ಮಹೇಂದ್ರ ಸಿಂಗ್ ಧೋನಿ…ಭಾರತಕ್ಕೆ 2007 ರ ಟಿ20 ಮತ್ತು 2011 ರ ಏಕದಿನ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ನಾಯಕ. ಭಾರತ ಮಾತ್ರವಲ್ಲದೆ ಇಡೀ ವಿಶ್ವಕ್ರಿಕೆಟ್ ಕಂಡ ಅದ್ಭುತ ಕ್ಯಾಪ್ಟನ್, ವಿಕೆಟ್ ಕೀಪರ್, ಬ್ಯಾಟ್ಸ್ ಮನ್…ಮತ್ತು ವರ್ಲ್ಡ್ ಕ್ರಿಕೆಟಿನ ಬೆಸ್ಟ್ ಫಿನಿಶರ್…
ವಿಶ್ವಕ್ರಿಕೆಟ್ ನಲ್ಲಿ ಚಾಣಾಕ್ಷ ಯಾರು ಎಂದು ಯಾರನ್ನೇ ಕೇಳಿದರೂ ಹಿಂದು – ಮುಂದು ಯೋಚನೆ ಮಾಡದೆ ಥಟ್ ಅಂತ ಹೇಳುವ ಹೆಸರು ಇದೇ ಮಹೇಂದ್ರ ಸಿಂಗ್ ಧೋನಿ ಎಂಬ ಕ್ರಿಕೆಟ್ ಸಾಮ್ರಾಟನದ್ದು..!
ತತ್ ಕ್ಷಣದಲ್ಲಿ ಆಯಾ ಕ್ಷಣಕ್ಕೆ ತಕ್ಕಂತೆ ಧೋನಿ ತೆಗೆದುಕೊಳ್ಳುವ ನಿರ್ಧಾರಗಳು ಗಮನಾರ್ಹ… ಅಚ್ಚರಿ..ಎಲ್ಲರ ಹುಬ್ಬೇರುವಂತೆ ಮಾಡುವ ನಿರ್ಧಾರಗಳು….ನಾಯಕನಾಗಿ ಧೋನಿ ತೆಗೆದುಕೊಳ್ಳುತ್ತಿದ್ದ ಎಷ್ಟೋ ನಿರ್ಧಾರಗಳು ಯಾರು…ಯಾರೆಂದರೆ ಯಾರ ಊಹೆಗೂ ನಿಲುಕದ ತೀರ್ಮನಗಳು…ಅಂಥಾ ಲೆಕ್ಕವಿಲ್ಲದಷ್ಟು ನಿರ್ಧಾರಗಳಿವೆ..ಅವುಗಳಲ್ಲಿ ಅತ್ಯಂತ ಪ್ರಮುಖ ಎನಿಸಿದ ನಾಲ್ಕೇ ನಾಲ್ಕು ನಿರ್ಧಾರಗಳು ಇಲ್ಲಿವೆ…ಮುಂದಕ್ಕೆ ಓದಿ…
2007 ರ ಟಿ20 ವರ್ಲ್ಡ್ ಕಪ್ ಫೈನಲ್ ಓವರ್ :
2007 ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ನಲ್ಲಿ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿತ್ತು. ಅದಕ್ಕೂ ಮೊದಲು ನಡೆದಿದ್ದ ಏಕದಿನ ವಿಶ್ವಕಪ್ ನಲ್ಲಿ ಭಾರತ ಯಾರೂ ಊಹಿಸದ ರೀತಿಯಲ್ಲಿ ಮುಖಭಂಗ ಅನುಭವಿಸಿತ್ತು. ಹಾಗಾಗಿ ಹೊಸದೆನಿಸಿದ್ದ ಟಿ20 ವಿಶ್ವಕಪ್ ನಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ…ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿ ಭಾರತ ವಿಶ್ವಕಪ್ ಗೆ ಮುತ್ತಿಕ್ಕಿ ಇತಿಹಾಸ ಸೃಷ್ಟಿಸಿತ್ತು..! ಫೈನಲ್ ಪಂದ್ಯದಲ್ಲಿ ನಾಯಕ ಮಹೀಂದ್ರ ಸಿಂಗ್ ಧೋನಿ ಅಂತಿಮ ಓವರ್ ನಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿತ್ತು….
ಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ ಪಾಕಿಸ್ತಾನ. ಭಾರತ ನೀಡಿದ ಗುರಿ ಬೆನ್ನಟ್ಟಿದ ಪಾಕ್ ಕೊನೆಯ ಓವರ್ ಅಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತ್ತು. ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್ ನಲ್ಲಿದ್ದರು….ಕೊನೆಯ ಓವರ್ ನಲ್ಲಿ ಪಾಕ್ ಗೆ ಬೇಕಿತ್ತು 13 ರನ್ ಅವಶ್ಯಕತೆ ಇತ್ತು….
ಅನುಭವಿ ಹರ್ಭಜನ್ ಸಿಂಗ್ ಕೋಟ ಮುಗಿದಿರಲಿಲ್ಲ. ಹೀಗಾಗಿ ಧೋನಿ ಅವರನ್ನೇ ಬೌಲಿಂಗ್ ಮಾಡಲು ಹೇಳುತ್ತಾರೆಂದು ಭಾವಿಸಲಾಗಿತ್ತು…ಆದರೆ ಧೋನಿ ಯಾರೂ ಊಹಿಸದ ರೀತಿಯಲ್ಲಿ ಜೋಗಿಂದರ್ ಶರ್ಮಾ ಕೈಗೆ ಬಾಲಿತ್ತರು..! ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಹಿತ ರನ್ ನೀಡಿದ ಅವರು ಧೋನಿ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿದ್ದರು…ಆಗ ಬಹಶಃ ಎಲ್ಲರೂ ಧೋನಿಗೆ ಹಿಡಿಶಾಪ ಹಾಕಿದ್ದಿರಬಹುದು…ಆದರೆ ನೋಡು ನೋಡುತ್ತಿದ್ದಂತೆ ಪವಾಡ ನಡೆದು ಬಿಟ್ಟಿತ್ತು..! ಮುಂದಿನ ಬಾಲ್ ನಲ್ಲಿ ಜೋಗಿಂದರ್ ಶರ್ಮಾ ಪಾಕ್ ಕಪ್ತಾನ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದರು..ಎಸ್ ಶ್ರೀಶಾಂತ್ ಪಡೆದ ಕ್ಯಾಚ್ ಗೆ ಮಿಸ್ಬಾ ಪೆವಿಲಿಯನ್ ಸೇರುವುದರೊಂದಿಗೆ ಭಾರತ ಚೊಚ್ಚಲ ಟಿ20ವಿಶ್ವಕಪ್ ಎತ್ತಿಹಿಡಿದಿತ್ತು.
2011ರ ವಿಶ್ವಕಪ್ ನಲ್ಲೂ ಧೋನಿ ಅಚ್ಚರಿ ನಿರ್ಧಾರ :
2007 ರ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಬೌಲಿಂಗ್ ವಿಚಾರದಲ್ಲಿ ತೆಗೆದುಕೊಂಡಂತೆ…2011 ರ ವಿಶ್ವಕಪ್ ಫೈನಲ್ ನಲ್ಲಿ ಬ್ಯಾಟಿಂಗ್ ವಿಚಾರದಲ್ಲಿ ತೆಗೆದುಕೊಂಡರು…ಲಂಕಾ ವಿರುದ್ಧದ ಆ ಪಂದ್ಯದಲ್ಲಿ ಭಾರತ ಗೆಲ್ಲಲು 28.2 ಓವರ್ ಗಳಲ್ಲಿ 161 ರನ್ ಬೇಕಿದ್ದಾಗ ತಂಡದ ಮೂರು ವಿಕೆಟ್ ಹೋಗಿತ್ತು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಟೂರ್ನಿಯುದ್ಧಕ್ಕೂ ಅದ್ಭುತ ಫಾರ್ಮ್ ಮೂಲಕ ಕಮಾಲ್ ಮಾಡಿದ್ದ ಯುವರಾಜ್ ಸಿಂಗ್ ಅವರನ್ನು ಕಣಕ್ಕಿಳಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು..ಅವರೇ ಬರಬೇಕಿತ್ತು ಕೂಡ..! ಯುವಿ ಅಂಗಳಕ್ಕಿಳಿಯುವುದನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ಧೋನಿ ಸರ್ ಪ್ರೈಸ್ ನೀಡಿದ್ದರು..! ಯುವಿ ಬದಲು ನಾಯಕನಾದ ತಾನೇ ಆಡಲು ನಿರ್ಧರಿಸಿ ಮಹತ್ತರ ಸವಾಲು ಸ್ವೀಕರಿಸಿ ಬಂದ ಅವರು ಆರಂಭಿಕ ಗೌತಮ್ ಗಂಭೀರ್ ಜೊತೆ ಅದ್ಭುತ ಇನ್ನಿಂಗ್ ಕಟ್ಟಿದ್ದರು.ಅಜೇಯ 91 ರನ್ ಬಾರಿಸಿ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿ ತಮ್ಮ ನಿರ್ಧಾರವನ್ನೂ ಸಮರ್ಥಿಸಿಕೊಂಡಿದ್ದರು.
ರೊಟೇಷನ್ ಪದ್ಧತಿ : 2012 ರ ಏಕದಿನ ತ್ರಿಕೋನ ಸರಣಿಯಲ್ಲಿ ತೆಗೆದುಕೊಂಡ ರೊಟೇಷನ್ ಪದ್ಧತಿ ವಿವಾದಕ್ಕೆ ಕಾರಣವಾಗಿತ್ತು. ಆಸ್ಟ್ರೇಲಿಯಾ, ಶ್ರೀಲಂಕಾ ವಿರುದ್ಧದ ಆ ಸರಣಿಯಲ್ಲಿ ಅಗ್ರ ಮೂವರು ಆಟಗಾರರಿಗೆ ರೊಟೇಷನ್ ಪದ್ಧತಿ ಮಾಡಿದರು ಧೋನಿ. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಗೆ ರೊಟೇಷನ್ ಆಧಾರದಲ್ಲಿ ವಿಶ್ರಾಂತಿ ನೀಡಲು ಮುಂದಾಗಿದ್ದರು. ಈ ಪದ್ಧತಿಯಲ್ಲಿ ಧೋನಿ ವೈಫಲ್ಯ ಕಂಡರು. ಭಾರತ ಸರಣಿಯಲ್ಲಿ ಫೈನಲ್ ಪ್ರವೇಶಿಸದೆ ಹೊರಬಿತ್ತು. ಧೋನಿ ನಿರ್ಧಾರ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದ ಧೋನಿ, ಆಟಗಾರರು ಗಾಯಗೊಳ್ಳದಂತೆ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದರು. ನಿವೃತ್ತಿ ಬಳಿಕ ಗೌತಮ್ ಗಂಭೀರ್ ಧೋನಿಯ ಅಂದಿನ ನಿರ್ಧಾರ ಟೀಕಿಸಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.
ಡ್ಯಾಡ್ಸ್ ಆರ್ಮಿ : ಇನ್ನು ಧೋನಿ ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿಷೇಧ ಪೂರ್ಣಗೊಳಿಸಿ ಕಮ್ ಬ್ಯಾಕ್ ಮಾಡಿತ್ತು. ಆಗ ಹೊಸದಾಗಿ ತಂಡ ಆಯ್ಕೆ ಮಾಡಲಾಯಿತು. ಹಿರಿಯ ಆಟಗಾರರಿಗೆ ಮಣೆಹಾಕಲಾಗಿತ್ತು. ಕೆಲವರು ನಲವತ್ತರ ಆಸುಪಾಸಲ್ಲಿದ್ದರು. ಹೀಗಾಗಿ ತಂಡವನ್ನು ಡ್ಯಾಡ್ಸ್ ಆರ್ಮಿ ಎಂದು ಹಾಸ್ಯ ಮಾಡಲಾಗಿತ್ತು. ಆದರೆ ಹಿರಿಯ ಆಟಗಾರರ ತಂಡ ಚಾಂಪಿಯನ್ ಆಗಿತ್ತು…ಹೀಗೆ ಧೋನಿ ಇನ್ನೂ ಅನೇಕ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ.