ಮಾನವನ ಮೆದುಳು ಕಂಪ್ಯೂಟರ್ನ್ನು ಮೀರಿಸಬಹುದಾ..? ಕಂಪ್ಯೂಟರ್ನ್ನು ಮೀರಿಸಿ ಮನುಷ್ಯನ ಮೆದುಳು ಕೆಲಸ ಮಾಡಬಹುದಾ..?. ಹೌದು ಮನುಷ್ಯನ ಮೆದುಳು ಕಂಪ್ಯೂಟರ್ಗಿಂತಲೂ ಫಾಸ್ಟ್ ಅಂತಾ ನಿರೂಪಿಸಿದ್ದವರಿದ್ದಾರೆ. ಕಂಪ್ಯೂಟರ್ಗಿಂತಲೂ ಮನುಷ್ಯನ ಮೆದುಳೇ ಗ್ರೇಟ್ ಅಂತಾ ಜಗತ್ತಿಗೆ ತೋರಿಸಿದ್ದು ಒಬ್ಬ ಭಾರತೀಯ ಮಹಿಳೆ.
ಕಂಪ್ಯೂಟರ್.. ಇದು ಮಾನವ ನಿರ್ಮಿತ ಅಚ್ಚರಿ.. ಇವತ್ತು ಕಂಪ್ಯೂಟರ್ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಮೊದಲು ಕಂಪ್ಯೂಟರ್ ಉನ್ನತ ಶಿಕ್ಷಣ ಪಡೆದವರಿಗೆ ಅಥವಾ ಅತ್ಯುನ್ನತ ವೈಜ್ಞಾನಿಕ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಈಗಿನ ಪರಿಸ್ಥಿತಿಯೇ ಬೇರೆ.. ಇಂದು ಕಂಪ್ಯೂಟರ್ ಪ್ರಸ್ತುತ ಜಗತ್ತಿನ ಅನಿವಾರ್ಯವಾಗಿದೆ.
ಲೆಕ್ಕವನ್ನು ಪಟ್ ಅಂತಾ ಮಾಡೋದ್ರಲ್ಲಿ ಕಂಪ್ಯೂಟರ್ಗಳನ್ನು ಮೀರಿಸಲು ಸಾಧ್ಯವಿಲ್ಲ. ಯಾಕಂದ್ರೆ ಅದೆಂತಹದ್ದೆ ಸಂಕೀರ್ಣ ಲೆಕ್ಕವಿರಲಿ, ಅದನ್ನು ಕ್ಷಣಾರ್ಧದದಲ್ಲಿ ಸಾಲ್ವ್ ಮಾಡೋ ರೀತಿ ಕಂಪ್ಯೂಟರನಲ್ಲಿ ಪ್ರೋಗ್ರಾಂ ಮಾಡಿರ್ತಾರೆ ತಂತ್ರಜ್ಞರು. ಕಂಪ್ಯೂಟರ್ ಸಂಖ್ಯೆಗಳನ್ನು ಕೂಡಿ, ಕಳೆದು, ಗುಣಿಸಿ ಭಾಗಿಸಿ ಕಣ್ಣು ಮಿಟುಕಿಸುವುದರಲ್ಲಿ ಲೆಕ್ಕ ಮಾಡಿ ಮುಗಿಸುತ್ತೆ. ಆದ್ರೆ ಸಾಧಕಿ ಮಹಿಳೆ ಅಂತಿಂಥವರಲ್ಲ. ಕಂಪ್ಯೂಟರ್ಗಿಂತಲೂ ವೇಗವಾಗಿ ಕೆಲಸ ಮಾಡುವ ಇವರ ಮೆದುಳನ್ನು ಒಂದು ಮಿಸ್ಟರಿ ಎಂದು ಗಣಿತಶಾಸ್ತ್ರಜ್ಞರು ಪರಿಗಣಿಸಿಬಿಟ್ಟಿದ್ದಾರೆ. ಎಸ್ ಇವರೇ ನಮ್ಮ ಹೆಮ್ಮೆಯ ಶಕುಂತಲಾ ದೇವಿ ಅರ್ಥಾತ್ ಹ್ಯೂಮನ್ ಕಂಪ್ಯೂಟರ್.
ಹ್ಯೂಮನ್ ಕಂಪ್ಯೂಟರ್ ಎಂದು ಜಗತ್ತಿನಾದ್ಯಂತ ಖ್ಯಾತಿ ಪಡೆದ ಮಹಿಳೆ ಶಕುಂತಲಾ ದೇವಿ.. ತಮ್ಮ ಬುದ್ಧಿವಂತಿಕೆಯ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು, ಜೊತೆಗೆ ಅಚ್ಚರಿ ಮೂಡಿಸಿದವರು. ಜಗತ್ತಿನ ಮಾನವ ಅಚ್ಚರಿಗಳಲ್ಲಿ ಶಕುಂತಲಾ ದೇವಿಯವರನ್ನು ಅತಿ ದೊಡ್ಡ ಅಚ್ಚರಿ ಎನ್ನಬಹುದು. ಅಂದಹಾಗೆ ಜಗತ್ತಿನ ಅಚ್ಚರಿಯಾದ ಶಕುಂತಲಾ ದೇವಿ ನಮ್ಮ ಭಾರತೀಯರು.., ಮೇಲಾಗಿ ನಮ್ಮ ಹೆಮ್ಮೆಯ ಕರ್ನಾಟಕದವರು.
ಇವರು ಅತ್ಯದ್ಭುತ ಗಣಿತಶಾಸ್ತ್ರಜ್ಞೆ… ಲೆಕ್ಕಗಳಿಗೆ ಲೆಕ್ಕ ಹಾಕುವ ಚತುರೆ. ಕಂಪ್ಯೂಟರ್ಗಿಂತಲೂ ಮಿಗಿಲಾದ ಬುದ್ಧಿವಂತರಿಲ್ಲ ಎನ್ನುತ್ತಿದ್ದ ಕಾಲದಲ್ಲಿ ಕಂಪ್ಯೂಟರ್ಗೆ ಸೆಡ್ಡು ಹೊಡೆದವರು. ಕಂಪ್ಯೂಟರ್ ಅದ್ವಿತೀಯ ಅಂತಾ ವಾದಿಸುತ್ತಿದ್ದವರಿಗೆ ಅದನ್ನು ಕಂಡುಹಿಡಿದದ್ದು ಕೂಡ ಮಾನವನೇ ಎನ್ನುವುದನ್ನ ತಮ್ಮ ಬುದ್ದಿವಂತಿಕೆಯ ಮೂಲಕ ನೆನಪಿಸಿದವರು.
ಅಸಾಧಾರಣ ಬುದ್ಧಿವಂತಿಕೆಯ ಇವರು ಗಣಿತಶಾಸ್ತ್ರದಲ್ಲಿ ಪ್ರವೀಣೆ. ಬರೋಬ್ಬರಿ 201 ಸಂಖ್ಯೆಗಳ ಅಂಕೆಯೊಂದರ 23ನೇ ವರ್ಗಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡುಕೊಂಡು ಭಾರತೀಯರ ನೈಜ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ್ರು. ಬುದ್ಧಿಶಾಲಿಯಾದ ಮಾನವನ ಮುಂದೆ ಯಾವುದೇ ಕೃತಕ ಯಂತ್ರದ ಆಟ ನಡೆಯುವುದಿಲ್ಲ.. ಆ ಕೃತಕ ಯಂತ್ರಗಳ ಸೃಷ್ಟಿಕರ್ತನೇ ಮಾನವ ಎಂದು ಶಂಕುತಲಾ ದೇವಿ ಸಾಬೀತು ಪಡಿಸಿದರು.
201 ಅಂಕಿಗಳಿರುವ ಸಂಖ್ಯೆಯ ವರ್ಗಮೂಲವನ್ನ ಕಂಡುಹಿಡಿಯಲು “ಯೂನಿಕ್ 1108” ಎನ್ನುವ ಶಕ್ತಿಯುತ ಕಂಪ್ಯೂಟರ್ 62 ಸೆಕೆಂಡ್ಗಳನ್ನ ತೆಗೆದುಕೊಂಡಿತು. ಈ ಫಲಿತಾಂಶ ಬರಲು ಕಂಪ್ಯೂಟರ್ಗೆ ಬರೋಬ್ಬರಿ 13 ಸಾವಿರ ಸೂಚನೆಗಳ ಅವಶ್ಯಕತೆ ಬೇಕಾಗಿತ್ತು. ಅಲ್ಲದೆ ಸಾವಿರಗಟ್ಟಲೇ ಡಾಟಾ ಬೇಕಾಯಿತು. ಆದ್ರೆ ಶಕುಂತಲಾ ದೇವಿ ಅದೇ ಲೆಕ್ಕವನ್ನ ಬರೀ 50 ಸೆಕೆಂಡ್ನಲ್ಲೇ ಪೂರ್ಣಗೊಳಿಸಿದ್ದರು.
ಮಾನವನಿಗೂ ಮಿಗಿಲಾದ ಬುದ್ಧಿಶಕ್ತಿಯ ಯಂತ್ರವನ್ನ ತಯಾರಿಸಿದ್ದೇವೆ ಎಂದು ಬೀಗುತ್ತಿದ್ದ ಮಾನವನ ದುರಹಂಕಾರಕ್ಕೆ ಕೊಡಲಿ ಏಟು ನೀಡಿದ್ದರು. ಅದುವರೆಗೂ ಶಕುಂತಲಾ ದೇವಿಯಾಗಿದ್ದ ಅವರು ಅಂದಿನಿಂದ ಹ್ಯೂಮನ್ ಕಂಪ್ಯೂಟರ್ ಎಂದು ಕರೆಸಿಕೊಂಡರು.
ಗಣಿತಶಾಸ್ತ್ರದಲ್ಲಿ ಪ್ರಾವಿಣ್ಯತೆಯನ್ನ ಪ್ರದರ್ಶಿಸುವುದಿಲ್ಲ ಎಂದು ಪ್ರಕಟಿಸುವ ಮನಶಾಸ್ತ್ರಜ್ಞರ ಮನಸ್ಸಿನ ಲೋಪವನ್ನ ಎತ್ತಿ ತೋರಿಸಿದವರು ಈ ಅಸಾಧಾರಣ ಮಹಿಳೆ ಶಂಕುತಲಾ ದೇವಿ. ವೇದ ಕಾಲದಿಂದಲೂ ಗಣಿತಕ್ಕೂ ಭಾರತೀಯರಿಗೂ ಅವಿನಭಾವ ಸಂಬಂಧವಿದೆ. ಹಾಗಾಗಿಯೇ ಆರ್ಯಭಟ, ಭಾಸ್ಕರರು, ಶ್ರೀನಿವಾಸ ರಾಮಾನುಜಾಚಾರ್ಯರಂತೆಯೇ ಈ ಪರಂಪರೆಯನ್ನ ಉಳಿಸಿಕೊಂಡು ಬಂದಿದ್ದು ಈ ಕನ್ನಡತಿ ಶಕುಂತಲಾ ದೇವಿ.