ಭಾರತದ ಹಳ್ಳಿಗೆ ಬೆಳಕಾದ ಇಂಗ್ಲೆಂಡ್ ಮಹಿಳೆ!
ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಇನ್ನೂ ಭಾರತದ ಸಾವಿರಾರು ಹಳ್ಳಿಗಳು ಇನ್ನು ಬೆಳಕೇ ಕಂಡಿಲ್ಲ. ನಡೆದಾಡಲು ಸರಿಯಾದ ರಸ್ತೆ ಇಲ್ಲದೆ, ಬಸ್ ಸೌಲಭ್ಯವಿಲ್ಲದೆ, ಕುಡಿಯಲು ನೀರು ಇಲ್ಲದೆ, ರಾತ್ರಿಯಾದರೆ ವಿದ್ಯುತ್ ಬೆಳಕು ಸಹ ಇಲ್ಲದೆ ಬದುಕುತ್ತಿರುವ ಜನ ಇಂದಿನ ಕಾಲದಲ್ಲಿಯೂ ಇದ್ದಾರೆ ಎಂದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಇದೀಗ ಭಾರತ ವಿಶ್ವಮಟ್ಟದಲ್ಲಿ ಗುರುತ್ತಿಸಿಕೊಳ್ಳುತ್ತಿದೆ. ಆದ್ರೆ ಭಾರತದಲ್ಲಿರೋ ಸುಮಾರು 10,000ಕ್ಕೂ ಅಧಿಕ ಹಳ್ಳಿಗಳು ಇನ್ನೂ ಬೆಳಕು ಕಂಡಿಲ್ಲ. ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇನ್ನು ಕೆಲವು ಹಳ್ಳಿಗಳು ವಿದ್ಯುತ್ ಸಂಪರ್ಕ ಅದೃಷ್ಟ ಪಡೆದುಕೊಂಡಿದ್ರೂ ಪ್ರತಿದಿನವೂ ವಿದ್ಯುತ್ ಪಡೆಯುವ ಅದೃಷ್ಟವಿಲ್ಲ. ಆದ್ರೆ, ಈಗ ಈ ದುಃಸ್ಥಿತಿಯನ್ನು ಬದಲಿಸಲು ಇಂಗ್ಲೆಂಡ್ ನ ಇಂಪೀರಿಯಲ್ ಕಾಲೇಜ್ ನ ವಿದ್ಯಾರ್ಥಿನಿ ಕ್ಲಮೆಂಟಿನ್ ಚಂಬನ್, ಮುಂದೆ ಬಂದಿದ್ದಾರೆ.
ಇವ್ರು ಉತ್ತರ ಪ್ರದೇಶದ ಕುಗ್ರಾಮಗಳ ಮನೆಗೆ ಪವರ್ ಕಟ್ ಇಲ್ಲದಂತೆ ಪವರ್ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಶ್ರಮದಿಂದ ಈಗಾಗಲೇ ಸುಮಾರು 100 ಮನೆಗಳಿಗೆ ಈ ವಿದ್ಯುತ್ ಭಾಗ್ಯ ಸಿಕ್ಕಿದೆ.
ಊರ್ಜಾ ಸೋಶಿಯಲ್ ವೆಂಚರ್ ಸ್ಟಾರ್ಟ್ ಅಪ್ ಜೊತೆ ಕೈ ಜೋಡಿಸಿ ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಮಿನಿ ಸೋಲಾರ್ ಗ್ರಿಡ್ ಸ್ಥಾಪಿಸಿ, ಸುಮಾರು 1000 ಮನೆಗಳಿಗೆ ವಿದ್ಯುತ್ ಒದಗಿಸುವ ಸೌಲಭ್ಯವನ್ನು ಮಾಡುತ್ತಿದ್ದಾರೆ.
ವಿದ್ಯುತ್ ಹೊರತು ಪಡಿಸಿ ಸೋಲಾರ್ ಎನರ್ಜಿಯನ್ನು ಬಳಸಿಕೊಳ್ಳುವ ಬಗ್ಗೆಯೂ ಪ್ಲಾನ್ ಗಳು ನಡೆಯುತ್ತಿವೆ. ಸೋಲಾರ್ ಶಕ್ತಿಗೆ ಹೆಚ್ಚು ಮಾರ್ಕೆಟ್ ಕೂಡ ಸಿಗುತ್ತೆ. ಕಳೆದ ಮೂರು ವರ್ಷಗಳಲ್ಲಿ, ಭಾರತ ಸುಮಾರು 10,000 ಮೆಗಾವ್ಯಾಟ್ ಗಿಂತ ಅಧಿತ ವಿದ್ಯುತ್ ಅನ್ನು ಸೊಲಾರ್ ಮೂಲಕ ಉತ್ಪಾದಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರ ಪ್ರಮಾಣ ಸುಮಾರು 20,000 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ನಿಚ್ಚಳವಾಗಿದೆ.
ವಿದ್ಯುತ್ ಭಾಗ್ಯ ಪಡೆದ ಜನರ ಮುಖದಲ್ಲಿ ನಗು ಕಾಣುವುದೇ ಕ್ಲೆಮೆಂಟಿನ್ನವರಿಗೆ ಹೆಚ್ಚು ಸಂತಸ ತಂದುಕೊಡುತ್ತಂತೆ. ಈಗ ವಿದ್ಯುತ್ ಸಂಪರ್ಕದಿಂದಾಗಿ ಮಕ್ಕಳ ಓದು ಕೂಡ ಸುಗಮವಾಗುತ್ತಿದೆ. ಈ ಗ್ರಾಮಗಳಲ್ಲಿರುವ ಶಾಲೆಗಳಿಗೆ ನೀಡಿದ ವಿದ್ಯುತ್ ಸಂಪರ್ಕದಿಂದಾಗಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೇರಿದಂತೆ ಉತ್ತಮ ಶಿಕ್ಷಣ ಸಿಗುತ್ತಿದೆ.
ಉತ್ತರ ಪ್ರದೇಶದ ಹಲವು ಗ್ರಾಮಮಗಳಲ್ಲಿ ಕೃಷಿ ಮತ್ತು ಪಶುಸಂಗೋಪನೆಯೇ ಪ್ರಮುಖ ಜೀವನಾಧಾರ. ಸೊಲಾರ್ ಶಕ್ತಿಯ ಬಳಕೆಯಿಂದ ಗ್ರಾಮಗಳಲ್ಲಿ ಡಿಸೇಲ್ ಪಂಪ್ ಗಳ ಬಳಕೆ ಕಡಿಮೆಯಾಗಿದೆ. ಜನರು ಇಲ್ಲಿ ತನಕ ಡಿಸೇಲ್ ಪಂಪ್ ಗಳ ಮೂಲಕ ತಮ್ಮ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡ್ತಿದ್ರು. ಡಿಸೇಲ್ ದರ ಹೆಚ್ಚಾದಾಗ ಕೃಷಿಕರಿಗೂ ತೊಂದರೆಯಾಗ್ತಿತ್ತು. ಆದ್ರೆ ಈಗ ಆ ಸಮಸ್ಯೆಯನ್ನೆಲ್ಲಾ ಕ್ಲೆಮೆಂಟಿನ್ ದೂರ ಮಾಡಿದ್ದಾರೆ.
ಈಗಾಗಲೇ ಕ್ಲೆಮೆಂಟಿನ್ ಸಾಕಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಆದ್ರೆ ಇಷ್ಟಕ್ಕೇ ತೃಪ್ತರಾಗಿಲ್ಲ. ಸಾಧ್ಯವಾದಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಪಣ ತೊಟ್ಟಿದ್ದಾರೆ. ವಿದ್ಯುತ್ ಶಕ್ತಿಯ ಜೊತೆಗೆ ಸೊಲಾರ್ ಪ್ಲಾಂಟ್ ಗಳನ್ನು ಜೋಡಿಸಿ, ಗ್ರಾಮಗಳಲ್ಲಿ ಪವರ್ ಕಟ್ ಆಗದೇ ಇರುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ.
ಒಟ್ಟಿನಲ್ಲಿ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬವನ್ನು ಬೆಳಕಿಗೆ ತಂದಿದ್ದಾರೆ. ಇದೀಗ ಆ ಕುಟುಂಬಗಳು ಪ್ರತಿದಿನ ದೀಪಾವಳಿ ಹಬ್ಬ ಆಚರಿಸಿದಷ್ಟು ಸಂಭ್ರಮ ಪಡುತ್ತಿದ್ದಾರೆ. ಇಂಗ್ಲೆಂಡಿನ ಯುವತಿ ಭಾರತದಲ್ಲಿ ನಿಸ್ವಾರ್ಥ ಸೇವೆ ಮಾಡ್ತಿರೋದು ಶ್ಲಾಘನೀಯ.