ಸಫಾಯಿ ಕರ್ಮಚಾರಿಗಳು ಎಲ್ಲಿಯೂ ಅವರ ಕಷ್ಟ ಹೇಳಿಕೊಳ್ಳುವುದಿಲ್ಲ. ಹಾಗಾಗಿ ಜನರಿಗೆ ಗೊತ್ತೂ ಆಗುವುದಿಲ್ಲ. ಇನ್ನು ಈ ಮನುಷ್ಯರಿಗೆ ಹೆಸರೂ ಇರುವುದಿಲ್ಲ. ದೇಶದೆಲ್ಲೆಡೆ ಇವರನ್ನು ಭಂಗಿ, ತೋಟಿ, ಜಲಗಾರರು ಅನ್ನುತ್ತಾರೆ. ಅವರಿಗಾಗಿಯೇ ಬದುಕು ಸವೆಸುತ್ತಿದ್ದಾರೆ, ಅವರ ಬಗ್ಗೆ ನಿಮಗೇನಾದರೂ ಗೊತ್ತೆ?
ಹೌದು, ಅತ್ಯಂತ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡಾ ವಿಲ್ಸನ್ ಅವರು, ಸಫಾಯಿ ಕರ್ಮಚಾರಿಗಳ ಪರವಾಗಿ, ಅವರ ಹಕ್ಕುಗಳನ್ನು ಸಂರಕ್ಷಿಸುತ್ತಾ ವಿಲ್ಸನ್ ಆಂದೋಲನ ಮಾಡುತ್ತಿದ್ದಾರೆ. ಮಲ ಹೊರುವ ಪದ್ಧತಿ ಮತ್ತು ಜಾತಿ ಆಧಾರಿತ ವರ್ಗೀಕರಣ ಮಾಡಿ ಮೇಲು ಕೀಳೆಂಬ ಭೇದಭಾವ ತೋರುವ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ಈ ಆಂದೋಲದ ಧ್ಯೇಯ. ಅದಕ್ಕೆ ಮುನ್ನಡಿ ಬರೆದವರು ಬೇಜವಾಡಾ ವಿಲ್ಸನ್ ಅವರು.
ಬೇಜವಾಡಾ ವಿಲ್ಸನ್ ಅವರು ಹುಟ್ಟಿದ್ದು 1966ರಲ್ಲಿ. ಕರ್ನಾಟಕದ ಚಿನ್ನದೂರೆಂದು ಕರೆಯಲ್ಪಡುವ ಕೋಲಾರದ ಕೆ.ಜಿ.ಎಫ್ನಲ್ಲಿ ಅವರದು ದಲಿತ ಕುಟುಂಬದಲ್ಲಿ. ತಾಯಿ ತಂದೆ, ಅಣ್ಣ ಎಲ್ಲರೂ ಸಫಾಯಿ ಕರ್ಮಚಾರಿಗಳು. ಓದಿದ್ದು ಕೇವಲ 10ನೇ ಕ್ಲಾಸ್. ಮುಂದೆ ಬೇರೆ ಬೇರೆ ಓದಲು ಹೋದರೂ ಅದರಲ್ಲಿ ಯಾವುದನ್ನು ಪೂರ್ಣಗೊಳಿಸಿಲ್ಲ.
ಹುಟ್ಟು ಹೋರಾಟಗಾರ ಬೇಜವಾಡಾ ವಿಲ್ಸನ್ ಅವರು, 1986ರಲ್ಲಿ ಮಲ ಹೊರುವ ಪದ್ಧತಿಯ ವಿರುದ್ದ ಹೋರಾಟವನ್ನು ಆರಂಭಿಸಿದಾಗ ಅವರ ಮನೆಯಲ್ಲಿಯೇ ಇದಕ್ಕೆ ವಿರೋಧ ಎದುರಿಸಬೇಕಾಗಿ ಬಂತು. ಆದರೆ ಒಂದೇ ವರ್ಷದಲ್ಲಿ ಮನೆಯವರಿಗೆ ಈ ಹೋರಾಟದ ಬಗ್ಗೆ ಮನವರಿಕೆಯಾಗಿ ಅವರೂ ವಿಲ್ಸನ್ ಹೋರಾಟಕ್ಕೆ ಸಾಥ್ ನೀಡಿದರು.
ಕೋಲಾರದಲ್ಲಿ ಮಲಹೊರುವ ಪದ್ಧತಿ ಹಾಸುಹೊಕ್ಕಾಗಿದ್ದರೂ, ಯಾರೊಬ್ಬರೂ ಈ ಬಗ್ಗೆ ಮೌನ ಮುರಿದಿರಲಿಲ್ಲ. ಮಲಹೊರುವ ಪದ್ಧತಿ ಇದೆ ಎಂಬುದನ್ನೇ ಒಪ್ಪಲು ತಯಾರಾಗದೇ ಇದ್ದ ಕಾಲದಲ್ಲಿ ವಿಲ್ಸನ್ ಆ ಬಗ್ಗೆ ದನಿಯೆತ್ತಿದರು. ಈ ಬಗ್ಗೆ ಕೆಜಿಎಫ್ ಅಧಿಕಾರಿಗಳಿಗೆ, ರಾಜ್ಯ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ಪ್ರಧಾನ ಮಂತ್ರಿಗೆ ಮತ್ತು ಪತ್ರಿಕೆಗಳಿಗೆ ಪತ್ರ ಬರೆದು ಈ ಅನಿಷ್ಟ ಪದ್ಧತಿಯ ವಿರುದ್ಧ ಅಭಿಯಾನ ಆರಂಭಿಸಿದರು.
1993ರಲ್ಲಿ ಕೇಂದ್ರ ಸರಕಾರ ಮಲಹೊರುವ ಪದ್ದತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಈ ಪದ್ಧತಿ ಮುಂದುವರಿಯುತ್ತಲೇ ಇತ್ತು. ಹೀಗಿರುವಾಗ ಕೆಜಿಎಫ್ ನಲ್ಲಿ ಮಲಹೊರುವ ಕಾರ್ಮಿಕರ ಫೋಟೋ ತೆಗೆದು ವಿಲ್ಸನ್ ಅದನ್ನು ಅಧಿಕಾರಿಗಳಿಗೆ ಕಳಿಸಿಕೊಟ್ಟು, ಮಲಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದರು.
ಎರಡು ವರ್ಷಗಳ ಕಾಲ ಕರ್ನಾಟಕದಲ್ಲಿ ಮಲಹೊರುವ ಪದ್ಧತಿಯ ವಿರುದ್ಧ ಹೋರಾಡಿದ ವಿಲ್ಸನ್ ಆಮೇಲೆ ಆಂಧ್ರದಲ್ಲಿ ನೆಲೆಯೂರಿದರು. ಅಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪೌಲ್ ದಿವಾಕರ್, ಎಸ್ ಆರ್ ಶಂಕರ್ ಅವರ ಜತೆ ಸೇರಿದ ವಿಲ್ಸನ್ 1994ರಲ್ಲಿ ಸಫಾಯಿ ಕರ್ಮಚಾರಿ ಆಂದೋಲನಕ್ಕೆ ಚುಕ್ಕಾಣಿ ಹಿಡಿದರು.
ಆಮೇಲೆ, ರಾಷ್ಟ್ರಮಟ್ಟದ ಹೋರಾಟಗಾರರಾಗಿ ಬೆಳೆದರು. ವಿಲ್ಸನ್ ಅವರಿಗೆ ಸ್ವಂತ ಮನೆ, ಕುಟುಂಬ ಎಂಬುದಿಲ್ಲದೆ, ಸಫಾಯಿ ಕರ್ಮಚಾರಿಗಳೇ ನನ್ನ ಕುಟುಂಬ ಎಂದು ಅವರ ಪರವಾಗಿ ಹೋರಾಡಿಕೊಂಡು ಬಂದಿದ್ದಾರೆ. 1996ರಿಂದ 2018ವರೆಗೂ ಅಂದರೆ ಕಳೆದ ಮೂರು ದಶಕಗಳಿಂದಲೂ ಅವರ ಹೋರಾಟ ನಿಂತಿಲ್ಲ. ಅಷ್ಟೇ ಅಲ್ಲ, ವಿಲ್ಸನ್ ಅವರಿಗೆ, ಸುಪ್ರೀಂಕೋರ್ಟ್ನಲ್ಲಿ 12 ವರ್ಷ ನ್ಯಾಯಕ್ಕಾಗಿ ಅಲೆದಾಡಿದರೂ ನ್ಯಾಯ ಸಿಗಲಿಲ್ಲ. ಎಲ್ಲಾ ರಾಜ್ಯಗಳಲ್ಲಿ ಅಲ್ಲಲ್ಲಿರುವ ಜಿಲ್ಲಾಧಿಕಾರಿಗಳು ತಮ್ಮಲ್ಲಿ ಯಾರೂ ಮಲ ಹೊರುವವರು ಇಲ್ಲ ಎಂದು ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳಿದ್ದರು ಎನ್ನುವುದು ಬೇಜವಾಡ ವಿಲ್ಸನ್ ಅವರ ಆರೋಪ.
ಸಫಾರಿ ಕರ್ಮಚಾರಿಗಳ ಹೋರಾಟಕ್ಕೆ ಯಾವುದೇ ಸರ್ಕಾರ, ಕೋರ್ಟ್, ಐಎಎಸ್ ಆಫೀಸರ್ ಯಾರೂ ಸಹಕರಿಸಿಲ್ಲ. ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆಯೇ ಹೊರತೂ ನಾನೇ ಜವಾಬ್ದಾರಿ ಎಂದು ಸಮಸ್ಯೆ ಬಗೆಹರಿಸುವವ ಈ ದೇಶದಲ್ಲಿ ಒಬ್ಬನೇ ಒಬ್ಬ ನಾಯಕ ಇಲ್ಲ ಎನ್ನುವುದು ಬೇಜವಾಡ ವಿಲ್ಸನ್ ಅವರ ಕಡ್ಡಿ ತುಂಡಾದಂತ ಮಾತು.
ಸಫಾಯಿ ಕರ್ಮಚಾರಿಗಳ ಪರವಾದ ಆಂದೋಲನ ಇನ್ನೂ ಹೆಚ್ಚಾಗಬೇಕು. ಕೇವಲ ಸಫಾಯಿ ಕರ್ಮಚಾರಿಗಳಲ್ಲ, ಮನುಷ್ಯರಾದ ಎಲ್ಲರೂ ಮಲ ಹೊರುವ ಪದ್ಧತಿಯನ್ನು ತೆಗೆದುಹಾಕಲು ಹೋರಾಡಬೇಕು. ಇವರ ಕುರಿತು ಪಾಠಗಳನ್ನು ಮಕ್ಕಳಿಗೆ ಪಠ್ಯವನ್ನಾಗಿ ಮಾಡಬೇಕು ಎನ್ನುವುದು ಬೇಜವಾಡಾ ವಿಲ್ಸನ್ ಅವರ ವಾದ.
ಏನೇ ಹೇಳಿ, ಕಳೆದ ಮೂರು ದಶಕಗಳಿಂದ ಮಲ ವಿರುದ್ಧ ಪದ್ಧತಿಯ ವಿರುದ್ಧ ದೇಶಾದ್ಯಂತ ಹೋರಾಟವನ್ನು ಸಂಘಟಿಸಿ, ಅದಕ್ಕೆ ಅಂತ್ಯ ಕಾಣಿಸಲು ಹೆಣಕಾಡುತ್ತಿರುವ ಬೇಜವಾಡ ವಿಲ್ಸನ್ ಅವರ ಕಾಳಜಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ಬೇಜವಾಡ ವಿಲ್ಸನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ಅತ್ಯಂತ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿಯೂ ಸಂದಿದೆ. ಇವರ ಹೋರಾಟ ಪ್ರತಿಯೊಬ್ಬರಿಗೂ ಸ್ಫೂರ್ತಿ ಆಗಬೇಕು.. ಅಲ್ಲವೇ..!?