ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸ್ವಾರ್ಥವನ್ನು ತೊರೆದು ಬೇರೆಯವರ ಏಳ್ಗೆಗಾಗಿ, ಅವರ ಸಹಾಯಕ್ಕಾಗಿ ದುಡಿಯುವ ಮಂದಿ ಸಿಗೋದು ತೀರಾ ವಿರಳ. ಆದ್ರೆ ಕೆಲವು ಮಂದಿಯ ಜೀವನ ಗಾಥೆ ಇತರರಿಗೆ ಸ್ಫೂರ್ತಿದಾಯಕವಾಗುತ್ತೆ. ಇಂತಹವರ ಮಧ್ಯದಲ್ಲಿ ಜನಸೇವೆಗಾಗಿಯೇ ಜನ್ಮ ತಾಳಿದ ದೇವತೆಯೇ ಸುಭಾಷಿಣಿ ಮಿಸ್ತ್ರಿ.
ಕಡು ಬಡತನದಲ್ಲಿ ಹುಟ್ಟಿದ ಇವ್ರು ಬದುಕಿನುದ್ದಕ್ಕೂ ನೂರಾರು ಸಂಕಷ್ಟಗಳನ್ನು ಎದುರಿಸಿ ಇಂದು ಸಾವಿರಾರು ಜನರಿಗೆ ಸಹಾಯ ಮಾಡ್ತಿದ್ದಾರೆ. ಸುಭಾಷಿಣಿ ಮಿಸ್ತ್ರಿಯರವರಿಗೆ 12ನೇ ವಯಸ್ಸಿಗೇ ಕೂಲಿ ಕಾರ್ಮಿಕನೊಂದಿಗೆ ಮದುವೆ ಮಾಡಿ ತಂದೆ ತಾಯಿ ತಮ್ಮ ಜವಾಬ್ದಾರಿ ಕಳೆದುಕೊಂಡ್ರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಸುಭಾಷಿಣಿ ಮಿಸ್ತ್ರಿಯವರ ಗಂಡ ಕಾಯಿಲೆ ಬೀಳ್ತಾರೆ. ಕೊಲ್ಕತ್ತಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡ್ತಾರೆ. ಆದ್ರೆ ಆ ಆಸ್ಪತ್ರೆಯಲ್ಲಿ ನರ್ಸ್ಗಳಿಗೆ ಮತ್ತು ಡಾಕ್ಟರ್ಗಳಿಗೆ ಕೈ ಬೆಚ್ಚಗೆ ಮಾಡಿದ್ರೆ ಮಾತ್ರ ರೋಗಿಗಳ ತಪಾಸಣೆ ಶುರುವಾಗ್ತಿತ್ತು. ಇಲ್ಲವಾದಲ್ಲಿ ರೋಗಿಗೂ ನಮಗೂ ಸಂಬಂಧನೇ ಇಲ್ಲದಂತೆ ವಾತಾವರಣ ಸೃಷ್ಟಿ ಮಾಡ್ತಿದ್ರು.
ಸಂಬಂಧಿಕರ ಬಳಿ, ಆಸ್ಪತ್ರೆಯಲ್ಲಿದ್ದವರಲ್ಲಿ ಅಂಗಲಾಚಿದರೂ ಒಂದು ನಯಾ ಪೈಸೆ ಕೂಡ ಸಿಗಲಿಲ್ಲ. ಕೊನೆಗೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಗಂಡನನ್ನೇ ಕಳೆದುಕೊಳ್ಳುವಂಥಾ ಸ್ಥಿತಿ ನಿರ್ಮಾಣವಾಯ್ತು. ಇದು ತನ್ನೊಬ್ಬ ಗಂಡನ ಕತೆಯಲ್ಲ, ಸಾವಿರಾರು ಅಮಾಯಕರು ತಮ್ಮದಲ್ಲದ ತಪ್ಪಿಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಬಡ ಜನರ ಪ್ರಾಣ ಉಳಿಸುವ, ಬಡ ರೋಗಿಗಳನ್ನು ಮನುಷ್ಯರಂತೆ ಕಾಣುವ ಒಂದು ಆಸ್ಪತ್ರೆ ತೆರೆಯಲೇಬೇಕೆಂದು ಅಂದೇ ಧೃಡ ನಿರ್ಧಾರ ಮಾಡಿದ್ರು. ತಮ್ಮ ನಾಲ್ಕು ಮಕ್ಕಳಲ್ಲಿ ನನ್ನ ಒಬ್ಬ ಮಗನನ್ನಾದರೂ ಡಾಕ್ಟರ್ ಮಾಡಲೇಬೇಕೆಂದು ಸುಭಾಷಿಣಿ ಪಣ ತೊಟ್ಟರು.
ಗಂಡ ತೀರಿ ಹೋದ ಮೇಲೆ ಮನೆ ಕೆಲಸ ಮಾಡ್ತಿದ್ರು. ತಿಂಗಳಿಗೆ ಕೇವಲ 200 ರೂ ಸಿಗ್ತಿತ್ತು ಅಷ್ಟೇ. ಮಕ್ಕಳ ವಿದ್ಯಾಭ್ಯಾಸ ಮತ್ತು ಹೊಟ್ಟೆ ಬಟ್ಟೆಗೆ ನೋಡಿಕೊಂಡು ಉಳಿತಾಯ ಮಾಡಿದ್ದ ಹಣದಿಂದ ತರಕಾರಿ ವ್ಯಾಪಾರ ಮಾಡಲು ಬಂಡವಾಳ ಹೂಡಿದ್ರು. ವ್ಯಾಪಾರದಿಂದ ದಿನಕ್ಕೆ 500 ಗಳಿಸೋ ಮಟ್ಟಿಗೆ ಬೆಳೆದ್ರು. ಪೋಸ್ಟಾಫಿಸ್ನಲ್ಲಿ ಖಾತೆ ತೆರೆದು ದುಡಿದ ಹಣವೆನ್ನೆಲ್ಲ ಜಮಾ ಮಾಡುತ್ತಾ ಬಂದ್ರು.
ಉಳಿತಾಯದ ಹಣದಿಂದ ಒಂದು ಎಕರೆ ಜಾಗದಲ್ಲಿ ಪುಟ್ಟ ಗುಡಿಸಲನ್ನು ಕಟ್ಟಿಕೊಂಡ್ರು. ಅದು ವಾಸ್ತವ್ಯಕ್ಕೆ ಮಾಡಿಕೊಳ್ಳಲಿಲ್ಲ ಕುಟುಂಬ ಗುಡಿಸಲಿನ ಹೊರಗಿದ್ದು ಅದನ್ನೆ ಆಸ್ಪತ್ರೆ ಮಾಡಿದ್ರು. ಈ ಆಸ್ಪತ್ರೆಗೆ ಸ್ವಯಂ ಪ್ರೇರಿತರಾಗಿ ವಾರಕ್ಕೆ ಕೆಲ ಗಂಟೆ ತಿಂಗಳಿಗೆ ಒಂದು ದಿನವಾದರೂ ವೈದರು ಉಚಿತವಾಗಿ ಬಂದು ಕೆಲಸ ಮಾಡುವಂತೆ ರಿಕ್ಷಾಕ್ಕೆ ಮೈಕ್ ಕಟ್ಟಿಕೊಂಡು ಹತ್ತಾರು ಊರುಗಳಲ್ಲಿ ಪ್ರಚಾರ ಮಾಡಿದ್ರು. ಡಾ. ರಘುಪತಿ ಚಟರ್ಜಿ ಎಂಬವವರು ದೊಡ್ಡ ಮನಸ್ಸು ಮಾಡಿ ಮುಂದೆ ಬಂದ್ರು. ಆಸ್ಪತ್ರೆ ಆರಂಭವಾದ ಮೊದಲ ವಾರದಲ್ಲಿ 252 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಹ್ಯೂಮಾನಿಟಿ ಹಾಸ್ಪಿಟಲ್ ಎಂದು ಆ ಗುಡಿಸಲಿಗೆ ಹೆಸರಿಡಲಾಯಿತು.
ನಂತ್ರ ಮೂರು ಎಕರೆ ಭೂಮಿಯಲ್ಲಿ ಸುಮಾರು ಒಂಬತ್ತು ಸಾವಿರ ಚದರ ಅಡಿ ವಿಸ್ತಾರದಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದ್ರು. ಆ ಆಸ್ಪತ್ರೆಯಲ್ಲಿ ಈಗ ನುರಿತ ವೈದ್ಯರಿದ್ದಾರೆ. ಆಧುನಿಕ ಉಪಕರಣಗಳಿವೆ, ಆಪರೇಶನ್ ಥಿಯೇಟರ್ಗಳಿವೆ, ಆಂಬ್ಯೂಲೆನ್ಸ್ ಸೇವೆಯೂ ಈ ಮಾನವೀಯತೆಯ ಆಸ್ಪತ್ರೆಯಲ್ಲಿದೆ. ಇಷ್ಟಾಗಿಯೂ ಇದು ಬಡವರ ಆಸ್ಪತ್ರೆಯಾಗಿಯೇ ಉಳಿದಿದೆ.
ಸಣ್ಣಪುಟ್ಟ ರೋಗಗಳಿಗೆ ಹತ್ತು ರೂಪಾಯಿ ಗಿಂತ ಹೆಚ್ಚು ಚಾರ್ಜ್ ಮಾಡುವುದಿಲ್ಲ. ಎಂತಹ ದೊಡ್ಡ ಕಾಯಿಲೆ ಇದ್ದರೂ ಶಸ್ತ್ರ ಚಿಕಿತ್ಸೆಗೆ 500 ರೂಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಬರೀ ಗ್ರಾಮದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆ ಮತ್ತು ಗ್ರಾಮಗಳಿಂದ ರೋಗಿಗಳು ಹ್ಯೂಮಾನಿಟಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಬರುವ ರೋಗಿಗಳನ್ನು ಅತಿಥಿಗಳಂತೆ ನೋಡಿಕೊಳ್ಳುತ್ತಾರೆ. ತೀರಾ ಬಡತನವನ್ನು ಅಥವಾ ಹಣವಿಲ್ಲದವರನ್ನು ಹಾಗೇ ಕಳುಹಿಸುವುದಿಲ್ಲ. ಉಚಿತ ಶಸ್ತ್ರ ಚಿಕಿತ್ಸೆ ನೀಡಿಯೇ ಕಳುಹಿಸುತ್ತಾರೆ.
ತಮ್ಮ ಕನಸು ನನಸಾದರೂ ಸುಭಾಷಿಣಿ ಮಿಸ್ತ್ರಿ ವಿರಮಿಸುವುದಿಲ್ಲ. ಆಸ್ಪತ್ರೆಯಲ್ಲಿ ಸದಾ ರೋಗಿಗಳ ಆರೋಗ್ಯ ವಿಚಾರಿಸುತ್ತಾರೆ. ಸಂಜೆಯ ನಂತರ ಇಂದಿಗೂ ಸಾಯಂಕಾಲವಾಗುತ್ತಿದ್ದಂತೆ ತರಕಾರಿ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಸಿಗುವ ನಾಲ್ಕು ಕಾಸನ್ನು ಆಸ್ಪತ್ರೆಗೆ ಕೊಡುತ್ತಾರೆ. ಈಕೆಯ ಜೊತೆಗೆ ದೊಡ್ಡ ಮಗಳು ಹಾಗೂ ಎರಡನೆ ಮಗ ತರಕಾರಿ ಅಂಗಡಿಯಲ್ಲಿ ಸಹಾಯಕರಾಗಿದ್ದಾರೆ. ಕೊನೆಯ ಮಗಳು ಇದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಾರೆಯಾಗಿ ಸುಭಾಷಿಣಿ ಮಿಸ್ತ್ರಿಯವರ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕವೇ ಸರಿ. ಇವರ ಕನಸ್ಸಿನಂತೆ ರೂಪಗೊಂಡ ಹ್ಯೂಮಾನಿಟಿ ಆಸ್ಪತ್ರೆ ಸದಾ ರೋಗಿಗಳಿಂದ ತುಂಬಿದ್ರೂ ವಿಸ್ಮಯವೆನ್ನಿಸುವ ಆತ್ಮೀಯತೆ ಶಾಂತ ವಾತಾವರಣ ಇಲ್ಲಿದೆ. ಸುಭಾಷಿಣಿ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.