18 ವರ್ಷಗಳ ಹಿಂದೆ 13-12-2001 ರಂದು ಲಷ್ಕರ್-ಏ-ತೊಯ್ಬಾ ಮತ್ತು ಜೈಷ್-ಏ-ಮೊಹಮ್ಮದ್ ಎಂಬ ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿ ಸಂಘಟನೆಗಳು ಮಾಸ್ಟರ್ ಮೈಂಡ್ ಅಫ್ಜಲ್ ಗುರು ನೇತೃತ್ವದಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ದೇಗುಲ ಅಂತ ಕರೆಯುವ ಸಂಸತ್ತಿನ ಮೇಲೆ ದಾಳಿ ಮಾಡಿದ್ದರು.
ಸಂಸತ್ತಿನ ಪ್ರಮುಖ “ಗೇಟ್ ನಂಬರ್ ಒನ್ ಮೂಲಕ ಸಂಸತ್ತೇ ಛಿದ್ರವಾಗುವಷ್ಟು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸೂಸೈಡ್ ಬಾಂಬರ್ ಉಗ್ರರು ಅಂಬಾಸಿಡರ್ ಕಾರಿನಲ್ಲಿ ಸಂಸತ್ತನ್ನ ಪ್ರವೇಶಿಸುವುದಕ್ಕೆ ಪ್ರಯತ್ನಪಟ್ಟಿದ್ದರು.
ಉಗ್ರರು ಬರುವುದನ್ನು ನೋಡಿದ ಧೀರ ಮಹಿಳೆ ‘ಕಮಲೇಶ್ ಕುಮಾರಿ ಯಾದವ್’ ಓಡಿ ಹೋಗಿ ಗೇಟ್ ನಂಬರ್ 1ನ್ನು ಮುಚ್ಚಿ ಉಗ್ರರು ಬಂದಿದ್ದಾರೆ ಎಲ್ಲರೂ ಎಚ್ಚೆತ್ತುಕೊಳ್ಳಿ ಅಂತ ಅಲ್ಲಿನ ಭದ್ರತಾ ಸಿಬ್ಬಂದಿಗೆ ಕರೆ ನೀಡುವ ಮೂಲಕ ಉಗ್ರರ ಪ್ರಥಮ ಗುಂಡಿಗೆ ಎದೆಕೊಟ್ಟು ವೀರ ಮರಣವನ್ನಪ್ಪಿದರು. ಆಕೆಗೆ ಗುಂಡಿಟ್ಟ ಉಗ್ರರು ಬರೋಬ್ಬರಿ ಹನ್ನೊಂದು ಗುಂಡುಗಳನ್ನ ಆಕೆಯ ದೇಹಕ್ಕೆ ಹೊಕ್ಕಿಸಿಬಿಟ್ಟಿದ್ದರು.
ಸಿ.ಆರ್.ಪಿ.ಎಫ್ ನ ಜೊತೆ ಕಾನ್ ಸ್ಟೇಬಲ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಆ ಧೀರ ಮಹಿಳೆ ಒಂದು ವೇಳೆ ಉಗ್ರರ ಪ್ರಥಮ ಗುಂಡಿಗೆ ಎದೆ ಒಡ್ಡದೇ ಇರುತ್ತಿದ್ದರೆ ಸೂಸೈಡ್ ಬಾಂಬರ್ ಗಳು ಸಂಸತ್ತನ್ನು ಪ್ರವೇಶಿಸುವ ಮೂಲಕ ಇಡೀ ಸಂಸತ್ತನ್ನೇ ಛಿದ್ರ ಛಿದ್ರವಾಗಿಮಾಡುತ್ತಿದ್ದರು.
ಇನ್ನು ಭವ್ಯ ಭವನ ಸಂಸತ್ ಸಂರಕ್ಷಿಸಿದ ಸಂರಕ್ಷಕಿ ಕಮಲೇಶ್ ಕುಮಾರಿ ಯಾದವ್ ಮೂಲತಃ ಉತ್ತರಪ್ರದೇಶನ ಸಿಕಂದರ್ ಮೂಲದವರು. ರಾಣಿ ಲಕ್ಷ್ಮೀಬಾಯಿ ಝೇಂಕರಿಸಿದ್ದ ಹಾಗೆಯೇ ಕಮಲೇಶ್ ಕುಮಾರಿ ಕೂಡ “ಮೇರಿ ಸಂಸತ್ ನಹಿ ದೂಂಗಿ ಎಂದು ಆ ಉಗ್ರರರೊಂದಿಗೆ ಹೋರಾಡಿ ಹುತಾತ್ಮಳಾಗಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಓಬವ್ವ ಹುಟ್ಟಿದ ಈ ಪುಣ್ಯಭೂಮಿಯಲ್ಲಿ ಮತ್ತೆ ಕೆಚ್ಚೆದೆಯ ವೀರ ಮಹಿಳೆಯರು ಹುಟ್ಟುತ್ತಾರೆಂದು ಸಾಬೀತು ಮಾಡಿದರು.
ಕಮಲೇಶ್ ಕುಮಾರಿ ಅವರನ್ನ “ಆಧುನಿಕ ಭಾರತದ ಝಾನ್ಸಿ ಎಂದು ಕರೆದರೆ ಅತಿಶಯೋಕ್ತಿ ಆಗಲಾರದು. ಈ ದಾಳಿಯ ತೀವ್ರತೆಯನ್ನು ತಡೆದ ಕಮಲೇಶ್ ಕುಮಾರಿ ಯಾದವ್ ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ‘ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ದೇಶವನ್ನು ರಕ್ಷಿಸಬೇಕೆನ್ನುವ ಕಮಲೇಶ್ ಯಾದವ್ ಅವರ ಸೇವಾ ತತ್ಪರತೆ ಇತರೆ ಅಧಿಕಾರಿಗಳಲ್ಲದೆ ಇಡೀ ದೇಶಕ್ಕೆ ಆದರ್ಶಪ್ರಾಯವಾಗಿದೆ.