಕೆಲಸ ಮಾಡಲಿದ್ದಾರಂತೆ!
ಹೌದು ಈ ಮಾತನ್ನು ಹೇಳಿದವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್ ) ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್.
ಹೌದು. ಚಿಕ್ಕಾಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ಟರು, ಮೈತ್ರಿ ಸರಕಾರವವನ್ನು ಬೀಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ ಎಸ್ ಯಡಿಯೂರಪ್ಪ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣೆಗಳಿಂದ ದೂರ ಉಳಿದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸ್ವತಃ ಅ ಅವರೇ ನನಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಹೇಳಿದರು.
ತಿಂಗಳ ಹಿಂದೆ ನಾನು ಯಡಿಯೂರಪ್ಪರನ್ನು ಭೇಟಿಯಾಗಿದ್ದೆ. ಮೂರುವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ, ದುರ್ಬಲ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ನಂತರ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷ ಹಾಗೂ ಜನ ಎಲ್ಲಾ ರೀತಿಯ ಜವಾಬ್ದಾರಿ ಹಾಗೂ ಅಧಿಕಾರ ನೀಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗಾಗಿ ಕಾರ್ಯ ನಿರ್ವಹಿಸುತ್ತೇನೆಂದು ಅವರು ನನಗೆ ತಿಳಿಸಿದರು ಎಂದು ಕಲ್ಲಡ್ಕ ತಿಳಿಸಿದರು.
ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ಮೂರುವರೆ ವರ್ಷ ಕಾಲ ಅವರ ಮುಂದಾಳತ್ವದಲ್ಲಿ ಸರಕಾರ ನಡೆಯಲಿದೆ. ಯಡಿಯೂರಪ್ಪ ಜನರಿಗಾಗಿ ಏನಾದರೂ ಮಾಡಬೇಕೆಂದು ಕೊಂಡಿರುವ ವ್ಯಕ್ತಿ. ಇಡೀ ದೇಶದಲ್ಲಿ ರೈತರ ಬಜೆಟ್ ತಂದವರು ಯಡಿಯೂರಪ್ಪ ಅವರೇ… ಕಳೆದ 60 ವರ್ಷಗಳಲ್ಲಿ ಯಾರೂ ಮಾಡದ ಕೆಲಸ, ಕಾರ್ಯಗಳನ್ನು ಯಡಿಯೂರಪ್ಪನವರು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.