ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?

Date:

ಕೋವಿಡ್ 19 ವೈರಸ್ ಹಾವಳಿಯಿಂದ ಇಡೀ ಜಗತ್ತೇ ಸ್ತಬ್ಧವಾದಂತಾಗಿದೆ. ಭಾರತದಲ್ಲಿ ಲಾಕ್‌ಡೌನ್ ಕಾರಣ ದೈನಂದಿನ ಚಟುವಟಿಕೆ, ಉದ್ಯಮ, ಮನರಂಜನೆ ಎಲ್ಲವಕ್ಕೂ ಬ್ರೇಕ್ ಬಿದ್ದಿತ್ತು. ಇದೀಗ ಮೇ 25 ರಿಂದ ಕನ್ನಡ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಸಿಗುವ ಲಕ್ಷಣಗಳಿವೆ. ಆದರೆ, ಇದೆಲ್ಲದರ ನಡುವಿನ ಬೆಳವಣಿಗೆಯಲ್ಲಿ ಕನ್ನಡ ವಾಹಿನಿಗಳಲ್ಲಿ ಹಿಂದಿ ಮೂಲದ ಕೆಲ ಜನಪ್ರಿಯ ಧಾರಾವಾಹಿಗಳು ಕನ್ನಡೀಕರಣಗೊಂಡು ಪ್ರಸಾರವಾಗಲಿವೆ. ಲಾಕ್‌ಡೌನ್ ಘೋಷಣೆ ಆಗಿ, ಧಾರಾವಾಹಿ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಆದೇಶ ಹೊರಬಿದ್ದ ತಕ್ಷಣವೇ ಕನ್ನಡ ಮನರಂಜನಾ ವಾಹಿನಿಗಳು ಧಾರಾವಾಹಿಗಳಿಗೆ ಪರ್ಯಾಯವಾಗಿ ಏನು ಪ್ರಸಾರ ಮಾಡಬೇಕು? ಹೇಗೆ ರೇಟಿಂಗ್ ಕಾಪಾಡಿಕೊಳ್ಳಬೇಕು? ಎಂದೆಲ್ಲಾ ಲೆಕ್ಕಾಚಾರ ಹಾಕಿದ್ದವು. ತಮ್ಮ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಜನ‌ ಮೆಚ್ಚಿದ ಹಳೆಯ ಧಾರಾವಾಹಿಗಳನ್ನೇ ಮರುಪ್ರಸಾರ ಮಾಡುವುದು, ಚಾಲ್ತಿಯಲ್ಲಿದ್ದ ಜನಪ್ರಿಯ ಧಾರಾವಾಹಿಗಳನ್ನೇ ಮೊದಲ ಕಂತಿನಿಂದ ಪ್ರಸಾರ ಮಾಡುವುದು, ಪ್ರಸಿದ್ಧ ರಿಯಾಲಿಟಿ ಶೋಗಳ ಹಳೆ ಸಂಚಿಕೆಗಳ ಮೊರೆ ಹೋಗುವುದು ಸೇರಿದಂತೆ ತಮ್ಮ ಬಳಿ ಇರುವ ಉತ್ತಮ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಕಲ ಪ್ರಯತ್ನಗಳನ್ನೂ ಮಾಡಿದವು. ಲಾಕ್‌ಡೌನ್ ನಂತರದ ವಾರಗಳ ಟಿ‌ಆರ್‌ಪಿ ಗಮನಿಸಿದರೆ ಜೀ ಕನ್ನಡ ಹೊರತುಪಡಿಸಿ ಉಳಿದೆಲ್ಲಾ ವಾಹಿನಿಗಳು ಸ್ಥಾನದಲ್ಲಿ ಅದಲುಬದಲಾಗಿವೆ. ಈ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ ಸ್ಟಾರ್ ಸುವರ್ಣ ವಾಹಿನಿ ಏಪ್ರಿಲ್ ಆರಂಭದಲ್ಲಿಯೇ “ಮಹಾಭಾರತ” ಧಾರಾವಾಹಿಯ ಪ್ರೊಮೋ ಬಿಡುಗಡೆ ಮಾಡುವ ಮೂಲಕ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿತ್ತು. ಆದರೆ, ಸ್ಟಾರ್ ನೆಟ್ವರ್ಕ್‌ನಲ್ಲಿಯೇ ಪ್ರಸಾರವಾಗಿದ್ದ ಹಿಂದಿ ಮೂಲದ ಮಹಾಭಾರತ ಧಾರಾವಾಹಿಯನ್ನು ಕನ್ನಡಕ್ಕೆ ತರುವಲ್ಲಿ ಕೆಲ ಅಡೆತಡೆಗಳು ಉಂಟಾದ ಕಾರಣ ಘೋಷಿಸಿದ ದಿನಾಂಕಕ್ಕೆ ಧಾರಾವಾಹಿ ಪ್ರಸಾರ ಮಾಡುವುದು ಸಾಧ್ಯವಾಗದೆ ವೀಕ್ಷಕರನ್ನು ನಿರಾಸೆಗೊಳಿಸಿತ್ತು. ವಾಹಿನಿಯ ಈ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಖಂಡಿಸಿದ್ದರು. ಈ ನಡುವೆ ಉದಯ ವಾಹಿನಿ ಡಬ್ಬಿಂಗ್ ಸಿನಿಮಾಗಳನ್ನು ಪ್ರಸಾರ ಮಾಡಿ ಉತ್ತಮ ರೇಟಿಂಗ್ ಪಡೆದಿದ್ದನ್ನು ಗಮನಿಸಿದ ವೀಕ್ಷಕರು “ಮಹಾಭಾರತ” ಧಾರಾವಾಹಿಯ ಪ್ರಸಾರಕ್ಕೆ ಮತ್ತಷ್ಟು ಒತ್ತಡ ಹೇರಿದರು. ಇದೀಗ ಲಾಕ್‌ಡೌನ್ ನಡುವಲ್ಲಿಯೇ ಸ್ಟಾರ್ ಸುವರ್ಣ ವಾಹಿನಿ “ಮಹಾಭಾರತ” ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡುವುದಾಗಿ ಹೊಸ ದಿನಾಂಕ ಪ್ರಕಟಿಸಿದೆ. ಅದರೊಟ್ಟಿಗೆ ಬೇರೆ ಭಾಷೆಯಲ್ಲಿ ನಿರ್ಮಾಣಗೊಂಡರೂ, ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ, ಕನ್ನಡ ನಟರನ್ನೊಳಗೊಂಡ ಕಾರಣಕ್ಕೆ ಕನ್ನಡಿಗರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಅತ್ಯಂತ ಜನಪ್ರಿಯ ಧಾರಾವಾಹಿ “ಮಾಲ್ಗುಡಿ ಡೇಸ್” ಕೂಡ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ. ಕನ್ನಡಿಗರ ಅಚ್ಚುಮೆಚ್ಚಿನ ನಟ, ನಿರ್ದೇಶಕ ಶಂಕರ್‌ನಾಗ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅತ್ಯಂತ ವಿಶಿಷ್ಟ ಧಾರಾವಾಹಿ “ಮಾಲ್ಗುಡಿ ಡೇಸ್” ಕನ್ನಡ ಭಾಷೆಯಲ್ಲಿ ಪ್ರಸಾರಗೊಳ್ಳಲಿರುವುದು ವೀಕ್ಷಕರಿಗೆ ಹಬ್ಬದೂಟದಂತಾಗಿದೆ. ಡಬ್ಬಿಂಗ್ ಕುರಿತು ಸಾಕಷ್ಟು ವಿರೋಧ ಇರುವ ನಡುವೆಯೂ ಈ ಧಾರಾವಾಹಿಗಳು ಪ್ರಸಾರಗೊಳ್ಳುತ್ತಿವೆ ಎಂಬುದು ಗಮನಾರ್ಹ.

ಈಗಾಗಲೇ ವಾಹಿನಿಗಳು ತಿಳಿಸಿರುವಂತೆ ಮೇ 11, ಸೋಮವಾರದಿಂದ ಈ ಎರಡೂ ಧಾರಾವಾಹಿಗಳು ಪ್ರಸಾರವಾಗಲಿವೆ. ರಾತ್ರಿ 8ಕ್ಕೆ ಸ್ಟಾರ್ ಸುವರ್ಣದಲ್ಲಿ ಮಹಾಭಾರತ, ರಾತ್ರಿ 9.30ಕ್ಕೆ ಜೀ ಕನ್ನಡದಲ್ಲಿ ಮಾಲ್ಗುಡಿ ಡೇಸ್ ಮೂಡಿಬರಲಿವೆ.

ಈ ಧಾರಾವಾಹಿಗಳಿಗೆ ವೀಕ್ಷಕರು ಹೇಗೆ ಸ್ಪಂದಿಸುತ್ತಾರೆ, ಉಳಿದ ವಾಹಿನಿಗಳು ಯಾವ ರೀತಿಯ ಪ್ರತಿತಂತ್ರ ಹೆಣೆಯುತ್ತಾವೆ ಎಂಬುದು ಸದ್ಯದ ಕುತೂಹಲ.

– ಆತ್ಮಾರಾಮ್

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...