ಹಾಯ್ ಸಹನಾ!
ಹೆದರಬೇಡ ಈ ಪತ್ರ ನಿನಗೇ ಬರೆದಿದ್ದು! ಹೊಸ ನಾಮಕರಣ ಅಂದುಕೊಂಡೆಯಾ? ಹೌದು ನಿನ್ನ ಹಾಗೆ ಕರೆದರೆ ಸರಿ ಅನಿಸಿತು. ಮುದ್ದಾಗಿ ನಗುವ ಹಸಿತ ವದನ ನಿನ್ನದು! ಅದರಲ್ಲಿ ಸಹನೆಯ ಮುತ್ತಾದ ನೂರೊಂದು ನುಡಿಗಳು! ನನ್ನದೆರುಗೆ ಅದೆಷ್ಟೋ ಬಾರಿ ನೀನು ಅನಾಮಿಕಳಾಗಿ ಸುಳಿದಾಡಿರಬಹುದು! ಆದರೆ ಯಾವ ಹುಡುಗಿಯ ಕಣ್ಣನ್ನು ನೇರವಾಗಿ ನೋಡದೆ ನನ್ನ ಪಾಲಿಗೆ ನಾನು ಸಭ್ಯನಂತಿರುವವ. ಇನ್ನೂ ಸರಿಯಾಗಿ ನಿನ್ನ ನೋಡಿಲ್ಲ!
ನನ್ನದೆಯ ಅಂತರಾಳದಿ ಹೊಸ ಕನಸುಗಳ ಹುಟ್ಟು ಹಾಕಿದವಳೇ…ಸಾಕಿನ್ನು ಬಿಡು ಮೊಂಡು ಹಠ! ಎರಡು ವರ್ಷದ ಹಿಂದಿನ ಆ ಸವಿ ಕ್ಷಣಗಳನ್ನೊಮ್ಮೆ ನೆನಪಿಸಿಕೋ. ಪದವಿಯನ್ನು ಮುಗಿಸಿ ಹೆಚ್ಚಿನ ಓದಿಗೆಂದು ನಾ ಮಂಗಳೂರು ವಿವಿಗೆ ಬಂದೆ, ಆ ದಿನವೇ ನಿನ್ನ ಆಗಮನವಾಯಿತು. ಕೇವಲ ನಮ್ಮ ತರಗತಿಗಲ್ಲ ನನ್ನ ಪುಟ್ಟ ಹೃದಯಕ್ಕೆ! ಮೊದಲ ಪರಿಚಯವದು ಪ್ರೀತಿಯ ಸೆಳೆತ ಅಂತ ನಿಜಕ್ಕೂ ಅರ್ಥವಾಗಲೇ ಇಲ್ಲ ಅಂದು. ದಿನಗಳು ಉರುಳಿದ ಮೇಲೆ ಅರಿವಾಯಿತು ನನ್ನೆದೆಯಲ್ಲಿ ನೀ ಪ್ರೀತಿಯ ಸಂಗೀತದ ಸ್ವರವಾಗಿದ್ದೀಯ ಎಂದು. ಆದರೆ ಪ್ರೀತಿ-ಪ್ರೇಮದಲ್ಲಿ ಅನುಭವವಿಲ್ಲದ ನಾನು ನಿನ್ನೆದುರು ನನ್ನ ಮನದ ನಿವೇಧನೆಯನ್ನು ಮಾಡಿಕೊಳ್ಳಲು ಅಂಜಿದೆ.
ಮರೆತಿಲ್ಲ ತಾನೆ? ನೀ ನನ್ನ ಪ್ರೀತಿಸುತ್ತಿದ್ದೀ ಎಂದು ಅರ್ಥವಾದ ಮೇಲೆ ತಡಮಾಡದೇ ನಾನೇ ನೇರವಾಗಿ ಪ್ರೀತಿಸುವ ವಿಷಯವನ್ನು ಕಾಯ್ದಿರಿಸಿ ಹೇಳಿದ್ದೆ.. ಅದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೀ ತಡಮಾಡದೆ ಒಪ್ಪಿಗೆಯ ಸಂದೇಶವನ್ನು ಕಳುಹಿಸಿದ್ದೆ. ಅದೇನೋ ಗೊತ್ತಿಲ್ಲ ಕಣೇ ನನ್ನಲ್ಲೊಂದು ಹೊಸತನವನ್ನು ಮೂಡಿಸಿದ್ದ ಹುಡುಗಿ ನೀನು..ಹೃದಯ ಕಂಪಿಸುತಿದೆ ಇನ್ನೂ ನಿನ್ನ ಬರುವಿಕೆಗಾಗಿ… ಮೌನವ ಮುರಿದು ಬಾರೇ.. ಮನದ ಮದರಂಗಿ!
ಹುಡುಗಿಯರೆಂದರೆ ಒಂದು ತರಹದ ಅಂತರವನ್ನು ಕಾಯ್ದಿರುಸುತ್ತಿದ್ದ ನನ್ನ ಹೃದಯದ ಅಂತಹಪುರಕ್ಕೆ ಹೇಗೆ ಬಲಗಾಲ ಇಟ್ಟು ಬಂದೆಯೋ ಗೊತ್ತಿಲ್ಲ. ನಾ ಯೂವುದೋ ಪತ್ರಿಕೆಗೆ ಬರೆದ ಪ್ರೇಮಪತ್ರವನ್ನು ಓದಿದ ನೀನು.. ಆ ಹುಡುಗಿ ಯಾರೆಂದು ಪೀಡಿಸಿದಾಗಲೇ ನಿನ್ನಲ್ಲೊಂದು ಪ್ರೀತಿಯ ಸೆಳೆತವಿದೆ ಎಂದು ಅರ್ಥವಾಗಿತ್ತು ನನಗೆ! ಪ್ರೀತಿಯಲ್ಲಿ ಸುಳಿಯೂ ಇದೆ ಎಂಬ ಕಾರಣಕ್ಕಾಗಿಯೇ ದೂರ ಇಟ್ಟಿದ್ದೆ ನಾ ನಿನ್ನ ಮೊದಮೊದಲಿಗೆ!
ಅದೆಷ್ಟು ಬಾರಿ ನಾವಿಬ್ಬರು ಕಾಲೇಜು ಲೈಬ್ರರಿಯಲ್ಲಿ ಎದುರೆದುರು ಕುಂತದ್ದು, ಒಂದೇ ಒಂದು ದಿನವೂ ನೇರವಾಗಿ ನಯನಗಳ ಮಿಲನವಾಗಿದ್ದೇ ನಾ ಕಾಣೆ. ನಾನಂತೂ ಯಾವಗಲೂ ನೋಡುತ್ತಿದ್ದುದು ನಿನ್ನ ಪಾದಗಳನ್ನು, ಅದು ಗೆಜ್ಜೆಕಟ್ಟಿಕೊಂಡಿರುವ ಲಕ್ಷ್ಮೀಪಾದಗಳಂತೆ, ಅದು ಶ್ರೀಪಾದ!
ತಡೆಯಲಾಗದೆ ನಯನಗಳನ್ನು ನೋಡಿ ಬಿಡೋಣವೆಂದು, ಅರಿವಿರದೆ ಕತ್ತೆತ್ತಿದಾಗ ಅದೆಂತಾ ರೋಮಾಂಚನ! ಹಿತವೆನಿಸುವುದಲ್ಲೇ ಕಣ್ಣಿಗೆ. ಅಲ್ವೇ, ನಿನಗೆ ಯಾವಾಗಲು ಕೆಮ್ಮು, ನೆಗಡಿ, ಶೀತ ಇರುತ್ತದೇನೆ? ನೆಗಡಿ ಇರದ ಮೂಗಿಗೆ ಪದೆ ಪದೇ ಸೋಕುವ ತೋರು ಬೆರಳು! ನಾನಷ್ಟೊಂದು ದಡ್ಡ ಅಲ್ಲಾ ಕಣೆ… ಅವೆಲ್ಲ ನಾ ನೋಡಲೆಂದು ಮಾಡ್ತ ಇದ್ದ ನಾಟಕ ಅಂತನೂ ಗೊತ್ತೇ!
ಮತ್ತೆ ನಿಂದು ಬೇರೆ ರೀತಿಯ ಪ್ರೇಮಸಂದೇಶ! ಆಗುಂಬೆ ಮಳೆ ಅಂದರೆ ಇಷ್ಟ. ಆ ಮಳೆಯಲಿ ನೆನೆಯುವಾಸೆ ಎಂಬ ಸಂದೇಶವ ಕಳುಹಿಸಿದ್ದೀ. ಆಗಲೂ ನಾ ಎಳೆ ಕೂಸಂತೆ ಸುಮ್ಮನೇ ಇದ್ದಾಗ ಎಂಥಾ ದಡ್ಡ ಈತ ಅರ್ಥವಾಗುವುದಿಲ್ಲವೋ ಎಂದು ನಿನಗೆ ಕೋಪ ಬಂದಿತ್ತು. ಆಮೇಲೆ ನಿನ್ನ ಮನದ ಭಾವನೆಗೆ ಸ್ಪಂದಿಸದೇ ಇರಲು ಸಾಧ್ಯವಾಗಲಿಲ್ಲ. ನೇರವಾಗಿಯೇ ಪ್ರೀತಿಸುವ ವಿಷಯ ಹೇಳಿದ್ದೇ. ಆಗಲೂ ನೀ ಐ ಲವ್ ಯೂ.. ಟೂ… ಹೇಳುವ ಬದಲು ಅದೃಷ್ಟವಿದ್ದರೆ ನಿಮ್ಮ ಮನೆ ಸೊಸೆ ಆಗುವೆ ಎಂದಿದ್ದೆ. ಇವೆಲ್ಲ ನಮ್ಮ ಪ್ರೇಮದ ನೆನಪಿನ ಕ್ಷಣಗಳು. ಇವೆಲ್ಲ ಬೆಳಗಿನ ಜಾವ ಬಿದ್ದ ಕನಸು!
ಹ್ಞೂಂ! ಹಿಗೊಂದು ಪ್ರೀತಿಯ ಮೊಳಕೆಯೊಡೆದಿದೆ.ಆ ಪ್ರೀತಿಯ ಮೊಳಕೆಯಲ್ಲೂ ನಿನ್ನ ಹೆಸರೇ ಕಾಣುತ್ತಿದೆ. ನನ್ನೊಳಗೆ ಮೂಡಿದ ಈ ಪ್ರೀತಿ ಬೃಹತ್ತಾಗಿ ಬೆಳೆದು ಅನೇಕರ ನೆರಳಾಗಲೆಂಬ ಆಸೆ ಕಣ್ ತುಂಬಾ ಇದ್ದೇ ಇದೆ. ನೀ ಈ ನನ್ನೊಳಗಿನ ಪ್ರೀತಿಗೆ ನೀರೆಯಲೇ ಬೇಕೆಂಬ ಒತ್ತಾಯ ಇಲ್ಲ. ಇದೊಂದು ನನ್ನ ಮನದ ನಿವೇಧನೆ ಅಷ್ಟೆ! ಸಂಶಯವಿಲ್ಲ, ಅಷ್ಟು ಮಾತ್ರ! ನೀರೆರೆಯದೆ ನೀರವವಾದರೂ ಪರವಾಗಿಲ್ಲ. ಆದ್ರೆ ಅದು ಬೆಳೆದು ಹೆಮ್ಮರವಾದ ಮೇಲೆ ಕಡಿಯುವ ಪ್ರಯತ್ನ ಮಾತ್ರ ಮಾಡದಿರು. ಏಕೆಂದರೆ ಅದಕ್ಕೆ ತಡೆದುಕೊಳ್ಳುವ ಶಕ್ತಿ ಇಲ್ಲ. ತುಂಟಿ ನನಗೆ ನೋವಾಗುವುದೆಂದಲ್ಲ, ಆ ನನ್ನ ಹೃದಯದಲ್ಲೇ ಇರುವ ನಿನಗೆಲ್ಲಿ ನೋವಾಗುವುದೋ ಎಂಬ ಆತಂಕ, ಹಾಗೊಂದು ಕಾಳಜಿ.
ನನ್ನಳಗೆ ನೀ ದಿನಾಲೂ ಮುದ್ದಾಗಿ, ಮುಗ್ದವಾಗಿ ಇಂದಿಗೂ ಮಾತನಾಡುತ್ತೀಯ! ಅದಕ್ಕಾಗಿಯೇ ಸುಭಾಷಿಣಿ ಅಂತಲೂ ನಿನಗೊಂದು ಹೆಸರಿದೆ ನನ್ನೊಳಗೆ! ರಾತ್ರಿ ಇಡಿ ನಿದ್ರೆ ಮಾಡಲು ಬಿಡದೆ ಕಾಡಿದೆಯಲ್ಲೇ! ಬೆಳಿಗ್ಗೆ ಎದ್ದು ಆಫಿಸ್‌ಗೆ ಹೊರಟು ಬಸ್ ಹತ್ತಿದಾಗ ಏನಾಯಿತು ಗೊತ್ತೇನೆ? ಪಕ್ಕದ ಸೀಟಿನ ಟಿಕೇಟ್ ಕೂಡ ಮಾಡಿಸಿ ಬಿಟ್ಟಿದ್ದೆ. ಖಾಲಿ ಇದ್ದ ಆ ಸೀಟಿನ ಟಿಕೇಟ್ ಮಾಡಿಸಿದ ಮೇಲೆ ಅಂದು ಕೊಂಡೆ, ಇದು ಸಹನಾಳಿಗಾ ಎಂದು. ಅಲ್ವೇ ಹುಚ್ಚಿ ಈ ಪಾಟಿ ತಿಳಿಯದಷ್ಟು ಹಚ್ಚಿಕೊಂಡಿರುವೆನೋ ನಾ.. ನಿನ್ನ!
ಅಯ್ಯೋ ದೇವರೇ!ಅಸಲಿಗೆ ನಿನ್ನ ಹೆಸರೇ ಗೊತ್ತಿಲ್ಲದ ನಾನು, ಯಾವ ವಿಳಾಸಕ್ಕೆ ಈ ಪ್ರೇಮ ಪತ್ರಕಳುಹಿಸಲೇ….? ಒಲವಿನ ವಿಳಾಸದಲಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ. ಪತ್ರ ಬರದೆದವ ನಿನ್ನವ….