ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ 12, 15 ಮತ್ತು 18ರಂದು ಭಾರತದಲ್ಲಿ ನಡೆಯಲಿದೆ. ಕನ್ನಡಿಗ ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದೆ.
ಗಾಯಗೊಂಡಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡ ಕೂಡಿಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ರೋಹಿತ್ ಶರ್ಮಾ ತಂಡದಿಂದ ದೂರ ಉಳಿದಿದ್ದಾರೆ. ಇನ್ನು ಸತತ ವೈಫಲ್ಯದ ಹೊರತಾಗಿಯೂ ಯುವ ಆಟಗಾರ ರಿಷಭ್ ಪಂತ್ ಅವರನ್ನು ತಂಡಕ್ಕೆ ಕೂಡಿಸಿಕೊಳ್ಳಲಾಗಿದೆ.
ಆದರೆ ಆಡುವ 11ರ ಬಳಗದಲ್ಲಿ ಕೊಹ್ಲಿ ಮತ್ತು ತಂಡದ ಮ್ಯಾನೇಜ್ಮೆಂಟ್ ಪಂತ್ ಅವರನ್ನು ಆಡಿಸುವ ಮನಸ್ಸು ಮಾಡುತ್ತದೋ ಎಂಬುದು ಸದ್ಯದ ಪ್ರಶ್ನೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಕರೆಯಲ್ಪಡುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ವಿಕೆಟ್ ಕೀಪಿಂಗ್ ಹೊಣೆಯನ್ನೂ ವಹಿಸುವ ಸಾಧ್ಯತೆ ಇದೆ.
ಆಗ ಪಂತ್ ಗಿಂಥಾ ಉತ್ತಮ ಫಾರ್ಮ್ನಲ್ಲಿರುವ ಮತ್ತೊಬ್ಬ ಬ್ಯಾಟ್ಸ್ಮನ್ ಅನ್ನು ತಂಡಕ್ಕೆ ಕೂಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಇಲ್ಲವೇ ಇಬ್ಬರು ಆಲ್ರೌಂಡರ್ಗೆ ಮಣೆ ಹಾಕಬಹುದು.
ನ್ಯೂಜಿಲೆಂಡ್ ಮತ್ತು ಆಸೀಸ್ ವಿರುದ್ಧದ ಟೂರ್ನಿಯಲ್ಲಿ ರಾಹುಲ್ ಕೀಪರ್ ಆಗಿಯೂ ಕ್ಲಿಕ್ ಆಗಿದ್ದರು. ಹೀಗಾಗಿ ನಾಯಕ ಕೊಹ್ಲಿ ರಾಹುಲ್ ಅವರನ್ನೇ ಮುಂದುವರೆಸಿದರೆ ಅಚ್ಚರಿ ಇಲ್ಲ.
ದ ಆಫ್ರಿಕಾ ವಿರುದ್ಧದ ಒಡಿಐಗೆ ಟೀಮ್ ಇಂಡಿಯಾ :
ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್ಮನ್ ಗಿಲ್.