ಇತ್ತೀಚೆಗೆ ಹಣವುಳ್ಳವರು ತಮ್ಮ ಪ್ರತಿಷ್ಟೆಗಾಗಿ ಮಕ್ಕಳ ಮದುವೆಯನ್ನು ಭಾರೀ ಲಕ್ಸೂರಿಯಾಗಿ ಮಾಡುತ್ತಾರೆ. ಮದುವೆಯಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾರೆ. ಆದರೆ, ಮಹಾರಾಷ್ಟ್ರದ ಶ್ರೀಮಂತ ಉದ್ಯಮಿಯೊಬ್ಬರು ತಮ್ಮ ಮಗಳ ಮದುವೆಯನ್ನು ಸಿಂಪಲ್ ಆಗಿ ಮಾಡಿ, ಮದುವೆಗೆಂದು ಇಟ್ಟಿದ್ದ ಹಣವನ್ನು ಬಡವರಿಗೆ ಮನೆಗಳನ್ನು ಕಟ್ಟಿಸಿ ಔದಾರ್ಯ ಮೆರೆದಿದ್ದಾರೆ.
ಮನೋಜ್ ಮುನೋತ್. ಮಹಾರಾಷ್ಟ್ರದ ಔರಾಂಗಬಾದ್ನ ದೊಡ್ಡ ಉದ್ಯಮಿ. ಇವರಿಗೆ ದುಡ್ಡಿಗೇನು ಕೊರತೆ ಇಲ್ಲ. ಮಗಳ ಮದುವೆಯನ್ನು ತಮಗೆ ಇಷ್ಟ ಬಂದಂತೆ ಮಾಡಬಹುದಿತ್ತು.
ನೋಡಿ, ಆದ್ರೆ ಮನೋಜ್ ಮುನೋತ್ ಅವರು, ಮಗಳ ಮದುವೆಯನ್ನು ಸಿಂಪಲ್ ಆಗಿ ಮಾಡಿ ಮುಗಿಸಿದ್ರು. ಮದುವೆ ಖರ್ಚಿಗೆ ಇಟ್ಟಿದ್ದ ಹಣದಲ್ಲಿ 90 ಮನೆಗಳನ್ನು ಕಟ್ಟಿ ಮನೆ ಇಲ್ಲದವರಿಗೆ ಮನೆ ಕೊಟ್ಟು ಕಲಿಯುಗದ ಕರ್ಣ ಅಂತ ಎನಿಸಿಕೊಂಡಿದ್ದಾರೆ.
ಮನೋಜ್ ಮಗಳ ಮದುವೆಗಾಗಿ ಸುಮಾರು 70 ರಿಂದ 80 ಲಕ್ಷ ರೂಪಾಯಿ ಖರ್ಚು ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಈ ಉದ್ಯಮಿಗೆ ಸ್ಥಳೀಯ ಶಾಸಕರೊಬ್ಬರು ಮಾದರಿ ಆಗಿದ್ದಾರೆ. ಶಾಸಕರ ಮಾತಿನಿಂದ ಸ್ಫೂರ್ತಿಗೊಂಡ ಮನೋಜ್ ಬಡವರಿಗೆ ಮನೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ.
ಉದ್ಯಮಿ ಮನೋಜ್ ಅವರು ಕಟ್ಟಿಸಿಕೊಟ್ಟಿರುವ ಮನೆಗಳಲ್ಲಿ ನೆಲೆಕಂಡಿರುವ ಬಡವರು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಬಹುತೇಕರು ಕೂಲಿ ಕೆಲಸ ಮಾಡಿಕೊಂಡಿದ್ದು, ಈಗ ಬಾಡಿಗೆ ಕಟ್ಟುವ ಚಿಂತೆ ಇಲ್ಲ. ನೀರು ಮತ್ತು ವಿದ್ಯುತ್ ಬಗ್ಗೆಯೂ ಚಿಂತೆ ಇಲ್ಲ. ತಮ್ಮ ಒತ್ತಡಗಳೆಲ್ಲವೂ ಮನೋಜ್ ನೀಡಿರುವ ಮನೆಯಿಂದಾಗಿ ದೂರವಾಗಿದೆ ಎನ್ನುತ್ತಾರೆ ಬಡವರು.
ದೊಡ್ಡ ಮನಸ್ಸಿನ ಉದ್ಯಮಿ ಮನೋಜ್ ನೀಡಿರುವ ಮನೆಗಳ ಪೈಕಿ ಸುಮಾರು 40 ಮನೆಗಳಲ್ಲಿ ಹಲವು ಮಂದಿ ವಾಸವಾಗಿದ್ದಾರೆ. ಮನೋಜ್ ಕೆಲಸದಿಂದಾಗಿ ಮಗಳು ಶ್ರೇಯಾ ಕೂಡ ಖುಷಿಯಾಗಿದ್ದಾರೆ. ತನ್ನ ಅಪ್ಪ ತಮಗೆ ಅದ್ಭುತ ಉಡುಗೊರೆಯನ್ನೇ ನೀಡಿದ್ದಾರೆ ಅಂತ ಖುಷಿಯಿಂದ ಹೇಳುತ್ತಾರೆ.
ಕಳೆದ ವರ್ಷ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ, ಬೆಂಗಳೂರಿನಲ್ಲಿ ತಮ್ಮ ಮಗಳ ಮದುವೆಗೆ ಮಾಡಿದ ಖರ್ಚು ಟೀಕೆಗೆ ಗುರಿಯಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರಿಯ ವಿವಾಹವೂ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಆದ್ರೆ ಔರಾಂಗಾಬಾದ್ನ ಉದ್ಯಮಿ ಮನೋಜ್ ಅವರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.